*ಕೊಡ್ಲಿಪೇಟೆ, ಸೆ. 20: ಸರ್ಕಾರದ ವತಿಯಿಂದ ಮಂಜೂರು ಮಾಡಿರುವ ಜಾಗವನ್ನು ಯಾವದೇ ಕಾರಣಕ್ಕೂ ಪರಭಾರೆ ಮಾಡದಿರಿ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.

ಕೊಡ್ಲಿಪೇಟೆಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ, ಬ್ಯಾಡಗೊಟ್ಟ, ಬೆಸೂರು, ಹಂಡ್ಲಿ ಹಾಗೂ ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ 179 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ ಶಾಸಕರು, ಹಕ್ಕುಪತ್ರದ ಹಿಂಬದಿಯಲ್ಲಿ ಸರ್ಕಾರ ಹತ್ತು ಷರತ್ತುಗಳನ್ನು ನಮೂದಿಸಿದೆ. ಅದನ್ನು ಓದಿಕೊಂಡು ಚಾಚೂ ತಪ್ಪದೆ ಪಾಲಿಸಬೇಕು. ಷರತ್ತುಗಳನ್ನು ಮೀರಿದರೆ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ತಹಶೀಲ್ದಾರ್ ಗೋವಿಂದರಾಜು ಪ್ರಸ್ತಾವಿಕವಾಗಿ ಮಾತನಾಡಿ, ಮಂಜೂರಾದ 25 ವರ್ಷಗಳ ಅವಧಿಯವರೆಗೆ ಯಾರಿಗೂ ಪರಭಾರೆ ಮಾಡಬಾರದು. ತಮ್ಮ ಹಕ್ಕುಗಳನ್ನು ವರ್ಗಾಯಿಸಬಾರದು. ವಾಸದ ಮನೆಯ ಹೊರತು ಬೇರೆ ಉದ್ದೇಶಕ್ಕೆ ಸದರಿ ಸ್ಥಳದಲ್ಲಿ ಕಟ್ಟಡ ನಿರ್ಮಿಸಬಾರದು ಎಂದು ತಿಳುವಳಿಕೆ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಕೊಡ್ಲಿಪೇಟೆ ಉಪತಹಶೀಲ್ದಾರ್ ಪುರುಷೊತ್ತಮ್, ತಾಲೂಕು ಕಚೇರಿ ಅಧಿಕಾರಿ ಉಮೇಶ್, ಕಂದಾಯ ಪರಿವೀಕ್ಷಕ ಮನುಕುಮಾರ್, ಶಿರಸ್ತೇದಾರ್ ಮಹೇಶ್,ಭಾನು ಪ್ರಕಾಶ್, ಸಿಬ್ಬಂದಿಗಳಾದ ಮಾಚಯ್ಯ, ರತನ್, ಮೊಣ್ಣಪ್ಪ ಗ್ರಾಮ ಲೆಕ್ಕಾಧಿಕಾರಿಗಳಾದ ಶ್ವೇತಾಶ್ರೀ, ಚೈತ್ರ, ವಿದ್ಯಾಶ್ರೀ, ಪ್ರಕೃತಿ, ಗ್ರಾಮ ಸಹಾಯಕರಾದ ಮಹೇಶ್, ರಾಜು, ಭೀಮೇಶ್, ಲೋಹಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.