ಮಡಿಕೇರಿ, ಸೆ. 18: ಚೆಟ್ಟಳ್ಳಿ- ಕತ್ತಲೆಕಾಡು ನಡುವೆ ಅಪಾಯದಂಚಿನಲ್ಲಿರುವ ರಸ್ತೆಯನ್ನು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪರಿಶೀಲಿಸಿದರು.ಈ ರಸ್ತೆಯ ಕುರಿತು ‘ಶಕ್ತಿ’ಯಲ್ಲಿ ತಾ. 16 ರಂದು ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಅನೇಕ ಸ್ಥಳಗಳನ್ನು ಪರಿಶೀಲಿಸಿದರು. ರಸ್ತೆ ತೀರಾ ಹದಗೆಟ್ಟಿದ್ದು ಕೂಡಲೇ ದುರಸ್ತಿಗೊಳಿಸದೇ (ಮೊದಲ ಪುಟದಿಂದ) ಹೋದಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಅಪಾಯ ಕಾದಿದೆ. ಚೆಟ್ಟಳ್ಳಿ ಸಂಪರ್ಕವೇ ಕಡಿತಗೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯರು ಶಾಸಕರ ಗಮನ ಸೆಳೆದರು.ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕರು, ಕತ್ತಲೆಕಾಡು - ಚೆಟ್ಟಳ್ಳಿ ಸಂಪರ್ಕ ರಸ್ತೆ ದುರಸ್ತಿ ಮತ್ತು ಭೂಕುಸಿತ ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಲಾಗುತ್ತದೆ. ಸರ್ಕಾರಕ್ಕೆ ಈ ಸಂಬಂಧಿತ ಸುಮಾರು ರೂ. 13 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಮಳೆ ನಿಂತ ಕೂಡಲೇ ಮತ್ತೊಮ್ಮೆ ತಜ್ಞರೊಂದಿಗೆ ಸ್ಥಳ ಪರಿಶೀಲಿಸಿ ಮುಂದಿನ ದಿನಗಳಲ್ಲಿ ರಸ್ತೆ ಮತ್ತಷ್ಟು ಹಾನಿಗೊಳಗಾದ ರೀತಿಯಲ್ಲಿ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ಕುಮಾರ್, ಇಂಜಿನಿಯರ್ ಪೀಟರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.