ಸೋಮವಾರಪೇಟೆ, ಸೆ. 17: ಅಂಗನವಾಡಿಯ ಸಹಾಯಕಿ ನೀಡಿದ ಮಾತ್ರೆ ಸೇವಿಸಿ ಒಂದು ವರ್ಷದ ಮಗು ತೀವ್ರ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರಿಗೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿಗಳು ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಠಾಣಾಧಿಕಾರಿಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದ ಪಲ್ಲವಿ ಮತ್ತು ಕಿರಣ್ ದಂಪತಿಯ ಒಂದು ವರ್ಷದ ಮಗುವಿಗೆ ತಾ. 7ರಂದು ಪೂರ್ವಾಹ್ನ 11 ಗಂಟೆಗೆ ಬೆಸೂರು ಅಂಗನವಾಡಿ ಕೇಂದ್ರದ ಸಹಾಯಕಿ, ಜಂತುಹುಳುವಿನ ಮಾತ್ರೆ ಕೊಡುವ ನೆಪದಲ್ಲಿ ಮನೆಗೆ ಆಗಮಿಸಿ, ಸರಿಯಾದ ಪ್ರಮಾಣದಲ್ಲಿ ಮಾತ್ರೆ ಕೊಡದೇ ಯಾವದೋ ಔಷಧಿ ನೀಡಿದ್ದು, ನಮ್ಮ ಮೇಲಿನ ಹಳೆ ದ್ವೇಷದಿಂದ ಮಗುವಿನ ಕೊಲೆ ಪ್ರಯತ್ನ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ತಾ. 7ರಂದು ದೂರು ನೀಡಲಾಗಿದೆ. ದೂರಿನ ವಿಚಾರಣೆ ನಡೆಸದ ಹಿನ್ನೆಲೆ ಮತ್ತೆ ತಾ. 9 ರಂದು ಪ್ರತ್ಯೇಕ ದೂರು ನೀಡಿದ್ದರೂ, ಠಾಣಾಧಿಕಾರಿಗಳು ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಶನಿವಾರಸಂತೆ ಠಾಣಾಧಿಕಾರಿಗಳ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ.

ತಾ. 7ರಂದು ಅಂಗನವಾಡಿ ಸಹಾಯಕಿ ನೀಡಿದ ಮಾತ್ರೆ ಸೇವಿಸಿ ಮಗು ಅಸ್ವಸ್ಥಗೊಂಡಿದ್ದು, ತಕ್ಷಣ ಶನಿವಾರಸಂತೆ ಆಸ್ಪತ್ರೆಗೆ ದಾಖಲಿಸಿದ್ದೇವೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬೇರೆ ಆಸ್ಪತ್ರೆಗೆ ಸಾಗಿಸುವಂತೆ ವೈದ್ಯರು ತಿಳಿಸಿದ ಮೇಲೆ, ಡಿಸ್ಚಾರ್ಜ್ ಮಾಡಿಕೊಂಡು ಶನಿವಾರಸಂತೆ ಠಾಣೆಯಲ್ಲಿ ದೂರು ದಾಖಲಿಸಿ, ಅರಕಲಗೂಡಿಗೆ ಮಗುವನ್ನು ಕರೆದೊಯ್ದಿದ್ದೇವೆ ಎಂದು ದೂರಿನಲ್ಲಿ ವಿವರಣೆ ನೀಡಿದ್ದಾರೆ.

ತಾ. 7ರಂದು ನೀಡಿದ ದೂರಿಗೆ ಯಾವದೇ ಕ್ರಮ ಕೈಗೊಳ್ಳದ ಹಿನ್ನೆಲೆ ತಾ. 9ರಂದು ಮತ್ತೊಮ್ಮೆ ಠಾಣೆಗೆ ತೆರಳಿ ದೂರು ನೀಡಿದ್ದೇವೆ. ಆದರೂ ನ್ಯಾಯ ಒದಗಿಸಿಲ್ಲ. ಇದಾದ ನಂತರ ತಾ.14 ರಂದು ಮೊಬೈಲ್‍ಗೆ ಕರೆ ಮಾಡಿ ಠಾಣೆಗೆ ಬರುವಂತೆ ಧಮಕಿ ಹಾಕಿದ್ದು, ಖಾಲಿ ಕಾಗದಗಳ ಮೇಲೆ ಸಹಿ ಹಾಕಿಸಿಕೊಂಡು, ತಾ. 8ರಂದು ದೂರು ಸ್ವೀಕರಿಸಿದಂತೆ ಹಿಂಬರಹ ನೀಡಿದ್ದಾರೆ. ಆದರೆ ತಾ. 8ರಂದು ನಾನು ಪೊಲೀಸ್ ಠಾಣೆಗೆ ತೆರಳಿಲ್ಲ. ಈ ಬಗ್ಗೆ ಸತ್ಯಾಸತ್ಯತೆಗಾಗಿ ಠಾಣೆಯ ಸಿ.ಸಿ. ಕ್ಯಾಮೆರಾ ಪರಿಶೀಲಿಸುವಂತೆ ಎಸ್.ಪಿ.ಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಅಂಗನವಾಡಿ ಸಹಾಯಕಿ ಹಾಗೂ ಪಲ್ಲವಿ ಕುಟುಂಬದ ನಡುವೆ ಇರುವ ಹಳೆ ವೈಷಮ್ಯದ ಹಿನ್ನೆಲೆ ಮಗುವಿಗೆ ಮಾತ್ರೆ ನೀಡಿ ಕೊಲೆ ಪ್ರಯತ್ನ ನಡೆಸಲಾಗಿದೆ. ಈ ಬಗ್ಗೆ ನೀಡಿದ ದೂರಿಗೆ ಪೊಲೀಸ್ ಅಧಿಕಾರಿಗಳು ಯಾವದೇ ಕ್ರಮ ಕೈಗೊಂಡಿಲ್ಲ. ತಾವುಗಳು ನ್ಯಾಯ ಒದಗಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಲಾಗಿದೆ.