ಸೋಮವಾರಪೇಟೆ, ಸೆ. 23: ತಾಲೂಕಿನ ಮಾದಾಪುರದ ಮಾರ್ಕೆಟ್ ರಸ್ತೆಯಲ್ಲಿ ಗುಂಡಿಗಳ ಸಂತೆಯೇ ನಿರ್ಮಾಣವಾಗಿದ್ದು, ರಸ್ತೆಯಲ್ಲಿ ಡಾಂಬರನ್ನು ಹುಡುಕುವ ಸ್ಥಿತಿ ಬಂದಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಕಣ್ಮುಚ್ಚಿಕೊಂಡಿದೆ.
ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿರುವ ಮಾದಾಪುರದಲ್ಲಿ ಈ ಮಾರ್ಕೆಟ್ ರಸ್ತೆ ಬೈಪಾಸ್ ರಸ್ತೆಯಾಗಿ ಬಳಕೆಯಾಗುತ್ತಿದೆ. ಕಳೆದ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮುಖ್ಯರಸ್ತೆಯಲ್ಲಿ ಬರೆಕುಸಿದು 20ಕ್ಕೂ ಹೆಚ್ಚು ದಿನಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿದ್ದ ಸಂದರ್ಭ, ಇದೇ ಬೈಪಾಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದವು.
2018ರವರೆಗೆ ಸಣ್ಣಪುಟ್ಟದಾಗಿದ್ದ ಗುಂಡಿಗಳು 2018ರ ಆಗಸ್ಟ್ ನಂತರ ತನ್ನ ಗಾತ್ರಗಳನ್ನು ವಿಸ್ತರಿಸಿಕೊಳ್ಳುತ್ತಾ ಇದೀಗ ಸಣ್ಣಪುಟ್ಟ ಕೆರೆಗಳಂತೆ ಕಂಡುಬರುತ್ತಿವೆ. ಮಳೆಹಾನಿ ಪರಿಹಾರ ನಿಧಿಯಡಿ ಮುಖ್ಯರಸ್ತೆಯ ಮಣ್ಣನ್ನು ತೆಗೆದು, ನೂತನವಾಗಿ ಡಾಂಬರು ಹಾಕಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಈ ಬೈಪಾಸ್ ರಸ್ತೆಯತ್ತ ಎಳ್ಳಷ್ಟೂ ಗಮನಹರಿಸಿಲ್ಲ.
ಪರಿಣಾಮ ಮಾರ್ಕೆಟ್ ರಸ್ತೆಯ ಗುಂಡಿಗಳು ದಿನದಿಂದ ದಿನಕ್ಕೆ ಆಪೋಶನಗೈಯುತ್ತಿದ್ದು, ಇದೀಗ ರಸ್ತೆಯನ್ನು ಹುಡುಕುವ ಸ್ಥಿತಿ ಬಂದೊದಗಿದೆ. ಈ ರಸ್ತೆಯ ಎರಡೂ ಬದಿಗಳಲ್ಲಿ ಮನೆಗಳು, ಮಾರ್ಕೆಟ್, ಅಂಗಡಿ ಮಳಿಗೆಗಳಿದ್ದು, ದಿನಂಪ್ರತಿ ನೂರಾರು ವಾಹನಗಳು, ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ.
ರಸ್ತೆಯ ಹೊಂಡಗಳಲ್ಲಿ ಮಳೆನೀರು ನಿಂತು ವಾಹನಗಳು ಸಂಚರಿಸುವ ಸಂದರ್ಭ ಪಾದಚಾರಿಗಳಿಗೆ ಕೆಸರಿನ ಸಿಂಚನವಾಗುತ್ತಿದೆ. ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾದರೆ, ಬದಲಿ ರಸ್ತೆಯಾಗಿರುವ ಮಾರ್ಕೆಟ್ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿವೆ. ಗ್ರಾಮ ಪಂಚಾಯಿತಿಯಿಂದ ಕೇವಲ 150 ಮೀಟರ್ ದೂರವಿರುವ ರಸ್ತೆಯ ಬಗ್ಗೆ ಗ್ರಾ.ಪಂ. ಸಹ ಈವರೆಗೆ ಗಮನಹರಿಸದಿರುವದು ದುರಂತ.
ಇನ್ನಾದರೂ ಮಾರ್ಕೆಟ್ ರಸ್ತೆಯ ಬಗ್ಗೆ ಇರುವ ಅನಾದರವನ್ನು ತೊರೆದು, ಶೀಘ್ರವಾಗಿ ರಸ್ತೆಯ ದುರಸ್ತಿಗೆ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ನೆಮ್ಮದಿಯ ಸಂಚಾರಕ್ಕೆ ಅನುವು ಮಾಡಬೇಕೆಂದು ಸ್ಥಳೀಯರಾದ ಜಾನ್ಸನ್ ಸೇರಿದಂತೆ ಇತರರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.