ಕಣಿವೆ, ಸೆ. 17: ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಕೊಡಗು ಜಿಲ್ಲಾ ಪರಿಷತ್ತಿನ ಮಾಜಿ ಸದಸ್ಯರು, ಕುಶಾಲನಗರದ ಕಾಂಗ್ರೆಸ್ ಮುಖಂಡರು ಆಗಿದ್ದ ಎಸ್.ಎನ್. ನರಸಿಂಹಮೂರ್ತಿ (73) ಗುರುವಾರ ಬೆಳಿಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದರು. ಮೃತರ ಅಂತ್ಯಕ್ರಿಯೆ ಕುಶಾಲನಗರದ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿಸಲಾಯಿತು. ಕುಶಾಲನಗರದ ಅಭಿವೃದ್ಧಿಯಲ್ಲಿ ಮೃತ ನರಸಿಂಹಮೂರ್ತಿ ಪಾತ್ರ ಅತೀ ಮುಖ್ಯವಾಗಿದ್ದು, ಕುಶಾಲನಗರ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರುವಾಗ ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ಎಂ.ಎಂ.ನಾಣಯ್ಯ ಹಾಗೂ ಟಿ. ಜಾನ್ ಅವರ ಸಹಕಾರ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಲ್ಲದೇ ಕುಶಾಲನಗರ ತಾಲೂಕು ಹೋರಾಟ, ಕುಶಾಲನಗರಕ್ಕೆ ಸಂಚಾರಿ ಠಾಣೆ, ಗ್ರಾಮಾಂತರ ಠಾಣೆ, ಉಪನೋಂದಣಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಅಭಿವೃದ್ಧಿಯಲ್ಲಿ ಇವರ ಪಾತ್ರ ಗಮನಾರ್ಹವಾದುದು. ಕುಶಾಲನಗರದ ಮಾರುತಿ ವಿದ್ಯಾ ಸಂಸ್ಥೆಯ ನಿರ್ದೇಶಕರಾಗಿ, ಪ್ರಮುಖ ಪ್ರವಾಸಿ ಧಾಮ ವೀರಭೂಮಿಯ ಸ್ಥಾಪಕ ನಿರ್ದೇಶಕರು ಹಾಗೂ ಹುಣಸೂರಿನ ಅನಾಥಾಶ್ರಮದ ಅಧ್ಯಕ್ಷರಾಗಿದ್ದರು. ಅಲ್ಲದೇ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ನಿರ್ದೇಶಕರಾಗಿಯೂ ಸೇವೆಯಲ್ಲಿದ್ದ ಇವರ ನಿಧನ ಕುಶಾಲನಗರಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ನಿಧನಾರ್ಥವಾಗಿ ಕುಶಾಲನಗರದ ಕನ್ನಿಕಾ ಹೊಟೇಲ್ ಸಭಾಂಗಣದಲ್ಲಿ ಸಭೆ ಸೇರಿದ ನಗರದ ಪ್ರಮುಖರು ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ

(ಮೊದಲ ಪುಟದಿಂದ) ಮೂಲಕ ಮೃತರ ಆತ್ಮಕ್ಕೆ ಗೌರವ ಸಲ್ಲಿಸಿದರು. ಕುಶಾಲನಗರದ ಸೇವಾಭಾರತಿ ಪದಾಧಿಕಾರಿಗಳು ಅಂತ್ಯಕ್ರಿಯೆ ನೆರವೇರಿಸಿದರು. ಮೃತರ ಸ್ಮರಣಾರ್ಥವಾಗಿ ಶುಕ್ರವಾರ ಕುಶಾಲನಗರದ ಕನ್ನಿಕಾ ಸಭಾಂಗಣದಲ್ಲಿ ಸಾರ್ವಜನಿಕರಿಂದ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ. ಮೃತರ ನಿಧನಕ್ಕೆ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕುಶಾಲನಗರದ ಹಿರಿಯ ನಾಗರಿಕರಾದ ಜಿ.ಎಲ್. ನಾಗರಾಜು, ಕನ್ನಿಕಾ ಹೊಟೇಲ್ ಮಾಲೀಕ ಬಿ.ಆರ್. ನಾಗೇಂದ್ರಪ್ರಸಾದ್, ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ, ಜಿಲ್ಲಾ ಪಂಚಾಯತಿ ಸದಸ್ಯೆ ಕೆ.ಪಿ.ಚಂದ್ರಕಲಾ, ಮಾಜಿ ಸದಸ್ಯ ವಿ.ಪಿ.ಶಶಿಧರ್, ಕೂಡ ಮಾಜಿ ಅಧ್ಯಕ್ಷ ಮಂಜುನಾಥ ಗುಂಡುರಾವ್, ಪಟ್ಟಣ ಪಂ ಚಾಯತಿ ಸದಸ್ಯ ಬಿ.ಅಮೃತರಾಜು, ಪ್ರಮೋದ್, ನಿವೃತ್ತ ಶಿಕ್ಷಕ ಎಂ.ಹೆಚ್.ನಜೀರ್ ಅಹಮದ್, ಕುಶಾಲನಗರ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ.ನಾಗೇಶ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.