ಮಾನವನು ಈ ಭೂಮಿಯಲ್ಲಿ ಸೃಷ್ಟಿಯಾದಾಗ ಅವನೊಂದಿಗೆ ಹಲವಾರು ಜಲಚರ, ಸಸ್ತನಿಗಳು, ಉಭಯವಾಸಿಗಳಂತಹ ಜೀವರಾಶಿಗಳನ್ನು ಸಹಕಾರಿ ಯಾಗಲೆಂದೇ ಭಗವಂತನು ಸೃಷ್ಟಿಸಿದ. ಇದನ್ನು ಕಡೆಗಣಿಸಿ ಮೆರೆವ ಮಾನವನಿಗೆ ಒಂದಿಲ್ಲೊಂದು ರೀತಿಯಲ್ಲಿ ಕೇಡಾಗುತ್ತಿರುವುದಂತೂ ಸತ್ಯದ ಮಾತು. ಸೂಕ್ಷ್ಮಾನುಸೂಕ್ಷ್ಮ ಬ್ಯಾಕ್ಟೀರಿಯಾಗಳಿಂದ ಮೊದಲ್ಗೊಂಡು ಆನೆ ಗಾತ್ರದ ಪ್ರಾಣಿಯವರೆಗೂ ಈ ಮಣ್ಣ ಮೇಲೆ ವಾಸಿಸುವ ಪ್ರಾಣಿಗಳಾದರೆ, ಆಳ ಸಮುದ್ರದ ಒಳಗೂ ಜಲಚರಗಳು ಇರುವುದು ಮಾನವನ ಬದುಕಿಗಾಗಿ. ಹಾರುವ ಪಕ್ಷಿಗಳು, ಬಾವಲಿ, ಗೂಬೆಗಳಂತಹ ನಿಶಾಚರ ಸಸ್ತನಿಗಳು ನಿಗೂಢವಾಗಿದ್ದುಕೊಂಡೇ ಮಾನವನಿಗೆ ಸಹಕಾರಿಯಾಗಿದೆ. ತಾನೊಬ್ಬನೇ ಸರ್ವವ್ಯಾಪಿ ಎಂದು ಅರಿತ ಮನುಷ್ಯನಿಗೆ ಅವುಗಳೆಲ್ಲಾ ಇರದೆ ತನಗೆ ಭವಿಷ್ಯವಿಲ್ಲ ಎಂಬುದನ್ನು ಅರ್ಥೈಸದೆ ಕಡೆಗಣಿಸಿ ಬದುಕುತ್ತಿದ್ದಾನೆ. ಪ್ರಕೃತಿಯಲಿ ಬದುಕಿರುವ ಎಲ್ಲ ಪ್ರಾಣಿಗಳು ಮಾನವನ ಒಳಿತಿಗಾಗಿಯೇ ಬದುಕುತ್ತಿದೆ. ದುರಂತವೆಂದರೆ ಮಾನವ ಮಾತ್ರ ಪ್ರಾಣಿಗಳನ್ನು ಕೊಂದು ತಿನ್ನುತ್ತಲೇ ಬದುಕುತ್ತಿದ್ದಾನೆ. ರೈತನೊಂದಿಗೆ, ರೈತನ ಮಿತ್ರನಾಗಿ ಎರೆಹುಳುಗಳು, ಫಸಲಿಗೆ ಬರುವ ಬೆಳೆಗಳನ್ನು ನಾಶ ಮಾಡುವ ಮಿಡತೆಗಳ ನಿಯಂತ್ರಣಕ್ಕಾಗಿ ಪಕ್ಷಿಗಳನ್ನು ಸೃಷ್ಟಿಸಿರುವುದು ನಿಸರ್ಗದ ಅದ್ಭುತವೇ ಸರಿ. ಅರಣ್ಯದೊಳಗಿನ ಕಾಡು ಪ್ರಾಣಿಗಳನ್ನು ಬಿಟ್ಟರೆ, ಅವುಗಳಿಗಿಂತ ಹೆಚ್ಚಾಗಿ ರೈತನೊಂದಿಗೆ ನಿಕಟಸಂಪರ್ಕ ಹೊಂದಿ ರೈತನೊಂದಿಗೆ ಹೊಲ ಗದ್ದೆಗಳಲ್ಲಿ ಕೃಷಿ ಕಾಯಕಗಳಲ್ಲಿ ತೊಡಗಿಸಿಕೊಂಡಿರುವ ಒಂದು ಪವಿತ್ರ ಪ್ರಾಣಿಯೆಂದರೆ, ಅದು ಎತ್ತು ಮಾತ್ರ.

