ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಸ್ ಭಾರತಕ್ಕೆ ಕಾಲಿಟ್ಟು 6 ತಿಂಗಳೇ ಕಳೆದಿದೆ. 2020 ಅರ್ಧ ವರ್ಷ ಸವೆಸಿದೆ. 180 ದಿನಗಳು ಅರ್ಥಾತ್ ಜೀವನದ ಲೆಕ್ಕಕ್ಕೇ ಸಿಗದಂತೆ ಕಳೆದು ಹೋಗಿದೆ.
ಜೀವನ ಅಲ್ಲೋಲ ಕಲ್ಲೋಲವಾಗಿದೆ. ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಚೇತರಿಕೆ ಯಾವಾಗ ಎಂಬ ಬಗ್ಗೆ ದೂರದಲ್ಲಿಯೂ ಬೆಳಕಿನ ಕಿರಣಗಳೇ ಕಾಣುತ್ತಿಲ್ಲ. ಲಸಿಕೆ ಬಂದ ಬಳಿಕ ಎಂಬ ಉತ್ತರ ಸ್ಪಷ್ಟವಾಗಿದ್ದರೂ ಲಸಿಕೆ ಯಾವಾಗ ಸಿಗುತ್ತೆ. ಅದನ್ನು ಕೋಟ್ಯಾಂತರ ಭಾರತೀಯರಿಗೆ ವಿತರಿಸುವುದು ಹೇಗೆ ಎಂಬುದಕ್ಕೆ ಸ್ಪಷ್ಟತೆಯಿಲ್ಲ.
ಸದ್ಯಕ್ಕೆ, ದಿನಾ ಹೆಚ್ಚುತ್ತಲೇ ಇರುವ ಕೊರೊನಾ ಸೋಂಕಿತರ ಸಂಖ್ಯೆಯನ್ನು ಗಮನಿಸಿಕೊಂಡು ಆತಂಕದಲ್ಲಿಯೇ ದಿನದೂಡುವುದೇ ಅನಿವಾರ್ಯ ಎಂಬಂತಾಗಿದೆ.
ಸರ್ಕಾರ ತನ್ನ ನಿಲುವನ್ನು ಅತ್ಯಂತ ಕರಾರುವಕ್ಕಾಗಿ ಸ್ಪಷ್ಟ ಪಡಿಸಿದೆ. ನಾವು ಮಾಡುವುದನ್ನೆಲ್ಲಾ ಮಾಡಿ ಆಗಿದೆ. ಕೊರೊನಾ ಎಂಬ ಮಹಾಮಾರಿಯಿಂದ ರಕ್ಷಿಸಿಕೊಳ್ಳುವುದು ಇನ್ನು ಮುಂದೆ ನಿಮಗೆ ಬಿಟ್ಟದ್ದು. ಹೌದು. ನಿಮ್ಮ ಜೀವನ ನಿಮ್ಮದು.. ನೀವೇ ರಕ್ಷಿಸಿಕೊಳ್ಳಬೇಕು.
ಹೇಗೆ ರಕ್ಷಿಸಿಕೊಳ್ಳುವುದು ಎಂಬುದಕ್ಕೂ ಸೂಚನೆ ನೀಡಿದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ಯಾನಿಟೈಸರ್ ಬಳಸಿ, ಅತ್ಯಂತ ಅನಿವಾರ್ಯ ಆದಲ್ಲಿ ಮಾತ್ರ ಮನೆಯಿಂದ ಹೊರಕ್ಕೆ ಸಾರ್ವಜನಿಕ ಸ್ಥಳಗಳಿಗೆ ತೆರಳಿ, ಹೆಚ್ಚು ಜನದಟ್ಟಣೆ ಉಂಟು ಮಾಡಬೇಡಿ.
