ಸಿದ್ದಾಪುರ, ಸೆ. 18: ಕಾಡಿಗೆ ಅಟ್ಟಿದ್ದ ಕಾಡಾನೆಗಳು ಮರಳಿ ನಾಡಿಗೆ ಲಗ್ಗೆಯಿಟ್ಟು ದಾಂಧಲೆ ನಡೆಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಲ್ಲದೇ ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಇತ್ತೀಚೆಗೆ ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲ, ಬೆಟ್ಟದಕಾಡು ಹಾಗೂ ಅರೆಕಾಡು, ಅಭ್ಯತ್‍ಮಂಗಲ, ವಾಲ್ನೂರು, ತ್ಯಾಗತ್ತೂರು, ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಮರಿ ಆನೆಗಳು ಸೇರಿದಂತೆ 25ಕ್ಕೂ ಅಧಿಕ ಕಾಡಾನೆಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಪಟ್ಟು ಕಾರ್ಯಾಚರಣೆ ನಡೆಸಿ ಇತ್ತೀಚೆಗೆ ಕಾಡಿಗೆ ಅಟ್ಟಿದ್ದರು. ಆದರೆ ಇದೀಗ ಕಾಡಿಗೆ ಅಟ್ಟಲಾಗಿದ್ದ 25 ಕಾಡಾನೆಗಳು ಮರಳಿ ಕಾಫಿ ತೋಟಗಳಿಗೆ ಲಗ್ಗೆ ಇಟ್ಟಿದೆ. ಅಲ್ಲದೇ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಕಾಡಾನೆಗಳ ಹಿಂಡು ಭತ್ತದ ಕೃಷಿ ಮಾಡಿದ ಗದ್ದೆಗಳಿಗೆ ಲಗ್ಗೆಯಿಟ್ಟು ಮನಬಂದಂತೆ ಓಡಾಡಿ ಬೆಳೆಗಳನ್ನು ತಿಂದು ನಾಶಗೊಳಿಸಿದೆ ಎಂದು ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಹಾನಿಗೊಳಗಾದ ಭತ್ತದ ಬೆಳೆಗಳನ್ನು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಲ್ನೂರು ತ್ಯಾಗತ್ತೂರು ಭಾಗಗಳಲ್ಲಿ ಗದ್ದೆಗಳಿಗೆ ಲಗ್ಗೆಯಿಟ್ಟು ಹಾನಿಗೊಳಿಸಿರುವ ಕಾಡಾನೆಗಳ ಹಿಂಡು ಇದೀಗ ನೆಲ್ಯಹುದಿಕೇರಿಯ ಅತ್ತಿಮಂಗಲದ ಮೇರಿ ಲ್ಯಾಂಡ್ ಕಾಫಿ ತೋಟದಲ್ಲಿ ಬೀಡುಬಿಟ್ಟಿದೆ. ಕೆಲವು ಕಾಡಾನೆಗಳು ಕಾಫಿ ತೋಟಗಳಲ್ಲಿ ಮರಿ ಹಾಕಿದ್ದು, ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳನ್ನು ಬಿಟ್ಟು ಕದಲುತ್ತಿಲ್ಲ ಎನ್ನಲಾಗಿದೆ.
ಒಂಟಿ ಸಲಗದ ಸೆರೆಗೆ ಆಗ್ರಹ
ನೆಲ್ಯಹುದಿಕೇರಿ ಭಾಗದಲ್ಲಿ ಬೀಡುಬಿಟ್ಟಿರುವ 25ಕ್ಕೂ ಅಧಿಕ ಕಾಡಾನೆಗಳ ಹಿಂಡಿನ ಪೈಕಿ ಒಂಟಿ ಸಲಗವೊಂದಿದ್ದು, ಈ ಸಲಗವು ನೆಲ್ಯಹುದಿಕೇರಿ ಹಾಗೂ ಅಭ್ಯತ್‍ಮಂಗಲ ಗ್ರಾಮದಲ್ಲಿ ತೀವ್ರವಾಗಿ ಉಪಟಳ ನೀಡುತ್ತಿದ್ದು, ಇದನ್ನು ಸೆರೆ ಹಿಡಿದು ಸ್ಥಳಾಂತರಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗಾಗಲೇ ಸರ್ಕಾರವು ನೆಲ್ಯಹುದಿಕೇರಿ ಭಾಗದಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಸೆರೆ ಹಿಡಿಯಲು ಅನುಮತಿಯನ್ನು ನೀಡಿದೆ. ಆದರೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಸಲಗವನ್ನು ಸೆರೆ ಹಿಡಿಯುವ ಸಾಧ್ಯತೆ ಇದೆ. ಮಿತಿಮೀರಿದ ಕಾಡಾನೆ ಹಾವಳಿಯಿಂದಾಗಿ ರೈತರಿಗೆ ಹಾಗೂ ಕಾರ್ಮಿಕರಿಗೆ ನೆಮ್ಮದಿ ಇಲ್ಲದಂತಾಗಿದೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.