ಮಡಿಕೇರಿ, ಸೆ. 17: ಬುಧವಾರ ದಿನ ತನಗೆ ಮೊಬೈಲ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಚುಡಾಯಿಸಿದ್ದ ವ್ಯಕ್ತಿಗೆ ಚಪ್ಪಲಿ ಮೂಲಕ ಪ್ರಹರಿಸಿ ಮಡಿಕೇರಿ ಗೌಳಿಬೀದಿಯ ಮಹಿಳೆ ಪ್ರತೀಕಾರ ತೀರಿಸಿಕೊಂಡಿದ್ದರು. ಆಕೆಯೊಂದಿಗೆ ಓರ್ವ ಸಂಬಂಧಿ ಹಾಗೂ ಆಕೆಯ ಪರಿಚಯಸ್ಥರಾದ ಇತರ ಇಬ್ಬರು ಸೇರಿದಂತೆ ಚುಡಾಯಿಸಿದ ಮಡಿಕೇರಿಯ ಮೊಹಮ್ಮದ್ ಮುದಾಸಿರ್ ಎಂಬಾತನ ಮೇಲೆ ಮೂವರು ಹಲ್ಲೆ ನಡೆಸಿದ್ದರು. ಚಪ್ಪಲಿ ಪ್ರಹಾರದೊಂದಿಗೆÉÀ ಪೆಟ್ಟು ತಿಂದ ವ್ಯಕ್ತಿಯೇ ಚುಡಾವಣೆ ಆರೋಪಕ್ಕಾಗಿ ನಿನ್ನೆ ದಿನ ಪೊಲೀಸ್ ಅತಿಥಿ ಯಾಗಿದ್ದ. ಮಹಿಳೆಯು ತನ್ನನ್ನು ಚುಡಾಯಿಸಿದ್ದ ಮಡಿಕೇರಿಯ ಮೊಹಮ್ಮದ್ ಮುದಾಸಿರ್ ಎಂಬಾತನ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದ ಹಿನ್ನೆಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದರು.

ಈ ನಡುವೆ ಒಂದೆಡೆ ಪೊಲೀಸರು ಈ ಬಗ್ಗೆ ವಿವರ ತನಿಖೆ ನಡೆಸುತ್ತಿದ್ದಾಗ ಪೆಟ್ಟು ತಿಂದಿದ್ದ ಬಂಧಿತನಾಗಿದ್ದ ಮುದಾಸಿರ್ ಪ್ರತಿ ದೂರು ನೀಡಿದ್ದ. ತನ್ನನ್ನು ಬುಧವಾರ ಸಂಜೆ 5.30ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆಯ ಗೇಟಿನ ಬಳಿ ಬರುವಂತೆ ಮಹಿಳೆ ಸಂದೇಶ ರವಾನಿಸಿದ್ದರು. ಅದರನ್ವಯ ತಾನು ಸಕಾಲಕ್ಕೆ ತೆರಳಿ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಮುಂದೆ ನಿಂತಿದ್ದಾಗ ಮಹಿಳೆಯು ತಮ್ಮ ಸ್ಕೂಟಿಯಲ್ಲಿ ಕುಳಿತಿದ್ದವರು ಇಳಿದು ಬಂದು ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ಬಿಚ್ಚಿ ತನ್ನ ಮುಖಕ್ಕೆ ಹೊಡೆದು ನೋವುಂಟು ಮಾಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾನೆ.

ಅಲ್ಲದೆ ಆ ಮಹಿಳೆಯೊಂದಿಗೆ ಬಂದಿದ್ದ ಆಕೆಯ ಸಹವರ್ತಿಗಳಾದ ಇತರ ಮೂರು ಜನರು ಏಕಾಏಕಿ ತನ್ನನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದುದಾಗಿಯೂ ದೂರಿದ್ದಾನೆ.