ಯಾಕೆಂದರೆ, ಕೊರೊನಾ ಎಂಬ ಸೋಂಕು ಇನ್ನೂ ಇದೆ. ಟಾಮ್ ಎಂಡ್ ಜೆರ್ರಿ ಎಂಬ ಕಾರ್ಟೂನ್ ನೋಡುತ್ತೇವಲ್ಲ, ಹಾಗೇ ನಮ್ಮ ಸುತ್ತಮುತ್ತಲೇ ಸುಳಿದಾಡುತ್ತಿರುವ ಸೋಂಕಿನಿಂದ ನಾವು ಹೇಗೆಲ್ಲಾ ತಪ್ಪಿಸಿ ಕೊಂಡೇ ಕೆಲಕಾಲ ಜೀವಿಸಬೇಕಾಗಿದೆ.
ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಅಥವಾ ಸೋಂಕು ಬಾರದಂತೆ ರಕ್ಷಿಸಿಕೊಳ್ಳಲು ನಾವೆಷ್ಟು ಗಂಭೀರವಾಗಿದ್ದೇವೆ ಎಂಬದರ ಮೇಲಿದೆ. ಕೊಡಗಿನ ಅನೇಕ ಕಡೆ ಮಾಸ್ಕ್ ಧರಿಸದೇ ಜನ ಸಂಚರಿ ಸುತ್ತಿದ್ದಾರೆ. ಮಾಸ್ಕ್ ಧರಿಸುವವರನ್ನು ಲೇವಡಿ ಮಾಡುವ ನಿದರ್ಶನಗಳೂ ಇದೆ. ಕೊರೊನಾ ಎಂಬುದೇ ಇಲ್ಲ. ಇದೆಲ್ಲಾ ಭ್ರಮೆ, ಸರ್ಕಾರ ದುಡ್ಡು ಮಾಡಲು ಕೊರೊನಾ ಎಂಬ ವೈರಸ್ ಸೃಷ್ಟಿಸಿದೆ ಎಂದು ವ್ಯಂಗ್ಯವಾಗಿ ವಿತಂಡ ವಾದ ಮಾಡುವವರೂ ಇದ್ದಾರೆ.
ಭಾರತೀಯರಿಗೆ ಕೊರೊನಾ ಎಂಬ ಸೋಂಕು ದೇಶದಿಂದ ಆದಷ್ಟು ಬೇಗ ಮರೆಯಾಗಲೇಬೇಕು. ಸರ್ಕಾರ ಈ ನಿಟ್ಟಿನಲ್ಲಿ ಮ್ಯಾಜಿಕ್ ಮಾಡಬೇಕು. ವೈದ್ಯರು ಸೋಂಕನ್ನು ಕ್ಷಣಮಾತ್ರದಲ್ಲಿ ಹೊಡೆದೋಡಿಸಲೇಬೇಕು. ಅದಕ್ಕಾಗಿ ಕೆಲವು ಜನ ಮಾಸ್ಕ್ ಧರಿಸಲು ತಯಾರಿಲ್ಲ. ಸ್ಯಾನಿಟೈಸರ್ ಬಳಸಲೂ ಸಿದ್ದರಿಲ್ಲ. ದೇಶ ಮುಖ್ಯ. ದೇಶಕ್ಕೆ ಬಂದಿರುವ ಕೊರೊನಾ ಹೋಗಲಾಡಿಸುವುದು ಮುಖ್ಯ. ಆದರೆ ಈ ನಿಟ್ಟಿನ ನಿಯಮಗಳ ಪಾಲನೆ ವಿಚಾರದಲ್ಲಿ ಮಾತ್ರ ನಾವು ಈ ದೇಶದವರೇ ಅಲ್ಲ, ದೇಶದ ನಿಯಮಗಳು ನಮಗಲ್ಲ. ಇಂಥ ಧೋರಣೆ ಹೆಚ್ಚುತ್ತಿರುವುದರಿಂದಾಗಿಯೇ ಕೊರೊನಾ ಸೋಂಕು ಇಳಿಮುಖವಾಗುತ್ತಿಲ್ಲ.
