ಮಡಿಕೇರಿ, ಸೆ.23 : ಕೃಷಿಕರು ಮತ್ತು ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಮಹತ್ವದ ಮಸೂದೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ರೈತಾಪಿ ವರ್ಗಕ್ಕೆ ಅರ್ಥೈಸಿಕೊಡುವ ಬದಲು ರಾಜಕೀಯ ಕಾರಣಕ್ಕಾಗಿಯೇ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅವರು ವಿರೋಧಿಸುವುದಕ್ಕಾಗಿಯೇ ವಿರೋಧ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷಗಳು ರೈತರ ಹಾದಿ ತಪ್ಪಿಸುವ ಯತ್ನದಲ್ಲಿ ತೊಡಗಿವೆ ಎಂದರು.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯನ್ವಯ ರೈತರಿಗೆ ಹಾಗೂ ವ್ಯಾಪಾರಿಗಳಿಗೆ ತಮಗಿಷ್ಟ ಬಂದ ಕಡೆ ಕೃಷಿ ಉತ್ಪನ್ನ ಮಾರಾಟ ಹಾಗೂ ಖರೀದಿ ಮಾಡುವ ಸ್ವಾತಂತ್ರವನ್ನು ನೀಡಲಾಗಿದೆ. ಪರ್ಯಾಯ ವ್ಯಾಪಾರ ವ್ಯವಸ್ಥೆ ಮೂಲಕ ಬೆಳೆಗಳ ನ್ಯಾಯಯುತ ದರ ನಿಗಧಿಪಡಿಸಲು ಅವಕಾಶ, ಕೃಷಿ ಉತ್ಪನ್ನಗಳ ಪಾರದರ್ಶಕ, ತಡೆರಹಿತ ಅಂತರರಾಜ್ಯ ಹಾಗೂ ರಾಜ್ಯದೊಳಗಿನ ವ್ಯಾಪಾರಕ್ಕೆ ಉತ್ತೇಜನ ನೀಡಲಾಗಿದೆ. ಉತ್ಪನ್ನದ ಆನ್‍ಲೈನ್ ವ್ಯಾಪಾರಕ್ಕೆ (ಇ-ಟ್ರೇಡಿಂಗ್) ಒತ್ತು ನೀಡಲು ಕಾನೂನಾತ್ಮಕ ಚೌಕಟ್ಟನ್ನು ಅಳವಡಿಸಲಾಗಿದೆ.
ರೈತರ (ಕಲ್ಯಾಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಯಲ್ಲಿ ಕೃಷಿ ಉದ್ಯಮ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫ್ತುದಾರರು, ಚಿಲ್ಲರೆ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ರೈತರಿಗೆ ಭದ್ರತೆ ಹಾಗೂ ಪೆÇ್ರೀತ್ಸಾಹ ನೀಡುವ ಕೃಷಿ ಒಪ್ಪಂದದ ರಾಷ್ಟ್ರೀಯ ಚೌಕಟ್ಟು ನಿರ್ಮಿಸಲು ಧೈರ್ಯವನ್ನು ತುಂಬಲಾಗಿದೆ. ನ್ಯಾಯಯುತ ದರ ಚೌಕಟ್ಟಿನೊಳಗೆ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಕೃಷಿ ಸೇವೆಗಳನ್ನು ಒದಗಿಸುವ ಅವಕಾಶ ನೀಡಲಾಗಿದೆ.
ಈ ಎರಡು ಮಸೂದೆಗÀಳು ದೇಶದ ಕೃಷಿ ವಲಯದಲ್ಲಿ ಕ್ರಾಂತಿ ಸೃಷ್ಟಿಸಲಿದೆ ಮತ್ತು ರೈತ ಸಮುದಾಯಕ್ಕೆ ಸಹಕಾರಿಯಾಗಲಿದೆ ಎಂದು ರಾಬಿನ್ ದೇವಯ್ಯ ವಿಶ್ವಾಸ ವ್ಯಕ್ತಪಡಿಸಿದರು. ವಿವಿಧ ರಾಜ್ಯಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗಳನ್ವಯ ನೋಂದಣಿ ಮಾಡಿಕೊಂಡಿರುವ ಮಾರುಕಟ್ಟೆಗಳಿಗೆ ಹೊರತಾಗಿಯೂ ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ನೀಡಲಾಗಿದೆ.
