ಶ್ರೀಮಂಗಲ, ಸೆ. 18 : ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲಿಯೇ ಕೊಡಗು ಜಿಲ್ಲೆ ತನ್ನದೆ ಆದ ಛಾಪು ಮೂಡಿಸಿದೆ. ತನ್ನ ಉತ್ತಮ ಗ್ರಾಹಕ ಸ್ನೇಹಿ ವ್ಯವಹಾರ ಮತ್ತು ವಹಿವಾಟಿನಿಂದ ರಾಜ್ಯದಲ್ಲಿ ಕೊಡಗು ಜಿಲ್ಲೆಯ ಡಿ.ಸಿ.ಸಿ ಬ್ಯಾಂಕ್ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕೈಗಾರಿಕೆ ಸೇರಿದಂತೆ ಇತರ ಉದ್ಯಮ ಇಲ್ಲದೆ ಇಲ್ಲಿನ ಸಹಕಾರಿ ಕ್ಷೇತ್ರ ಕೃಷಿಕರನ್ನೆ ಅವಲಂಬಿಸಿದ್ದು, ಅವರ ಪ್ರಾಮಾಣಿಕ ಬೆಂಬಲದಿಂದ ಕೊಡಗಿನ ಸಹಕಾರಿ ಕ್ಷೇತ್ರ ಬೆಳೆದಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯ ಪಟ್ಟರು. (ಮೊದಲ ಪುಟದಿಂದ) ಟಿ.ಶೆಟ್ಟಿಗೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 19ನೇ ಶಾಖೆಯನ್ನು ಉದ್ಘಾಟಿಸಿ ನಂತರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸರಕಾರ ನೀಡಿರುವ ಬೆಳೆಗಾರರ ಸಾಲ ಮನ್ನಾದ ಸೌಲಭ್ಯದಿಂದ ಕೆಲವು ಬೆಳೆಗಾರರು ವಂಚಿತರಾಗಿದ್ದು, ಇದನ್ನು ಸರಕಾರದ ಮಟ್ಟದಲ್ಲಿ ಇತ್ಯರ್ಥ ಪಡಿಸಲು ಮತ್ತು ಸಾಲ ಮನ್ನಾ ಸೌಲಭ್ಯದ ಬಾಕಿ ಹಣವಾದ 10 ಕೋಟಿ ರೂ. ಅನ್ನು ಸರಕಾರದಿಂದ ಡಿ.ಸಿ.ಸಿ. ಬ್ಯಾಂಕಿಗೆ ಬಿಡುಗಡೆ ಮಾಡಲು ಗಮನ ಸೆಳೆದು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ ಲಾಕ್‍ಡೌನ್‍ನಿಂದ ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ. ಸರಕಾರಿ ನೌಕರರಿಗೆ ವೇತನ ನೀಡಲು ಸಹ ಹಣದ ಅಭಾವ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದಿಂದ ರೂ. 33 ಸಾವಿರ ಕೋಟಿ ಹಣವನ್ನು ಸಾಲವಾಗಿ ಪಡೆಯಲಾಗಿದೆ ಎಂದು ಹೇಳಿದರು.
ಇಡೀ ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ರಾಜ್ಯ ಸರಕಾರ ಘೋಷಣೆ ಮಾಡಿರುವುದರಿಂದ ಕೇಂದ್ರ ಸರಕಾರದ ಮೂಲಕ ಎನ್.ಡಿ.ಆರ್.ಎಫ್ ಅನುದಾನ ಬಿಡುಗಡೆಯಾದ ನಂತರ ಬೆಳೆ ನಷ್ಟಗೊಂಡ ಬೆಳೆಗಾರರಿಗೆ ಪರಿಹಾರ ದೊರೆಯಲಿದೆ. ಮುಖ್ಯ ಮಂತ್ರಿಗಳು ದೆಹಲಿಗೆ ತೆರಳಿದ್ದು, ಹೆಚ್ಚು ಪರಿಹಾರ ತರುವ ನಿರೀಕ್ಷೆಯಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, 1921ರಲ್ಲಿ ಮಡಿಕೇರಿಯಲ್ಲಿ ಡಿ.ಸಿ.ಸಿ. ಬ್ಯಾಂಕ್ ರಾವ್‍ಬಹದ್ದೂರ್ ಕೊಡಂದೇರ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿದ್ದು, ಡಿ.ಸಿ.ಸಿ. ಬ್ಯಾಂಕಿಗೆ 99 ವರ್ಷದ ಇತಿಹಾಸವಿದೆ.