ಅಂದು ಸಾರಿಗೆ ಸಂಪರ್ಕಗಳು ವಿರಳವಾಗಿದ್ದಾಗ ಬಡವನ, ರೈತನ, ಸಾಗುವಳಿದಾರರ ಪ್ರಮುಖ ಸಂಪರ್ಕ ಸಾಗಾಟವು ಎತ್ತಿನಗಾಡಿಯ ಮುಖಾಂತರವೇ ಆಗುತಿತ್ತು. ಹಳ್ಳಿಗಳಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಸಂತೆಗಳಿಗೆ, ಜಾತ್ರೆಗಳಿಗೆ ಅಗತ್ಯ ವಸ್ತು ಸರಂಜಾಮುಗಳನ್ನು ಸಾಗಿಸಲು ಎತ್ತಿನ ಗಾಡಿಯೇ ಪ್ರಮುಖ ಸಂಪರ್ಕ ಸಾಧನವಾಗಿತ್ತು. ಎತ್ತುಗಳು ರೈತರ ಹೆಗಲಾಗಿ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವು. ಎತ್ತುಗಳ ಪಾತ್ರವಿಲ್ಲದೆ ಬಡವರ ಜೀವನ ದುಸ್ತರವಾಗಿತ್ತು. ಹಾಗಾಗಿ ರೈತರು ಎತ್ತುಗಳನ್ನು ಪಾಲನೆ ಪೋಷಣೆ ಮಾಡಿಕೊಳ್ಳುತ್ತಾ ಪ್ರೀತಿಯಿಂದ ತಮ್ಮ ಕುಟುಂಬದ ಒಬ್ಬನಂತೆ ಪ್ರೀತಿಯಿಂದ ಸಾಕುತ್ತಿದ್ದರು. ಪರಿಶ್ರಮದಿಂದಲೇ ಜೀವನ ನಡೆಸುವಾಗ ಎತ್ತುಗಳ ಅಗತ್ಯತೆಯನ್ನು ಅರಿತ ಅಂದಿನವರು, ಎತ್ತುಗಳ ಆರೋಗ್ಯದ ಬಗ್ಗೆ ತೀವ್ರ ನಿಗಾವಹಿಸುತ್ತಿದ್ದರು. ಅನಾರೋಗ್ಯ ಕಂಡುಬಂದರೆ ತಕ್ಷಣವೇ ಪಶು ವೈದ್ಯರಲ್ಲಿಗೆ ಧಾವಿಸುತ್ತಿದ್ದರು. ಗಾದೆ ಮಾತಿನಲ್ಲಿ ‘ಗಾಣದ ಎತ್ತಿನಂತೆ’ ಎಂಬ ಮಾತು ರೂಢಿಯಲ್ಲಿದೆ. ದುಡಿಮೆಗೆಂದು ಹೆಸರಾದ ಈ ಪ್ರಾಣಿ ಯಂತ್ರದಂತೆ, ಗಾಣದ ಮನೆಯಲ್ಲಿ ಹಗಲಿರುಳು ದುಡಿಯುತ್ತಿದ್ದವು. ಒಬ್ಬರ ಕೃಷಿ ಕೆಲಸವು ಮುಗಿದ ಮೇಲೆಯೂ ಅವುಗಳಿಗೆ ವಿರಾಮವೇ ಸಿಗುತ್ತಿರಲಿಲ್ಲ. ಆರಂಭದ ಕೆಲಸಕ್ಕಾಗಿ ಮತ್ತೊಬ್ಬ ರೈತರು ತಮ್ಮ ಜಮೀನಿನಲ್ಲಿ ಉಳುವುದಕ್ಕಾಗಿ ಎತ್ತುಗಳನ್ನು ಎರವಲು ಪಡೆಯುತ್ತಿದ್ದರು. ಪ್ರತಿಯೊಂದು ಊರ ಜಾತ್ರೆಗಳು, ರೈತರಿಗೆ ಪ್ರಮುಖವಾಗಿ ಎತ್ತುಗಳನ್ನು ಖರೀದಿಸುವ ಪ್ರಮುಖ ಸ್ಥಳವೆಂದು ಗುರುತಿಸಲ್ಪಡುತ್ತಿದ್ದವು. ಅಂದು ಬೇಸಿಗೆ ಕಾಲದಲ್ಲಿ ಕಟ್ಟಿಗೆಗಳು ಮತ್ತು ಸಂತೆಗಳಿಗೆ ವಸ್ತುಗಳನ್ನು ಸಾಗಾಟ ಮಾಡಲು ಎತ್ತುಗಳನ್ನೇ ಅವಲಂಬಿಸಿ ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದರು. ಮಳೆಗಾಲಗಳಲ್ಲಿ ಬೇಸಾಯಕ್ಕಾಗಿ, ದುಡಿಯುತ್ತಿದ್ದ ಎತ್ತುಗಳು ಮಾನವನೊಂದಿಗೆ ಸುಲಭವಾಗಿ ಹೊಂದಿಕೊಂಡು ಸಹಕಾರಿಯಾಗುತ್ತಿದ್ದ ಅತ್ಯಂತ ನಂಬಿಕೆಯ ಪ್ರಾಣಿಯೆನಿಸಿಕೊಂಡಿತು. ಪ್ರಕೃತಿಯಲ್ಲಿ ಬದಲಾಗುತ್ತಿದ್ದಂತಹ ಎಲ್ಲಾ ಋತುಮಾನಗಳಲ್ಲೂ ಅವು ಹೊಂದಿಕೊಳ್ಳುತ್ತಿದ್ದವು. ಪ್ರೀತಿ, ನಂಬಿಕೆ, ವಿಶ್ವಾಸಕ್ಕೆ ಹೆಸರಾಗಿದ್ದ ಪ್ರಾಣಿಗಳು ತನ್ನನ್ನು ಪೋಷಣೆ ಮಾಡುತ್ತಿದ್ದ ಮಾಲೀಕನ ಮೇಲೂ ಅತ್ಯಂತ ಪ್ರೀತಿಯಿಂದ ಹೊಂದಿಕೊಂಡು ಸಹಕರಿಸುತ್ತಿದ್ದವು. ಮನೆ ಮಂದಿಯೊಂದಿಗೆ ಬೆರೆತುಕೊಂಡು ತನ್ನನ್ನು ಸಾಕಿದ ಮಾಲೀಕನೇನಾದರೂ ದುರ್ಮರಣಕ್ಕೀಡಾದಾಗ ಕಣ್ಣೀರು ಹಾಕುತ್ತಿದ್ದ ಎತ್ತುಗಳ ಮೂಕವೇದನೆ ಯಾರಿಗರ್ಥವಾಗುವುದೋ? ಮನೆಯಲ್ಲಿ ಎತ್ತುಗಳಿದ್ದರೆ ಅದು ಮನೆ ಮಗನಂತೆ ಅನ್ನುವ ಹಳ್ಳಿಯ ಜನಗಳ ಅನುಭವ ಖಂಡಿತ ಸತ್ಯ. ಅದಕ್ಕಾಗಿಯೇ ಅವುಗಳ ಸಹಕಾರವನ್ನು ಅರಿತ ಮಾನವನು, ಇಂದಿಗೂ ಹಳ್ಳಿಗಳಲ್ಲಿ ಎತ್ತುಗಳನ್ನು