ಮಡಿಕೇರಿ, ಸೆ. 23: ಕೊಡಗಿನ ಕುಲದೇವಿ, ಜೀವನದಿ ಕಾವೇರಿಯ ತುಲಾ ಸಂಕ್ರಮಣ ಜಾತ್ರೆಗೆ, ಇದೇ ತಾ. 26 ರಂದು ಭಾಗಮಂಡಲ ಸನ್ನಿಧಿಯಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವದರೊಂದಿಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಬಳಿಕ ಅಕ್ಟೋಬರ್ 4 ರಂದು ತುಲಾ ಸಂಕ್ರಮಣ ಜಾತ್ರೆಯ ಸಲುವಾಗಿ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಬೆಳಿಗ್ಗೆ 10.33ಕ್ಕೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ ನಿಶ್ಚಯಗೊಳ್ಳಲಿದೆ. ಅಂದಿನಿಂದ ಕಾವೇರಿ ತೀರ್ಥೋದ್ಭವ ದಿವಸದವರೆಗೆ ಕೊಡಗಿನ ಸಮಸ್ತ ಜನತೆಗೆ ಈ ಕಟ್ಟುಕಟ್ಟಳೆ ಅನ್ವಯಿಸಲಿದೆ. ಅಂದು ಭಗಂಡೇಶ್ವರ ಸನ್ನಿಧಿಯಲ್ಲಿ ಬೆಳಿಗ್ಗೆ 10.33ಕ್ಕೆ ದೇವರಿಗೆ ಪ್ರಾರ್ಥನೆ ಬಳಿಕ ಮಂಗಲವಾದ್ಯದೊಂದಿಗೆ ಬಾಳೆಗೊನೆ ಕಡಿಯಲಾಗುತ್ತದೆ. ಅ. 4 ರಿಂದ 17ರ ತನಕ ಈ ಮುಹೂರ್ತ ವಿಧಿಯ ಪ್ರಕಾರ ಸನ್ನಿಧಿಯ ವಾಗ್ದಾನದಂತೆ; ಯಾವದೇ ಹಿಂಸೆ ನಿಷಿದ್ಧ. ಮಾತ್ರವಲ್ಲದೆ ಜಾತ್ರೆಯ ಅವಧಿಯಲ್ಲಿ ಜೀವಜಂತು ಹತ್ಯೆ, ಗುಂಡು ಹಾರಿಸುವದು, ಹಸಿಮರ (ಮೊದಲ ಪುಟದಿಂದ) ಕಡಿಯುವದು, ಪರರ ನಿಂದೆಗೈಯ್ಯುವದು, ಮಧು - ಮಾಂಸ ಸೇವನೆ ಇತ್ಯಾದಿ ನಿಷಿದ್ಧವೆಂದು ನಿಯಮವಿದೆ.ಬಳಿಕ ಅಕ್ಟೋಬರ್ 14 ರಂದು ಬೆಳಿಗ್ಗೆ 11.45ಕ್ಕೆ ಧನುರ್ಲಗ್ನದಲ್ಲಿ ಅಕ್ಷಯ ಪಾತ್ರೆಗೆ ಅಕ್ಕಿ ತುಂಬುವದರೊಂದಿಗೆ, ನಂದಾದೀಪ ಬೆಳಗಲಾಗುತ್ತದೆ. ಜಾತ್ರೆಗೆ ಆಗಮಿಸುವ ಸದ್ಭಕ್ತರಿಗೆ ಪ್ರಸಾದ ಇತ್ಯಾದಿಗೆ ಕೊರತೆ ಆಗದಂತೆ ಮುಂಜಾಗ್ರತೆ ವಹಿಸುವ ನಿಯಮ ಜಾರಿಗೊಳ್ಳಲಿದೆ. ಅಂದು ಸಂಜೆ ಪರಂಪರಾಗತವಾಗಿ ನಡೆದು ಬಂದಿರುವ ಪದ್ಧತಿಯಂತೆ ದೇವರಿಗೆ ಹರಕೆ - ಕಾಣಿಕೆ ಸಲ್ಲಿಸುವ ಸದ್ಭಕ್ತರಿಂದ ಅರ್ಪಣೆಗಾಗಿ ಭಂಡಾರ ಡಬ್ಬಿಗಳನ್ನು ಇರಿಸಲಾಗುತ್ತದೆ. ಮಾಮೂಲಿ ಭಂಡಾರ ಇರಿಸಿದ್ದರೂ, ಈ ಕಾಣಿಕೆ ಡಬ್ಬಿಗಳನ್ನು ಇಡುವದು ಸನ್ನಿಧಿಯ ಕಟ್ಟುಪಾಡುಗಳಲ್ಲಿ ಒಂದಾಗಿದೆ. ದುರ್ಗಾಪೂಜೆ ಹಾಗೂ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ನಿರ್ವಿಘ್ನವಾಗಿ ಜಾತ್ರೆ ನೆರವೇರುವಂತೆ ಪ್ರಾರ್ಥಿಸಲಾಗುತ್ತದೆ.
