ಕಣಿವೆ, ಸೆ. 23 : ಪೆÇಲೀಸ್ ಠಾಣೆಯೊಂದರ ಬಳಿಯ ಹೆದ್ದಾರಿಯಲ್ಲಿ ಎಮ್ಮೆಗಳ ಹಿಂಡೊಂದು ಬುಧವಾರ ಕಂಡು ಬಂದ ಚಿತ್ರಣಕ್ಕೆ ಹೀಗೂ ಧ್ವನಿ ಗೂಡಿಸಬಹುದೇ....! ನಾವು ಯಾರ ತಂಟೆಗೂ ಹೋಗುವವರಲ್ಲ. ನಮ್ಮಷ್ಟಕ್ಕೆ ನಾವು ಇರುವವರು. ನಮಗೆ ಸಿಕ್ಕ ಹುಲ್ಲು, ಸೊಪ್ಪು- ಸೆದೆಗಳನ್ನು ತಿಂದುಂಡು ನಾವು ನಿತ್ಯವೂ ಮಾನವರಿಗೆ ಹಾಲು ಕೊಡುವವರು. ಅಲ್ಲದೇ ನಮಗೆ ಆಶ್ರಯ ಕೊಟ್ಟ ರೈತಾಪಿಗಳ ಹೊಲ ಗದ್ದೆಗಳಿಗೆ ಸಗಣಿ ರೂಪದಲ್ಲಿ ಗೊಬ್ಬರ ಕೊಟ್ಟು ಹುಲುಸಾದ ಬೆಳೆ ಬೆಳೆಯಲು ನೆರವಾಗುವವರು.
ಆದರೆ ನಮಗೂ ಕೂಡ ಒಂದಷ್ಟು ಗಾತ್ರದ ಹೊಟ್ಟೆ ಇದೆಯಲ್ಲವೇ...? ನಮಗೂ ಆಹಾರ ಬೇಕಲ್ಲವೇ ? ಹಿಂದೆ ವಿಶಾಲವಾದ ಹುಲ್ಲುಗಾವಲು ಗಳಾಗಿದ್ದ ಬಾಣೆ, ಊರೊಕ್ಕಲು, ಪೈಸಾರಿ ಮೊದಲಾದ ಹುಲ್ಲು ಬೆಳೆವ ಜಾಗಗಳನ್ನು ಆಕ್ರಮಿಸಿ ಬಡಾವಣೆಗಳಾಗಿ ಪರಿವರ್ತಿಸಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅಲ್ಲದೇ ನಾವುಗಳು ಅಲ್ಲಿಗೆ ಬರಬಾರದು ಎಂದು ಸುತ್ತಲೂ ಕಾಂಪೌಂಡ್ ಕಟ್ಟಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ಮೇಯೋಣ ಎಂದರೆ ಅದಕ್ಕೂ ವಾಹನಗಳ ಕಿರಿ ಕಿರಿ. ರಸ್ತೆ ಬದಿಯುದ್ದಕ್ಕೂ ದೊಡ್ಡ ದೊಡ್ಡ ವಾಹನಗಳನ್ನು ನಿಲ್ಲಿಸಿ ಹುಲ್ಲು ಮೇಯಲು ಆಗ್ತಿಲ್ಲ. ಜೊತೆಗೆ ನಾವು ವಿಶಾಲವಾದ ಬಾಣೆ ಜಾಗಗಳಲ್ಲಿ ಹೊಟ್ಟೆ ತುಂಬಾ ಹುಲ್ಲು ಮೇಯ್ದು ಅಲ್ಲಲ್ಲಿ ಇದ್ದ ಕೆರೆ - ಕಟ್ಟೆ ಗಳಲ್ಲಿ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿದ್ದವರು.
ಈಗ ನಮಗೆ ಆ ಕೆರೆ -ಕಟ್ಟೆಗಳು ಇಲ್ಲ. ಆದ್ದರಿಂದ ನಮಗೂ ಮೇಯಲು ಹುಲುಸಾದ ಜಾಗ ಹಾಗೂ ಕೆರೆ ಕಟ್ಟೆಗಳು ಬೇಕು. ಒಟ್ಟಾರೆ ಹೇಳೋದಾದರೆ ನಮಗೆ ನ್ಯಾಯ ಬೇಕು. ನಮಗೂ ಮೇವು ಬೇಕು. ದಯಮಾಡಿ ಮಾನವರಿಗೆ ಕಾನೂನು ಪಾಲನೆಯ ನೀತಿ ಹೇಳುವ ನೀವುಗಳು ನಮ್ಮ ನೋವನ್ನು ಕೇಳಿ.... ಎಂದು ಹೇಳಲು ಪೆÇೀಲೀಸ್ ಠಾಣೆ ಮುಂದೆ ಎಮ್ಮೆಗಳ ಮಂದೆ ಹೀಗೆ ಜಮಾಯಿಸಿರಬಹುದೇ....?! ಈ ಎಮ್ಮೆಗಳ ಚಿತ್ರಣ ಕಂಡು ಬಂದದ್ದು ಕುಶಾಲನಗರ ಗ್ರಾಮಾಂತರ ಠಾಣೆಯ ಬಳಿಯ ಹೆದ್ದಾರಿಯಲ್ಲಿ. ಕುಶಾಲನಗರ ಕೂಡಿಗೆ ಮಾರ್ಗದ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಇದ್ದರೂ ಕೂಡ ಅದನ್ನೂ ಲೆಕ್ಕಿಸದೇ, ವಾಹನಗಳು ಮಾಡುವ ಶಬ್ದಕ್ಕೂ ಅಂಜದೇ ಗುಂಪುಗೂಡಿದ ಎಮ್ಮೆಗಳ ಹಿಂಡು ಕೆಲಹೊತ್ತು ನಿಂತು ಮತ್ತು ಮಲಗಿದ್ದ ಚಿತ್ರಣ ಸೆರೆಯಾದದ್ದು ಹೀಗೆ....!
-ಕೆ.ಎಸ್. ಮೂರ್ತಿ