ಮಡಿಕೇರಿ, ಸೆ. 17: 2020ರ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲವಾರದ ಅವಧಿಯಲ್ಲಿ ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವನ್ಯಜೀವಿ ವಲಯದ ಆಬೈಲ್ನಲ್ಲಿ ಶ್ರೀಮಂಗಲ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳಾದ ವೀರೇಂದ್ರ ಮರಿಬಸವಣ್ಣನವರ್ ವನ್ಯಜೀವಿ ಸಂರಕ್ಷಣಾ ಕಾಯಿದೆಯ ವಿಧಿಗಳನ್ನು ಉಲ್ಲಂಘಿಸಿ ಎಂಟು ಯುವಕರ ತಂಡಕ್ಕೆ ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವನ್ಯಜೀವಿ ವಲಯದ ಆಬೈಲ್ನಲ್ಲಿ ರ್ಯಾಲಿ ನಡೆಸಲು ಮೌಖಿಕ ಆನುಮತಿ ನೀಡಿದ್ದಾರೆ. ಈ ಅನುಮತಿಯನ್ನು ಬಳಸಿದ ಯುವಕರ ತಂಡ ಎಂಟು ವಾಹನಗಳನ್ನು ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವನ್ಯಜೀವಿ ವಲಯದ ಆಬೈಲ್ಗೆ ಕೊಂಡೊಯ್ದು ದಾಂಧಲೆ ಎಬ್ಬಿಸಿದ್ದಾರೆ. ಇಲ್ಲಿನ ಶೋಲ ಅರಣ್ಯದ ಸೂಕ್ಷ್ಮ ಪರಿಸರವನ್ನು ಈ ರೀತಿಯಲ್ಲಿ ಯುವಕರ ತಂಡ ದಾಂಧಲೆ ಎಬ್ಬಿಸುತ್ತಿದ್ದರೂ, ಆಬೈಲ್ನಲ್ಲಿರುವ ಅಕ್ರಮ ಬೇಟೆ ತಡೆ ಶಿಬಿರದ ಸಿಬ್ಬಂದಿ ಮೂಕಪ್ರೇಕ್ಷಕರಾಗಿದ್ದರು ಎಂದು ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಆರೋಪಿಸಿದ್ದಾರೆ.ಇದೇ ಯುವಕರ ತಂಡ ಅದೇ ಅವಧಿಯಲ್ಲಿ ವೀರಾಜಪೇಟೆ ಪ್ರಾದೇಶಿಕ ವಿಭಾಗದ ಪೊನ್ನಂಪೇಟೆ ಪ್ರಾದೇಶಿಕ ವಲಯದ ಪುಲಿಯಾಟ್ ಬೈಲ್ನಲ್ಲಿಯೂ ರ್ಯಾಲಿ ನಡೆಸಿದ್ದಾರೆ.
2020ರ ಜೂನ್ ತಿಂಗಳಿನಲ್ಲಿ ಇದೇ ವಲಯದಲ್ಲಿ ಕಾನೂನು ಬಾಹಿರವಾಗಿ ಅರಣ್ಯ ಪ್ರವೇಶಿಸಿದ ಬೇಟೆಗಾರರ ತಂಡದ ಛಾಯಾಚಿತ್ರಗಳು ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮರಾ ಟ್ರ್ಯಾಪ್ನಲ್ಲಿ ದಾಖಲಾಗಿದ್ದರೂ, ಈ ಗಂಭೀರ ಪ್ರಕರಣದ ಕುರಿತು ಕ್ರಮ ಕೈಗೊಳ್ಳುವಲ್ಲಿ ಶ್ರೀಮಂಗಲ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳಾದ ವೀರೇಂದ್ರ ಮರಿಬಸವಣ್ಣನವರ್ ವಿಫಲರಾಗಿದ್ದರು.
ಈ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಶ್ರೀಮಂಗಲ
ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳು ಅರಣ್ಯ ಸಂರಕ್ಷಣೆಯ ಮಹತ್ವದ ಜವಾಬ್ದಾರಿ ನಿಭಾಯಿಸುವಲ್ಲಿ ಮತ್ತು ಈ ಉದ್ದೇಶಕ್ಕೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ರಕ್ಷಕರ ತಂಡಕ್ಕೆ ನಾಯಕತ್ವ ಮತ್ತು ಮಾರ್ಗದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಆಕ್ಷೇಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆಯ ವಿಧಿಗಳನ್ನು ಉಲ್ಲಂಘಿಸಿ ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವನ್ಯಜೀವಿ ವಲಯದ ಆಬೈಲ್ನಲ್ಲಿ ರ್ಯಾಲಿ ನಡೆಸಲು ಅವಕಾಶ ನೀಡಿದ ಶ್ರೀಮಂಗಲ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆಯ
ವಿಧಿಗಳನ್ನು ಉಲ್ಲಂಘಿಸಿ ಬ್ರಹ್ಮಗಿರಿ ಅಭಯಾರಣ್ಯದ ಶ್ರೀಮಂಗಲ ವನ್ಯಜೀವಿ ವಲಯದ ಆಬೈಲ್ನಲ್ಲಿ ಮತ್ತು ವೀರಾಜಪೇಟೆ ಪ್ರಾದೇಶಿಕ ಅರಣ್ಯ ವಿಭಾಗದ ಪೊನ್ನಂಪೇಟೆ ಪ್ರಾದೇಶಿಕ ವಲಯದ ಪುಲಿಯಾಟ್ ಬೈಲ್ನಲ್ಲಿ ರ್ಯಾಲಿ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ, ವೀರಾಜಪೇಟೆ ಪ್ರಾದೇಶಿಕ ವಿಭಾಗ ಮತ್ತು ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವುದಾಗಿ ಸೋಮಯ್ಯ ತಿಳಿಸಿದ್ದಾರೆ.