ಜಾತ್ರೆಯ ಕ್ರಮ : ಪ್ರತಿವರ್ಷದ ಪ್ರಕಾರ ಈ ವರ್ಷದ ತುಲಾ ಸಂಕ್ರಮಣ ಜಾತ್ರೆಯ ತೀರ್ಥೋದ್ಭವ ಮುಹೂರ್ತ ಅ. 17 ರಂದು ಬೆಳಿಗ್ಗೆ 7 ಗಂಟೆ 3 ನಿಮಿಷದ ಕನ್ಯಾಲಗ್ನದಲ್ಲಿ ನಿಶ್ಚಯವಾಗಿದೆ.
ಆಭರಣ ಒಯ್ಯುವುದು : ಈ ತೀರ್ಥೋದ್ಭವ ಮುಹೂರ್ತದ ಪರ್ವದಲ್ಲಿ ಭಾಗಮಂಡಲದಿಂದ ಕ್ಷೇತ್ರದ ತಕ್ಕಮುಖ್ಯಸ್ಥರು, ಆಡಳಿತ ಪ್ರಮುಖರು, ಸದ್ಭಕ್ತರು ತಲಕಾವೇರಿಯಲ್ಲಿ ಶ್ರೀ ಕಾವೇರಿ ಮಾತೆಗೆ ಜಾತ್ರೋತ್ಸವದ ಒಂದು ತಿಂಗಳು ಧರಿಸಲು ಆಭರಣಗಳನ್ನು ಮಂಗಲ ವಾದ್ಯದೊಂದಿಗೆ ಕೊಂಡೊಯ್ಯುತ್ತಾರೆ. ತಾಯಿ ಕಾವೇರಿಗೆ ಈ ಆಭರಣ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸುತ್ತಿದ್ದಂತೆಯೇ ಬ್ರಹ್ಮಕುಂಡಿಕೆಯಿಂದ ತೀರ್ಥೋದ್ಭವವಾಗುವದು ವಾಡಿಕೆ.
ಭಗವಂತನಿಗೆ ಅಭಿಷೇಕ : ಶ್ರೀ ಕಾವೇರಿಯ ತೀರ್ಥೋದ್ಭವದ ಮರುಗಳಿಗೆ ಬೆಳ್ಳಿಕೊಡದಲ್ಲಿ ತುಂಬಿದ ಪವಿತ್ರ ಜಲವನ್ನು ಕ್ಷೇತ್ರದ ದೇವರಿಗೆ ಪ್ರಥಮ ಅಭಿಷೇಕದೊಂದಿಗೆ, ಶ್ರೀ ಭಗಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ಕ್ಷೇತ್ರಕ್ಕೆ ಆಗಮಿಸುವ ಗಣ್ಯರು, ಸದ್ಭಕ್ತರಿಗೆ ಪ್ರೋಕ್ಷಣೆ ಮಾಡಲಾಗುತ್ತದೆ.