ಶುಭವೆಂಬಂತೆ ಮನೆಯ ಮುಂಬಾಗಿಲ ಕೊಠಡಿ ಯಲ್ಲಿಯೇ ಕಟ್ಟಿ ಹಾಕುತ್ತಾರೆ. ಬೆಳಿಗ್ಗೆ ಎದ್ದು ಮೊದಲು ಅವುಗಳ ಮುಖವನ್ನು ನೋಡಿ ಸಂತ್ರಪ್ತಗೊಳ್ಳುತ್ತಾರೆ. ಹಬ್ಬ-ಹರಿದಿನಗಳಲ್ಲಿ ಎತ್ತುಗಳನ್ನು ‘ಕಿಚ್ಚು’ ಹಾಯಿಸುವುದರ ಮುಖಾಂತರ ರೋಗ ರುಜಿನಗಳು ಬಾರದಂತೆ ಆಚರಿಸುವ ಕ್ರಮ ಈಗಲೂ ಹಳ್ಳಿಗರಲ್ಲಿ ಸಂಪ್ರದಾಯವಾಗಿ ಆಚರಿಸಿಕೊಂಡು ಬರುತ್ತಿದೆ. ಬಸವ ಜಯಂತಿ ಮುಂತಾದ ಕಾರ್ಯಕ್ರಮಗಳಲ್ಲಿ ಎತ್ತುಗಳನ್ನು ಶೃಂಗಾರಗೊಳಿಸಿ ಗಾಡಿಗಳಲ್ಲಿ ಮೆರವಣಿಗೆ ಹೊರಡುತ್ತಿದ್ದರು. ತನ್ನ ನೆಚ್ಚಿನ ನಟನೊಬ್ಬನ ಸಿನಿಮಾ ಬಿಡುಗಡೆಯಾದಾಗ ದೂರದ ಊರುಗಳಿಂದ ಎತ್ತಿನ ಗಾಡಿಯಲ್ಲೇ ತಂಡೋಪ ತಂಡವಾಗಿ ಸಿನಿಮಾಗಳನ್ನು ನೋಡಿಕೊಂಡು ಹೋಗುತ್ತಿದ್ದ ಕಾಲವೊಂದಿತ್ತು. ಬಡವನ ಮನೆಯ ಸೇವಕನಾಗಿ, ವರ್ಷಾನುಗಟ್ಟಲೆ ರೈತನೊಂದಿಗಿರುತ್ತಿದ್ದ ಎತ್ತುಗಳು ಆಯಸ್ಸು ಕಳೆದು ಮರಣಹೊಂದಿದಾಗ ಸಾಕಿದ ಮಾಲೀಕನು ಎತ್ತುಗಳಿಗಾಗಿ ಗೋರಿಗಳನ್ನು ಕಟ್ಟಿಸಿದ ನಿದರ್ಶನಗಳಿವೆ. ಅಂದೊಮ್ಮೆ ಭವ್ಯ ಪರಂಪರೆಯಿಂದ ಮೆರೆದ ಎತ್ತುಗಳ ಇತಿಹಾಸವು ಅಂದಿನವರಿಗಷ್ಟೇ ಗೊತ್ತು! ಕಾಲ ಚಕ್ರವು ಉರುಳಿದಂತೆ ವ್ಯಕ್ತಿಗತವಾಗಿ ಬದಲಾಗಿ ಬಿಡುವ ಇಂದಿನ ಕಾಲದಲ್ಲಿ ಎಲ್ಲವೂ ಲಾಭದ ಹಿತದೃಷ್ಟಿ ಯಿಂದಲೇ ನೋಡು ವಂತಾಗಿದೆ. ಅದಕ್ಕಾಗಿಯೇ ಏನೋ ಹಸುಗಳು ಗಂಡು ಕರು ಹಾಕಿದರೆ ಮೂಗು ಮುರಿಯುವವರೇ ಹೆಚ್ಚು...!

? ಕೆ.ವಿ. ಪುಟ್ಟಣ್ಣ ಆಚಾರ್ಯ, ಸೋಮವಾರಪೇಟೆ.