ಇಂದಿನಿಂದ ವಿಧಾನಮಂಡಲ ಅಧಿವೇಶನ

ಬೆಂಗಳೂರು, ಸೆ. 20: ವಿಧಾನಮಂಡಲದ ಅಧಿವೇಶನವು ಕೋವಿಡ್ ಮುಂಜಾಗ್ರತಾ ಕ್ರಮಗಳ ನಡುವೆ ಸೋಮವಾರದಿಂದ ಆರಂಭವಾಗಲಿದೆ. ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಸೇರಿ ಮೂವರು ನಾಯಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಬಾರಿ ಅಧಿವೇಶನದಲ್ಲಿ ಸೋಂಕು ಹರಡುವ ಭೀತಿಯಿಂದಲೇ ಹಲವು ನಾಯಕರು ಗೈರು ಹಾಜರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕಳೆದ ಒಂದು ವಾರದಿಂದ ಈಚೆಗೆ ಪ್ರಮುಖ ಸಚಿವರಾದ ಬಸವರಾಜ ಬೊಮ್ಮಾಯಿ, ಭೈರತಿ ಬಸವರಾಜು, ಎನ್. ಗೋಪಾಲಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅಲ್ಲದೆ. ಪಿರಿಯಾಪಟ್ಟಣ ಶಾಸಕ ಕೆ. ಮಹದೇವ, ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್, ಉಪಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ಹೆಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಹುಣಸೂರು ಶಾಸಕ ಹೆಚ್.ಪಿ. ಮುಂಜುನಾಥ್ ಸೇರಿ ಹಲವು ಶಾಸಕರಿಗೆ ಈಗಾಗಲೇ ಸೋಂಕು ದೃಢಪಟ್ಟು ಚಿಕಿತ್ಸೆಯಲ್ಲಿದ್ದಾರೆ.

2 ಕೃಷಿ ಮಸೂದೆಗೆ ಅಂಗೀಕಾರ

ನವದೆಹಲಿ, ಸೆ. 20: ರಾಜ್ಯಸಭೆಯಲ್ಲಿ ವಿಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆಗಳ ನಡುವೆಯೇ ಕೃಷಿಗೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳಿಗೆ ಅಂಗೀಕಾರ ಪಡೆಯುವುದರಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ 2020 (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸಿದವು, ಪ್ರತಿಭಟನೆಯ ನಡುವೆಯೇ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಗಿದೆ.

ಮಸೂದೆಗೆ ಹೆಚ್.ಡಿ. ದೇವೇಗೌಡ ವಿರೋಧ

ನವದೆಹಲಿ, ಸೆ. 20: ಕೇಂದ್ರ ಸರ್ಕಾರ ಮಂಡಿಸಿರುವ ವಿವಾದಿತ ಕೃಷಿ ಮಸೂದೆಗೆ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದಿನ ಕಲಾಪದ ಚರ್ಚೆಯಲ್ಲಿ ಮಾತನಾಡಿದ ಅವರು ರೈತನ ಮಗನಾಗಿ ನಾನು ಈ ಮಸೂದೆಯನ್ನು ವಿರೋಧಿಸುತ್ತೇನೆ. ರೈತರ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷಗಳಿಗೆ ಕಾಳಜಿ ಇದೆ. ಆದರೆ ಕೇಂದ್ರ ಸರ್ಕಾರದ ಈ ನಡೆ ಆತುರ ನಿರ್ಧಾರ ಈ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯ ಇತ್ತು ಎಂದು ಅಭಿಪ್ರಾಯಪಟ್ಟರು.

ಉಡುಪಿಯ ಹಲವು ಪ್ರದೇಶ ಮುಳುಗಡೆ

ಉಡುಪಿ, ಸೆ. 20: ಉಡುಪಿ ಜಿಲ್ಲೆಯಾದ್ಯಂತ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗಿದೆ. ನಗರ ಮತ್ತು ಮಣಿಪಾಲ್‍ನ ಹಲವಾರು ಪ್ರದೇಶಗಳು ಮುಳುಗಡೆಯಾಗಿದೆ. ಮನೆಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿವೆ. ನಗರದ ಮುಖ್ಯ ರಸ್ತೆಗಳು ನೀರಿನಲ್ಲಿ ಮುಳುಗಿದ್ದು, ಜಿಲ್ಲೆಯ ಇತಿಹಾಸದಲ್ಲಿ ನಗರ ಇಂತಹ ಮಳೆಯನ್ನು ಕಂಡಿಲ್ಲ ಎಂದು ಹೇಳಲಾಗಿದೆ. ನೀರಿನ ಅಪಾರ ಹರಿವಿನ ಕಾರಣ ನಗರದ ಪ್ರಮುಖ ಬೀದಿಗಳಲ್ಲಿನ ಸಂಚಾರ ಅಸ್ತ್ಯವ್ಯಸ್ಥವಾಗಿದೆ. ಪುತ್ತಿಗೆ ಮಠ ಗುಂಡಿಬೈಲ್-ಕಲ್ಸಂಕ ರಸ್ತೆ, ಬೈಲ್ಕೆರೆ ಮಠದಬೆಟ್ಟು, ಉಡುಪಿ-ಮಣಿಪಾಲ್ ಮುಖ್ಯ ರಸ್ತೆಗಳು ನೀರಿನಿಂದ ಮುಳುಗಿ ಸಂಚಾರಕ್ಕೆ ಅಡ್ಡಿಯಾಗಿದೆ. ಬಡಗುಪೇಟೆಯ ಅನೇಕ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ. ಬೈಲುಕೆರೆ, ಕುಂಜಿಬೆಟ್ಟು ಮತ್ತು ಆದಿಯುಡುಪಿ ಪ್ರದೇಶವೂ ಜಲಾವೃತವಾಗಿದೆ. ಉಡುಪಿ ಶ್ರೀ ಕೃಷ್ಣ ಮಠದ ಸಂದರ್ಶಕರ ಪಾರ್ಕಿಂಗ್ ಪ್ರದೇಶವು ನೀರಿನಲ್ಲಿ ಮುಳುಗಿದೆ. ಜಿಲ್ಲೆಯಾದ್ಯಂತ ಮಳೆ ಪ್ರಮಾಣ ಅಧಿಕವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಮಿಲಿಟರಿ ಹೆಲಿಕಾಪ್ಟರ್ ಬಳಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.