ಈ ಮಧ್ಯೆ ನಿನ್ನೆ ಘಟನೆ ಬಳಿಕ ಈ ಹಲ್ಲೆ ಪ್ರಕರಣದ ವೀಡಿಯೋ ಚಿತ್ರೀಕರಣ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡತೊಡಗಿತು. ಈ ಬಗ್ಗೆಯೂ ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಒಂದೆಡೆ ಅಶ್ಲೀಲ ಸಂದೇಶ ಕಳುಹಿಸಿದ್ದುದಕ್ಕೆ ಮುದಾಸಿರ್ ಸೆರೆಯಾಗಿದ್ದರೆ; ಮತ್ತೊಂದೆಡೆ ಮುದಾಸಿರ್ ತನ್ನ ಮೇಲೆ ನಾಲ್ವರು ಹಲ್ಲೆ ನಡೆಸಿರುವದಾಗಿ ನೀಡಿದ ದೂರಿನ ಅನ್ವಯ ಚಪ್ಪಲಿಯಲ್ಲಿ ಪ್ರಹರಿಸಿದ ಮಹಿಳೆ ಸೇರಿದಂತೆ ಹಲ್ಲೆ ನಡೆಸಿದ ಆಕೆಯ ಸಹವರ್ತಿಗಳಾದ ಉಮೇಶ್, ಶ್ರೀನಿವಾಸ್, ಸತ್ಯ ಎಂಬವರುಗಳ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ. ಅಲ್ಲದೆ ಈ ನಾಲ್ವರನ್ನು ಕೂಡ ಕಾನೂನನ್ನು ತಾವೇ ಕೈಗೆತ್ತಿಕೊಂಡುದಕ್ಕಾಗಿ ಮಡಿಕೇರಿ ನಗರ ಪೊಲೀಸರು ಇಂದು ಬಂಧಿಸಿದ್ದಾರೆ. ಮಹಿಳೆ ತನ್ನನ್ನು ಚುಡಾಯಿಸಿದ್ದ ಮುದಾಸಿರ್ ವಿರುದ್ಧ ನೀಡಿದ್ದ ಪುಕಾರಿನ ಅನ್ವಯ ಕ್ರಮ ಕೈಗೊಂಡಿದ್ದ ಪೊಲೀಸರು, ಮುದಾಸಿರ್‍ನ ಪ್ರತಿ ದೂರನ್ನೂ ಪರಿಗಣಿಸಿ ಚಪ್ಪಲಿಯಲ್ಲಿ ಥಳಿಸಿದ ಮಹಿಳೆ ಸಹಿತ ನಾಲ್ವರನ್ನು ಬಂಧಿಸಿದ ಅಪರೂಪದ

(ಮೊದಲ ಪುಟದಿಂದ) ಸನ್ನಿವೇಶÀ ಕಂಡುಬಂದಿದೆ. ಎರಡು ಕಡೆಯೂ ದೂರುದಾರರು, ಎರಡು ಕಡೆಯೂ ಆರೋಪಿಗಳು ಎಂದು ಪರಿಗಣಿಸಲ್ಪಟ್ಟು ಕಾನೂನಿನ ಕ್ರಮಕ್ಕೆ ಒಳಗಾದ ಕುತೂಹಲಕಾರಿ ಪ್ರಕರಣ ಇದಾಗಿದೆ.

ಒಟ್ಟು ಐವರು ಇದೀಗ ಪೊಲೀಸರ ಸೆರೆಯಾಗಿದ್ದಾರೆ. ಅಲ್ಲದೆ ಹಲ್ಲೆ ಪ್ರಕರಣವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲ ತಾಣದ ಮೂಲಕ ಪ್ರಚುರಗೊಳಿಸಿದ ಹಿನ್ನೆಲೆಯಲ್ಲಿಯೂ ಮೊಕದ್ದಮೆ ದಾಖಲಾಗಿದ್ದು, ಇದರಲ್ಲಿ ಆರೋಪಿಗಳ್ಯಾರು ಎನ್ನುವ ಕುರಿತು ಇದೀಗ ಪ್ರತ್ಯೇಕ ತನಿಖೆ ನಡೆಯುತ್ತಿದೆ.