ಮಡಿಕೇರಿ, ಸೆ. 18 : ನಿತ್ಯ ಆರಾಧನೆಯ ದೇವಾಲಯಗಳಲ್ಲಿ ಹೆಚ್ಚಿನ ಭದ್ರತೆ ಹಾಗೂ ಕೆಲವೊಂದು ವ್ಯವಸ್ಥೆಗಳು ಕಲ್ಪಿಸಿಕೊಳ್ಳುವಂತೆ ದೇವಾಲಯ ಸಮಿತಿ ಆಡಳಿತ ಮಂಡಳಿಯವರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ.ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ದೇವಾಲಯವೊಂದರ ಅರ್ಚಕರು ಹಾಗೂ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದು ದರೋಡೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರತಿ ಜಿಲ್ಲೆಯ ಪೊಲೀಸರಿಗೆ ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಡಿಕೇರಿ ನಗರ ವ್ಯಾಪ್ತಿಯ ದೇವಾಲಯ ಸಮಿತಿ ಪ್ರಮುಖರ ಸಭೆ ನಗರ ಪೊಲೀಸ್ ಠಾಣೆಯಲ್ಲಿ ನಡೆಯಿತು. ಸಭೆಯಲ್ಲಿ ನಗರ ಠಾಣಾಧಿಕಾರಿ ಅಂತಿಮ ಅವರು, ಎಲ್ಲ ದೇವಾಲಯಗಳಲ್ಲೂ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು, ಸಿ.ಸಿ. ಕ್ಯಾಮರಾದಲ್ಲಿ ದೇವಾಲಯದ ಆವರಣದಲ್ಲಿನ ಆಗು ಹೋಗುಗಳು (ಮೊದಲ ಪುಟದಿಂದ) ಸರಿಯಾಗಿ ದಾಖಲಾಗುವಂತೆ ಆವರಣದ ಸುತ್ತಲೂ ಸಮರ್ಪಕ ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಬೇಕು. ದೇವಾಲಯದಲ್ಲಿ ಶಸ್ತ್ರಾಸ್ತ್ರ ಸಹಿತ ಕಾವಲುಗಾರರೂ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು, ಹೆಚ್ಚಿಗೆ ಕಾಣಿಕೆ, ಹರಕೆ ಹಣಗಳು ಸಂಗ್ರಹವಾಗುವ ದೇವಾಲಯಗಳಲ್ಲಿ ಎರಡು - ಮೂರು ದಿನಗಳಿಗೊಮ್ಮೆ ಸಮಿತಿಯವರು ಸೇರಿ ಹಣವನ್ನು ತೆಗೆದು ಬ್ಯಾಂಕ್ ಖಾತೆಯಲ್ಲಿರಿಸಬೇಕು. ದೇಗುಲದಲ್ಲಿ ಹೆಚ್ಚಿನ ಆಭರಣಗಳಿದ್ದರೆ ಅವುಗಳನ್ನು ಲಾಕರ್ ಅಥವಾ ಖಜಾನೆಯಲ್ಲಿರಿಸಿ ಪ್ರಮುಖ ಪೂಜೆ ಉತ್ಸವಗಳಂದು ಮಾತ್ರ ಅಲಂಕರಿಸಬೇಕೆಂದು ಸೂಚನೆ ನೀಡಿದರು.

ಅಲ್ಲದೆ ಹೆಚ್ಚಿಗೆ ಜನ ಸೇರುವ ದೇವಾಲಯಗಳು ಹಾಗೂ ಉತ್ಸವಗಳ ಸಂದರ್ಭ ಪೊಲೀಸ್ ಬಂದೋಬಸ್ತ್ ಪಡೆದುಕೊಳ್ಳಬೇಕು. ರಾತ್ರಿ ವೇಳೆ, ಬಿಕ್ಷುಕರ ನೆಪದಲ್ಲಿ ಅಥವಾ ಯಾರಾದರೂ ಅಪರಿಚಿತರು ಬಂದಲ್ಲಿ ದೇವಾಲಯದ ಆವರಣದಲ್ಲಿ ತಂಗಲು ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಇಲಾಖಾ ಸಿಬ್ಬಂದಿಗಳು ಗಸ್ತು ವೇಳೆ ಸಂದರ್ಭದಲ್ಲೂ ಗಮನ ಹರಿಸಲಿದ್ದಾರೆ. ಆದರೂ ಸಮಿತಿಯ ಜಾಗರೂಕತೆ ವಹಿಸಬೇಕೆಂದು ಅಂತಿಮ ಹೇಳಿದರು. ನಗರ ವ್ಯಾಪ್ತಿಯ 18 ದೇವಾಲಯಗಳ ಪೈಕಿ 17 ದೇವಾಲಯ ಸಮಿತಿ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.