ಕೊರೊನಾ ಸೋಂಕು ಡಿಸೆಂಬರ್ನಲ್ಲಿ ಮೊದಲ ಬಾರಿಗೆ ವರದಿಯಾದ ಚೀನಾದ ವುಹಾನ್ ಮತ್ತೆಮೇಲೆದ್ದಿದೆ. ಅಲ್ಲಿ ಶಾಲೆ, ಕಾಲೇಜು, ಸಿನಿಮಾಮಂದಿರ, ಹೊಟೇಲ್, ಉದ್ಯಮ ಎಲ್ಲವೂ ಮೊದಲಿದ್ದಂತೆ ಈಗ ವಹಿವಾಟು ನಡೆಸುತ್ತಿದೆ.
ಆದರೆ ಭಾರತ ಈಗ ಕೊರೊನಾ ಸೋಂಕಿನ ವಿಚಾರದಲ್ಲಿ ಎಲ್ಲಾ ದೇಶಗಳನ್ನೂ ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದ್ದು ಇನ್ನೇನು ಮೊದಲನೇ ಸ್ಥಾನಕ್ಕಾಗಿ ಧಾಪುಗಾಲಿಟ್ಟಿದೆ!
ಯಾಕೆ ಹೀಗಾಗುತ್ತಿದೆ?
ಯಾಕೆಂದರೆ, ಹಲವಾರು ದೇಶಗಳ ಜನ ಕಟ್ಟುನಿಟ್ಟಾಗಿ ಆರೋಗ್ಯದ ಮುಂಜಾಗ್ರತಾ ನಿಯಮ ಪಾಲಿಸಿದರು. ಆದರೆ ಭಾರತದಲ್ಲಿ ನಿರ್ಲಕ್ಷ್ಯ ಹೆಚ್ಚಾಗುತ್ತಿದ್ದು, ಸೋಂಕು ಬಂದರೆ ಬರಲಿ ಎಂಬ ಭಾವನೆ ಜಾಸ್ತಿಯಾಗುತ್ತಿದೆ. ಸೋಂಕು ಕಡಿಮೆಯಾಗದೇ ಇರುವುದರಿಂದಾಗಿ ದೇಶದ ಆರೋಗ್ಯ ಇಲಾಖೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ದಿನಕ್ಕೆ 50 ಸಾವಿರ ಹೊಸ ಸೋಂಕಿತರು ದೇಶದಲ್ಲಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು ಇವರ ಚಿಕಿತ್ಸಾ ವೆಚ್ಚವೇ ಕೋಟಿಗಟ್ಟಲೆ ಹಣ ವ್ಯಯಕ್ಕೆ ಕಾರಣವಾಗುತ್ತಿದೆ. ಸರ್ಕಾರದ ದುಡ್ಡು ಜನತೆಯ ತೆರಿಗೆಯ ದುಡ್ಡು ಅಲ್ಲವೇ?
ಹೀಗಿರುವಾಗ ಕೊರೊನಾ ಸೋಂಕು ತೊಲಗಿಸುವ ನಿಟ್ಟಿನಲ್ಲಿ ಭಾರತೀಯರಲ್ಲಿ ಸಂಘಟಿತ ಮನೋಭಾವನೆ ಮೂಡದೇ ಹೋದಲ್ಲಿ ಖಂಡಿತಾ ಭಾರತಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿಲ್ಲ. ಕೊರೊನಾದಿಂದಾಗಿ ಭಾರತದ ಆರ್ಥಿಕತೆಯು ಸಂಪೂರ್ಣ ಹದಗೆಟ್ಟು ಕಂಡುಕೇಳರಿಯದ ಸ್ಥಿತಿ ತಲುಪುವುದು ಖಂಡಿತಾ ಎನ್ನಬುಹುದು.
ನಾವೇನು ಮಾಡಬೇಕು?
