ಮಡಿಕೇರಿ, ಸೆ. 17: ಕಳೆದ ಒಂದು ದಶಕದಿಂದ ಸುಮಾರು ರೂ. 3.60 ಕೋಟಿ ವೆಚ್ಚದಲ್ಲಿ ಕೇಂದ್ರ ಸರಕಾರದ ಅನುದಾನದೊಂದಿಗೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಕೊಡವ ಹೆರಿಟೇಜ್ (ಕೊಡಗಿನ ಪಾರಂಪರಿಕ ತಾಣ) ಕಾಮಗಾರಿ ನಿಂತು ಹೋಗಿದೆ. ಈ ಬಗ್ಗೆ ಅನೇಕ ಸಂದರ್ಭಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ‘ಶಕ್ತಿ’ ಕೂಡ ಈ ಸಂಬಂಧ ಸರಣಿ ವರದಿ ಮೂಲಕ ಗಮನ ಸೆಳೆದಿತ್ತು. ಇದೀಗ ಜಿಲ್ಲಾಡಳಿತದಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಯಂತೆ ರೂ. ಒಂದೂವರೆ ಕೋಟಿ ಯೋಜನೆಯ ಕಾಮಗಾರಿಗೆ ಮರು ಟೆಂಡರ್ ಮೂಲಕ ಚಾಲನೆ ನೀಡಲಾಗಿದೆ. ಗುತ್ತಿಗೆದಾರ ಕಿಶೋರ್ ಬಾಬು ಎಂಬವರು ಸಂಬಂಧಿಸಿದ ಕಾಮಗಾರಿಗೆ ಟೆಂಡರ್ ಪಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ.ಕಟ್ಟಡ ಮಾರ್ಪಾಡು : ಈ ಹಿಂದಿನಂತೆ ಕೊಡವ ಪಾರಂಪಾರಿಕ ವಸ್ತು ಸಂಗ್ರಹಾಲಯ, ಗ್ರಂಥಾಲಯ ಹಾಗೂ ಕೊಡಗಿನ ‘ಐನ್‍ಮನೆ’ ಅಥವಾ ‘ಮುಂದ್‍ಮನೆ’ ಶೈಲಿಯಲ್ಲಿ ಕಟ್ಟಡದ ಕಾಮಗಾರಿಯನ್ನು ಅಪೂರ್ಣ ಸ್ಥಿತಿಯಲ್ಲಿ ನಿರ್ಮಿಸಲಾಗಿದೆ.

(ಮೊದಲ ಪುಟದಿಂದ) ಈ ಸಂಬಂಧ ಅಂದಾಜು 2.60 ಕೋಟಿಯ ಕಾಮಗಾರಿ ಈಗಾಗಲೇ ಪೂರೈಸಲಾಗಿದೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿಯ ಉಸ್ತುವಾರಿ ನಿರ್ವಹಣೆಯೊಂದಿಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಹಂತ ಹಂತದ ಕೆಲಸಕ್ಕೆ ಪೂರಕ ಹಣ ಪಾವತಿಯಾಗಿತ್ತು. ಈ ಕೆಲಸದ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತಗೊಂಡಿತ್ತು.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳಿಗೂ ದೂರು ಸಲ್ಲಿಕೆಯೊಂದಿಗೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಕಳೆದ ಆರು ವರ್ಷಗಳಿಂದ ಅಪೂರ್ಣ ಸ್ಥಿತಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಶಿಥಿಲಗೊಂಡು ಸಾಕಷ್ಟು ಸಾಮಗ್ರಿಗಳು ಕಳ್ಳರ ಪಾಲಾಗಿತ್ತು.

ಪ್ರಸಕ್ತ ಈ ಕಟ್ಟಡದ ಶಿಥಿಲಗೊಂಡಿರುವ ಗೋಡೆಗಳು ಮತ್ತು ಕಂಬಗಳನ್ನು ತೆರವುಗೊಳಿಸಿ, ನೂತನವಾಗಿ ನಿರ್ಮಾಣ ಕಾರ್ಯಕ್ಕೆ ತಯಾರಿ ನಡೆದಿದೆ. ಕಾಡು ಪಾಲಾಗಿದ್ದ ನಿವೇಶನದೊಳಗೆ ಮುಚ್ಚಿಹೋಗಿದ್ದ ಕಟ್ಟಡಕ್ಕೆ ಕಾಯಕಲ್ಪ ಗೋಚರಿಸತೊಡಗಿದೆ. ಗುತ್ತಿಗೆದಾರರ ಪ್ರಕಾರ ಮುಂದಿನ ಫೆಬ್ರವರಿ ವೇಳೆಗೆ ಕಾಮಗಾರಿ ಪೂರೈಸಲು ಯೋಜನೆ ಕೈಗೊಳ್ಳಲಾಗಿದೆ.