ಕುಶಾಲನಗರ, ಸೆ. 18: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ವಲಯ ಮತ್ತು ಬೂತ್ ಅಧ್ಯಕ್ಷರುಗಳ ಸಭೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಯ ಪೂರ್ವಸಿದ್ಧತೆ, ಪಕ್ಷ ಬಲವರ್ಧನೆ ಮತ್ತು ಸಂಘಟನೆಯ ಬಗ್ಗೆ ಚರ್ಚಿಸಲಾಯಿತು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ವರ್ಗದವರನ್ನು ಒಟ್ಟಾಗಿ ಸೇರಿಸಿ ಪಕ್ಷವನ್ನು ಸದೃಢವಾಗಿ ಕಟ್ಟುವುದರ ಮುಖಾಂತರ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯಬೇಕೆಂದು ಅನಂತಕುಮಾರ್ ಹೇಳಿದರು.

ಜಿ.ಪಂ. ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಪಕ್ಷದಲ್ಲಿರುವ ಗೊಂದಲ ಗಳನ್ನು ಬದಿಗೊತ್ತಿ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾಯಕರು ಗಳು, ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಗ್ರಾ. ಪಂ. ಚುನಾವಣೆಗೆ ಮಹಿಳಾ ಕಾಂಗ್ರೆಸ್‍ನಿಂದ ಸಂಪೂರ್ಣ ಬೆಂಬಲ ನೀಡುವುದರೊಂದಿಗೆ ಕಾಂಗ್ರೆಸ್ ಪಕ್ಷ ಸಂಘಟನೆ ಮೂಲಕ ಕೊಡಗನ್ನು ಮತ್ತೆ ಕಾಂಗ್ರೆಸ್ ಭದ್ರಕೋಟೆಯಾಗಿ ಮಾಡಲಾಗುವುದು ಎಂದರು. ಸಭೆಯಲ್ಲಿ ಜಿ.ಪಂ. ಸದಸ್ಯೆ ಸುನಿತಾ, ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು, ಎಸ್ಸಿ ಘಟಕದ ಉಪಾಧ್ಯಕ್ಷ ಜನಾರ್ಧನ್, ನಗರಾಧ್ಯಕ್ಷ ಶರೀಫ್ ಇಬ್ರಾಹಿಂ, ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿ ಅಜ್ಜಳ್ಳಿ ರವಿ, ಹೂವಯ್ಯ ಸೇರಿದಂತೆ ವಲಯ ಮತ್ತು ಬೂತ್ ಅಧ್ಯಕ್ಷರುಗಳು ಇದ್ದರು.