ಮಾಸ್ಕ್ ಕಡ್ಡಾಯವಾಗಿ ಧರಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಹೋಗಲೇಬೇಡಿ. ಎದುರು ಇರುವವರು ಯಾರೇ ಆಗಿರಲಿ ಅವರೊಂದಿಗೆ ಮಾತನಾಡುವಾಗ ಮಾಸ್ಕ್ ಮುಖದಲ್ಲಿರಲಿ. ಬೇರೆಯವರ ಉಸಿರು, ಬಾಯಿಯಿಂದ ಹೊರಸೂಸುವ ಎಂಜಲು, ಗಾಳಿ ನಮಗೆ ತಾಗದಿರಲಿ, ಹಾಗೇ ನಮ್ಮ ಬಾಯಿಯಿಂದ ಹೊರಸೂಸುವ ಉಗುಳು, ಗಾಳಿಯೂ ಬೇರೆಯವರಿಗೆ ಸೋಂಕದಿರಲಿ. ಇದಕ್ಕೆಲ್ಲಾ ತಡೆಯಾಗಿ ಮಾಸ್ಕ್ ಇರಲಿ.
ಯೋಚಿಸಿ ನೋಡಿ... ವೈದ್ಯಕೀಯ ರಂಗದಲ್ಲಿ ಕಾರ್ಯನಿರ್ವಹಿಸುವವರು ದಿನಕ್ಕೆ ಅದೆಷ್ಟು ರೋಗಿಗಳನ್ನು ಗಮನಿಸುತ್ತಿರುತ್ತಾರೆ. ಎಂತೆಂಥಾ ವೈರಸ್ಗಳು ಅವರ ಮುಖದ ಮುಂದೆಯೇ ರೋಗಿಗಳಿಂದ ಬರುತ್ತಿರುತ್ತದೆ. ಹೀಗಿದ್ದರೂ ವೈದ್ಯರು ಸುರಕ್ಷಿತವಾಗಿರುತ್ತಾರೆ. ಯಾಕೆಂದರೆ ವೈದ್ಯಕೀಯ ವ್ಯವಸ್ಥೆಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹೀಗಾಗಿಯೇ ವೈದ್ಯರು ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಇದು ನಮಗೆಲ್ಲಾ ಪಾಠವಾಗಬೇಕಲ್ಲವೇ?
ಮಾಸ್ಕ್ ಧರಿಸಿದ ನಂತರ ಪದೇ ಪದೇ ಕೈಯಿಂದ ಮುಟ್ಟುತ್ತಲೇ ಇರಬೇಡಿ,. ನೀವೇನಾದರೂ ಸೋಂಕಿತನ ಸಂಪರ್ಕಕ್ಕೆ ಬಂದಿದ್ದರೆ ನೀವು ಕೈತೊಳೆಯದೇ ಮಾಸ್ಕ್ ಮುಟ್ಟಿ ಆ ಮೂಲಕ ಸೋಂಕನ್ನು ಸುಲಭವಾಗಿ ಆಹ್ವಾನಿಸುವಂತಾದೀತು. ಮಾಸ್ಕ್ ತೆಗೆಯುವಾಗಲೂ ಮುಂದಿನಿಂದ ತೆಗೆಯದಿರಿ. ಕಿವಿಯಿಂದ ಪ್ರಾರಂಭಿಸಿ ಹಿಂದಿನಿಂದ ಮಾಸ್ಕ್ ಕಳಚಿರಿ. ಹಾಗೇ ಸಾಧ್ಯವಾದಷ್ಟು ಶುಭ್ರ, ಸ್ವಚ್ಛವಾದ ಮಾಸ್ಕ್ ಬಳಸಿ, ಮರುಬಳಕೆಯ ಮಾಸ್ಕ್ ಅಲ್ಲದೆ ಹೋದಲ್ಲಿ ಅದನ್ನು 1 ದಿನಕ್ಕಿಂತ ಹೆಚ್ಚು ಬಳಸಲೇ ಬೇಡಿ.
- ಅನಿಲ್ ಎಚ್.ಟಿ.
(ಮುಂದುವರೆಯುವುದು)