ಮಡಿಕೇರಿ, ಸೆ. 23: ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಮಳೆಗಾಲ ವಿಭಿನ್ನ ರೀತಿಯಲ್ಲಿ ಕಂಡುಬಂದಿದ್ದು, ಸೆಪ್ಟೆಂಬರ್ ತಿಂಗಳು ಮುಗಿಯುವ ಹಂತ ತಲುಪಿದರೂ ಇನ್ನೂ ಮಳೆಗಾಲದ ಚಿತ್ರಣ ಮರೆಯಾದಂತಿಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗಿದೆ. ಕೆಲವೆಡೆ ದಿನವೊಂದಕ್ಕೆ ಧಾರಾಕಾರವಾಗಿ ಸುಮಾರು ನಾಲ್ಕೈದು ಇಂಚಿನಷ್ಟು ಮಳೆ ಸುರಿದಿರುವ ಕುರಿತೂ ವರದಿಯಾಗಿದೆ. ಇತರೆಡೆಗಳಲ್ಲಿ ತುಸು ಕಡಿಮೆ ಎಂಬಂತಿದ್ದರೂ, ನಿರಂತರವಾಗಿ ಎಡೆಬಿಡದೆ ಮಳೆಯಾಗಿದೆ. ಇದರೊಂದಿಗೆ ಈ ಬಾರಿ ಜಿಲ್ಲೆಯಾದ್ಯಂತ ತೀವ್ರ ಚಳಿಯ ಅನುಭವ ಜನತೆಗಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಚಳಿಯ ಪ್ರಮಾಣ ತುಸು ಹೆಚ್ಚಿತ್ತು. ಮಡಿಕೇರಿಯಲ್ಲಿ ಚಳಿ ಕಂಡು ಬರುವುದು ಸಹಜವಾದರೂ, ಈ ಬಾರಿ ಜಲ್ಲೆಯಾದ್ಯಂತ ಚಳಿ ಹೆಚ್ಚಿದ್ದುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಕಳೆದ ಸಾಲಿನ ಮಳೆಯ ಪ್ರಮಾಣದಷ್ಟೇ ಈ ಬಾರಿಯೂ ದಾಖಲಾಗುವ ಸಾಧ್ಯತೆ ಕಂಡು ಬರುತ್ತಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಕೆಲವೇ ದಿನಗಳಲ್ಲಿ ಈ ಪ್ರಮಾಣ ಸರಿಯಾಗುವ ಹಂತ ತಲುಪಿದೆ. ಕಳೆದ ವರ್ಷ ಜನವರಿಯಿಂದ ಈತನಕ ಜಿಲ್ಲೆಗೆ ಸರಾಸರಿ 100.74 ಇಂಚು ಮಳೆಯಾಗಿದ್ದರೆ ಈ ಬಾರಿ 93.05 ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ ಕೇವಲ 5 ಇಂಚಿನಷ್ಟು ಮಾತ್ರ ಕಡಿಮೆ ಇದೆ. ಕಳೆದ ಬಾರಿ 137.32 ಇಂಚು ಮಳೆಯಾಗಿದ್ದರೆ, ಈ ವರ್ಷ ಈ ಅವಧಿಯವರೆಗೆ 132.26 ಇಂಚು ಮಳೆ ದಾಖಲಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ 84.22 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ 95.90 ಇಂಚಿನಷ್ಟಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ವರ್ಷ 68.90 ಇಂಚು ಮಳೆಯಾಗಿದ್ದರೆ, ಈ ಬಾರಿ ಈ ತನಕ 62.82 ಇಂಚು ಮಳೆಯಾಗಿದೆ.

ಮಡಿಕೇರಿ ನಗರ

ಮಡಿಕೇರಿ ನಗರಕ್ಕೆ ಪ್ರಸಕ್ತ ವರ್ಷ ಈ ಅವಧಿಯವರೆಗೆ 118 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ 130.92 ಇಂಚಿನಷ್ಟಾಗಿತ್ತು.

ತಾ. 16ರಂದು ಕನಿಷ್ಟ ಉಷ್ಣಾಂಶ

ಮಡಿಕೇರಿ ನಗರದಲ್ಲಿ ಸೆ. 16ರಂದು 16.8 (ಡಿಗ್ರಿ)ನಷ್ಟು ಕನಿಷ್ಟ ಉಷ್ಣಾಂಶ ದಾಖಲಾಗಿದೆ. ಕಳೆದ ಎಂಟು ದಿನಗಳಲ್ಲಿ ನಗರದಲ್ಲಿ ಕಂಡುಬಂದ ಉಷ್ಣಾಂಶದ ಏರುಪೇರಿನ ವಿವರವನ್ನು ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಬಸವರಾಜು ಅವರು ನೀಡಿದ್ದಾರೆ. ತಾ. 16ರಂದು ಗರಿಷ್ಠ 27.5 ಹಾಗೂ ಕನಿಷ್ಟ 16.8, ತಾ. 17ರಂದು ಗರಿಷ್ಠ 20.5 ಹಾಗೂ ಕನಿಷ್ಟ 20.2, ತಾ. 18ರಂದು ಗರಿಷ್ಠ 20.5 ಹಾಗೂ ಕನಿಷ್ಟ 20.03, ತಾ. 19ರಂದು ಗರಿಷ್ಠ 21.5 ಹಾಗೂ ಕನಿಷ್ಟ 20.04, ತಾ. 20ರಂದು ಗರಿಷ್ಠ 21.5, ಕನಿಷ್ಟ 18.5, ತಾ. 21ರಂದು ಗರಿಷ್ಠ 21.5, ಕನಿಷ್ಟ 19.5, ತಾ. 22ರಂದು ಗಿರಷ್ಠ 20.1 , ಕನಿಷ್ಟ 18 ಉಷ್ಣಾಂಶ ದಾಖಲಾಗಿದೆ.