ತಕ್ಕರಿಗೆ ಜವಾಬ್ದಾರಿ: ರಾಜಪರಂಪರೆಯಂತೆ ತುಲಾ ಸಂಕ್ರಮಣದೊಂದಿಗೆ ವರ್ಷವಿಡೀ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ದೇವತಾ ಕೈಂಕರ್ಯಗಳನ್ನು ಕ್ಷೇತ್ರ ಪುರೋಹಿತರು, ಉಭಯಕಡೆ ತಕ್ಕ ಮುಖ್ಯಸ್ಥರ ನೇತೃತ್ವದಲ್ಲಿ ಅಲ್ಲಿನ ವ್ಯವಸ್ಥಾಪನಾ ಸಮಿತಿ, ಜಿಲ್ಲಾಡಳಿತ, ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸುವದು ಪದ್ಧತಿ. ಈ ಎಲ್ಲಾ ಪರ್ವಕಾಲ ಕೋಡಿ ಕುಟುಂಬದ ತಕ್ಕರು ತಲಕಾವೇರಿಯಲ್ಲಿ ಹಾಗೂ ಬಳ್ಳಡ್ಕ ಕುಟುಂಬ ತಕ್ಕರು ಭಾಗಮಂಡಲದಲ್ಲಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ರಕ್ಷಣೆಯ ಹೊಣೆ : ತಲಕಾವೇರಿಯಲ್ಲಿ ವಿಶೇಷವಾಗಿ ಕಾವೇರಿ ಸನ್ನಿಧಿಯಲ್ಲಿ ಆಭರಣ ಧಾರಣೆಯ ಪ್ರಥಮ ದಿನದಿಂದ, ಮುಂದಿನ ಒಂದು ತಿಂಗಳು (ಕಿರು ಸಂಕ್ರಮಣ) ಜಾತ್ರಾ ಮುಕ್ತಾಯದ ತನಕವೂ ಈ ಭಂಡಾರ ಹಾಗೂ ಆಭರಣಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಹೊಣೆಗಾರಿಕೆ ಕೋಡಿ ಕುಟುಂಬದ ತಕ್ಕರಿಗೆ ಸಲ್ಲುತ್ತದೆ.
ಈ ತಕ್ಕರಿಗೆ (ಪ್ರಸ್ತುತ ಕೋಡಿ ಮೋಟಯ್ಯ) ರಕ್ಷಣೆಗಾಗಿ ರಾಜರು ನೀಡಿರುವ ‘ಪಾರಕತ್ತಿ’ ಇಂದಿಗೂ ಸಾಕ್ಷಿಯಿದ್ದು, ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಜಿಲ್ಲಾಡಳಿತ ಕ್ಷೇತ್ರದಲ್ಲಿ ತಕ್ಕರೊಂದಿಗೆ ನಾಲ್ವರು ಶಸ್ತ್ರಧಾರಿ ಪೊಲೀಸರನ್ನು ನಿಯೋಜಿಸುತ್ತದೆ. ಸುಮಾರು ನವೆಂಬರ್ 16 ಅಥವಾ 17ಕ್ಕೆ ಸಂಭವಿಸುವ ವೃಶ್ಚಿಕ ಸಂಕ್ರಮಣದ ತನಕ ಈ ಕಟ್ಟುಪಾಡು ಸಾಗಲಿದೆ.
ಬಳಿಕ ತಲಕಾವೇರಿಯಲ್ಲಿ ಕೊಡಗು ಸೀಮೆ ತಂತ್ರಿಗಳಿಂದ ಶುದ್ಧಿಕಾರ್ಯ ಹಾಗೂ ಪುಣ್ಯಕಲಶದೊಂದಿಗೆ ತುಲಾ ಸಂಕ್ರಮಣ ಜಾತ್ರೆಗೆ ತೆರೆ ಬೀಳಲಿದೆ. ಶುಭ ಮುಹೂರ್ತದಲ್ಲಿ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಪ್ರಮುಖರು ಭಂಡಾರ ಸಹಿತ ಕಾವೇರಿ ಮಾತೆಯ ಆಭರಣಗಳನ್ನು ಭಾಗಮಂಡಲಕ್ಕೆ ಹಿಂತಿರುಗಿಸಿ ಅಲ್ಲಿ ಪ್ರಮುಖರ ಸಮಕ್ಷಮ (ಬಳ್ಳಡ್ಕ ಕುಟುಂಬ ತಕ್ಕರು ಪ್ರಸ್ತುತ ಬಳ್ಳಡ್ಕ ಅಪ್ಪಾಜಿ) ಭದ್ರಪಡಿಸಿ ಇರಿಸುವದು ಸಂಪ್ರದಾಯ.