2021ರಲ್ಲಿ ಶತಮಾನೋತ್ಸವ ಆಚರಿಸಲಿರುವ ಡಿ.ಸಿ.ಸಿ. ಬ್ಯಾಂಕ್ ಇದರ ನೆನಪಿಗೆ ಮಡಿಕೇರಿಯಲ್ಲಿ ರೂ.10 ಕೋಟಿ ಸ್ವಂತ ಬಂಡವಾಳದಿಂದ 5 ಅಂತಸ್ತಿನ ಕಚೇರಿ ನಿರ್ಮಿಸಲು ಯೋಜನೆ ರೂಪಿಸಿದೆ. ಕಳೆದ 6 ವರ್ಷದಿಂದ 9 ಶಾಖೆಯನ್ನು ಜಿಲ್ಲೆಯ ವಿವಿಧೆಡೆ ಜನರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ 1.25 ಲಕ್ಷ ಗ್ರಾಹಕರನ್ನು ಹೊಂದಿದ್ದು, ಉಳಿದ ಶಾಖೆಗಳನ್ನು ತೆರೆದ ನಂತರ ಗ್ರಾಹಕರ ಸಂಖ್ಯೆ 1.50 ಲಕ್ಷಕ್ಕೆ ತಲುಪಲಿದೆ ಎಂದು ಹೇಳಿದರು.
ಈಗಾಗಲೇ ಉತ್ತರ ಕೊಡಗಿನ ಹೆಬ್ಬಾಲೆ ಮತ್ತು ಟಿ.ಶೆಟ್ಟಿಗೇರಿಯಲ್ಲಿ ಶಾಖೆ ಉದ್ಘಾಟನೆ ಮಾಡಲಾಗಿದೆ. ಬಾಳೆಲೆಯಲ್ಲಿ 26ರಂದು 20ನೇ ಶಾಖೆಯನ್ನು ಉದ್ಘಾಟನೆ ಮಾಡಲಾಗುವುದು. ಕೊಡ್ಲಿಪೇಟೆಯಲ್ಲಿ 21ನೇ ಶಾಖೆ, 22 ಮತ್ತು 23ನೇ ಶಾಖೆ ಸಂಪಾಜೆ ಮತ್ತು ಮಾದಾಪುರದಲ್ಲಿ ಸ್ಥಾಪಿಸುವ ಉದ್ದೇಶವಿದೆ ಎಂದು ಹೇಳಿದರು.
ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಹಿನೆÀ್ನಲೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಸಾಲ ಮರುಪಾವತಿಸಲು ಹಿನ್ನಡೆಯಾಗುತ್ತಿದೆ. ಇದನ್ನರಿತು ಶಾಸಕರು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ ಬೆಳೆಗಾರರಿಗೆ ನೆರವು ಒದಗಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ರಾಜ್ಯ ಸರಕಾರದಿಂದ ಇತ್ತೀಚೆಗೆ ಮತ್ತೊಂದು ಸುತ್ತೋಲೆ ಬಂದಿದ್ದು, ಇನ್ನು ಮುಂದೆ ಕೆ.ಸಿ.ಸಿ. ರುಪೇ ಕಾರ್ಡ್ ಮೂಲಕ ಮಾತ್ರ ಸಾಲ ಬಿಡುಗಡೆ ಮಾಡಲು ಸೂಚಿಸಿದೆ. ಇದಲ್ಲದೆ ಜಿಲ್ಲೆಯ 71 ಸಹಕಾರ ಸಂಘಗಳಿಗೆ ಏಕರೂಪದ ಗಣಕೀಕೃತ ತಂತ್ರಾಂಶ ಅಳವಡಿಸಲು ಯೋಜನೆ ಹಾಕಿದ್ದು, ಇದಕ್ಕೆ ರೂ. 75 ಲಕ್ಷವನ್ನು ಡಿ.ಸಿ.ಸಿ. ಬ್ಯಾಂಕ್ ಮೀಸಲಿಟ್ಟಿದೆ. ತಮ್ಮ ಬ್ಯಾಂಕಿನಿಂದ ಸರಕಾರದ ಸಾಲ ಮನ್ನಾ ಯೋಜನೆಯಿಂದ 153 ಕೋಟಿ ಸಾಲ ಮನ್ನಾ ಮಾಡಿದ್ದು, ಬೆಳೆಗಾರರಿಗೆ ನೆರವು ನೀಡಲಾಗಿದೆ. ಇದರಲ್ಲಿ ಸರಕಾರದಿಂದ 143 ಕೋಟಿ ಮಾತ್ರ ಬ್ಯಾಂಕಿಗೆ ಸಂದಾಯವಾಗಿದ್ದು, ರೂ. 10 ಕೋಟಿ ಬರಲು ಬಾಕಿ ಇದೆ. ಸರಕಾರ ಸಂದಾಯ ಮಾಡದೇ ಇರುವುದರಿಂದ ಬ್ಯಾಂಕಿಗೆ 1.99 ಕೋಟಿ ಬಡ್ಡಿ ಮೂಲಕ ನಷ್ಟವಾಗಿದೆ. ಬಾಕಿ ಇರುವ ರೂ. 10 ಕೋಟಿ ಹಣವನ್ನು ಸರಕಾರದಿಂದ ಕೂಡಲೇ ಬಿಡುಗಡೆ ಮಾಡಿಕೊಡಲು ಶಾಸಕ ಕೆ.ಜಿ. ಬೋಪಯ್ಯ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭ ನೂತನ ಶಾಖೆಯ ನಾಮಫಲಕವನ್ನು ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಭದ್ರತಾ ಕೊಠಡಿಯನ್ನು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್, ನಗದು ಕೌಂಟರನ್ನು ಟಿ.ಶೆಟ್ಟಿಗೇರಿ ಸಹಕಾರ ಸಂಘದ ಅಧ್ಯಕ್ಷ ಮಚ್ಚಮಾಡ ಮುತ್ತಪ್ಪ ಉದ್ಘಾಟಿಸಿದರು.
ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಪಟ್ರಪಂಡ ರಘು ನಾಣಯ್ಯ, ಹೊಟ್ಟೇಂಗಡ ಎಂ. ರಮೇಶ್, ಕುಂಞಂಗಡ ಅರುಣ್ ಭೀಮಯ್ಯ, ಡಿ.ಕೆ. ಚಿಣ್ಣಪ್ಪ, ಎಸ್.ಪಿ. ಭರತ್ ಕುಮಾರ್, ಹೊಸೂರು ಸತೀಶ್ ಕುಮಾರ್, ಕಿಮ್ಮುಡೀರ ಜಗದೀಶ್, ಕೋಲತಂಡ ಸುಬ್ರಮಣಿ, ಉಷಾ ತೇಜಸ್ವಿ, ಗೋಪಾಲಕೃಷ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ, ನಬಾರ್ಡ್ ಎ.ಜಿ.ಎಂ. ಶ್ರೀನಿವಾಸ್, ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಮತ್ತಿತರು ಹಾಜರಿದ್ದರು.