ಆಧುನಿಕ ತಂತ್ರಜ್ಞಾನವನ್ನು ಬಳಸಿ ಬೆಳೆ ಬೆಳೆಯಲು ಮಸೂದೆ ಸಹಕಾರಿಯಾಗಿದೆ. ಅಲ್ಲದೆ ಯಾವುದೇ ಮಧ್ಯವರ್ತಿಗಳ ಉಪಟಳವಿಲ್ಲದೆ ದೊಡ್ಡ ವ್ಯಾಪಾರಿಗಳು ಹಾಗೂ ರಫ್ತುದಾರರನ್ನು ತಲುಪಲು ಮತ್ತು ಉತ್ತಮ ಬೆಲೆಗೆ ಮಾರಾಟ ಮಾಡಲು ರೈತರಿಗೆ ಮಸೂದೆ ನೆರವಾಗಲಿದೆ. ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದ್ದು, ರೈತರು ಆಹಾರ ತಯಾರಿಕಾ ಕೈಗಾರಿಕೆಗಳೊಂದಿಗೆ ನೇರ ಒಪ್ಪಂದ ಮಾಡಿಕೊಂಡು ತಾವು ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆಯನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಬೆಳೆಗಾರರ ಸಂಘಟನೆಗಳಲ್ಲಿ ರಾಜಕೀಯ!
ಕೊಡಗಿನ ಸಂಸದರು ಕಾಫಿ ಬೆಳೆಗಾರರ ನೆರವಿಗೆ ಬರಲಿಲ್ಲ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ರಾಬಿನ್, ಬೆಳೆಗಾರರಲ್ಲೇ ವಿವಿಧ ಸಂಘಟನೆಗಳಿದ್ದು, ಒಂದೇ ವೇದಿಕೆಯಡಿ ಸಂಸದರನ್ನು ಭೇಟಿಯಾಗುತ್ತಿಲ್ಲ, ಅಲ್ಲದೆ ಸಂಘಗಳಲ್ಲಿ ರಾಜಕೀಯ ನುಸುಳುತ್ತಿದೆ ಎಂದು ಅಭಿಪ್ರಾಯಪಟ್ಟರು.
ದೊಡ್ಡ ಬೆಳೆಗಾರರು, ಸಣ್ಣ ಬೆಳೆಗಾರರು ಎನ್ನುವ ಪ್ರತ್ಯೇಕ ವಿಂಗಡಣೆಗಳಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಸಮಸ್ಯೆಗಳ ಪರಿಹಾರಕ್ಕೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವ ಅಗತ್ಯವಿದೆ. ಈ ಬಗ್ಗೆ ಸಂಸದರ ಗಮನ ಸೆಳೆದು ಬೆಳೆಗಾರರ ಸಭೆ ನಡೆಸಲು ಮನವಿ ಮಾಡಲಾಗುವುದೆಂದು ರಾಬಿನ್ ದೇವಯ್ಯ ಭರವಸೆ ನೀಡಿದರು.
ಬಿಜೆಪಿ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್ ಮಾತನಾಡಿ ಸರ್ಕಾರ ಈಗಾಗಲೇ ಕೃಷಿ ಮಸೂದೆ ಜಾರಿ ಮಾಡಿದ್ದು, ಹಂತ ಹಂತವಾಗಿ ಅನುಷ್ಠಾನಗೊಳ್ಳಲಿದೆ ಎಂದರು. ರಾಜ್ಯದಲ್ಲಿ 1 ಕೋಟಿ ಹೆಕ್ಟೇರ್ ಕೃಷಿ ಪ್ರದೇಶವಿದ್ದು, ಇದರಲ್ಲಿ ಸುಮಾರು 22 ಲಕ್ಷ ಹೆಕ್ಟೇರ್ ಪ್ರದೇಶ ಬಳಕೆಯಾಗದೆ ಪಾಳು ಬಿದ್ದಿದೆ. ಈ ರೀತಿಯ ಕೃಷಿ ಭೂಮಿಯ ಅಭಿವೃದ್ಧಿಯ ಅಭಿವೃದ್ಧಿಗೆ ಮಸೂದೆ ಸಹಕಾರಿಯಾಗಿದೆ. ವಿದ್ಯಾವಂತ ಯುವ ಕೃಷಿಕರು ನೂತನ ತಂತ್ರಜ್ಞಾನದ ಕೃಷಿ ಚಟುವಟಿಕೆಗಳಿಗೆ ಆಸಕ್ತಿ ತೋರುತ್ತಿದ್ದು, ಯುವಕರ ಉತ್ಸಾಹಕ್ಕೆ ಮಸೂದೆ ಸ್ಫೂರ್ತಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿ ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಶಿವಚಾಳಿಯಂಡ ಜಗದೀಶ್ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ್ ತಿಮ್ಮಯ್ಯ ಉಪಸ್ಥಿತರಿದ್ದರು.