ಸಿದ್ದಾಪುರ, ಸೆ. 17: ಕೊಡಗು ಜಿಲ್ಲಾ ಎ.ಐ.ಟಿ.ಯು.ಸಿ. (ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್) ನೂತನ ಜಿಲ್ಲಾ ಕಚೇರಿಯನ್ನು ಎ.ಐ.ಟಿ.ಯು.ಸಿ. ರಾಜ್ಯ ಘಟಕದ ಉಪಾಧ್ಯಕ್ಷ ಕೆ. ಗುಣಶೇಖರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಾರ್ಮಿಕರು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ಕಾನೂನನ್ನು ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಕಾರ್ಮಿಕರ ಪರವಾಗಿ ಎ.ಐ.ಟಿ.ಯು.ಸಿ ಸಂಘಟನೆಯು ಸದಾ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.
ಎ.ಐ.ಟಿ.ಯು.ಸಿ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾತನಾಡಿ, ಕಾರ್ಮಿಕರು ಕನಿಷ್ಟ ವೇತನ, ಆರೋಗ್ಯ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದ ಕೆಲವು ಯೋಜನೆಗಳು ಕಾರ್ಮಿಕರಿಗೆ ತಲುಪುತ್ತಿಲ್ಲ. ಎ.ಐ.ಟಿ.ಯು.ಸಿ. ಸಂಘಟನೆ ವತಿಯಿಂದ ಬಡ ಕಾರ್ಮಿಕರಿಗೆ ಸರ್ಕಾರದ ಯೋಜನೆಯ ಸೌಲಭ್ಯವನ್ನು ಪಡೆಯಲು ಸಹಕಾರ ನೀಡಲಾಗುವುದೆಂದು ತಿಳಿಸಿದರು.
ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ನೀಡುವ ಗುರುತಿನ ಚೀಟಿಯನ್ನು ಸಿ.ಪಿ.ಐ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುನಿಲ್ ವಿತರಿಸಿದರು. ಈ ಸಂದರ್ಭ ಸಿದ್ದಾಪುರದಲ್ಲಿ ಎ.ಐ.ಟಿ.ಯು.ಸಿ. ಸಂಘದ ಜಿಲ್ಲಾ ಕಚೇರಿ ಪ್ರಾರಂಭ ಮಾಡಲು ಶ್ರಮಿಸಿದ ಸಂಘಟನೆಯ ಮುಖಂಡ ಕರಡಿಗೋಡು ನಿವಾಸಿ ಎಂ.ಎ. ಕೃಷ್ಣ ರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಮರಣ ಹೊಂದಿದ ಸಿ.ಪಿ.ಎಂ. ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರುಗಳಿಗೆ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಎ.ಐ.ಟಿ.ಯು.ಸಿ ಚಿಕ್ಕಮಂಗಳೂರು ರಾಜ್ಯ ಕಾರ್ಯದರ್ಶಿ ಎನ್.ಸಿ ಹೋಬಯ್ಯ, ಕಟ್ಟಡ ಕಾರ್ಮಿಕರ ಸಂಘದ ಮುಖಂಡ ಎಂ.ಎ. ಕೃಷ್ಣ, ಎ.ಐ.ಟಿ.ಯು.ಸಿ ಹಾಸನ ಘಟಕದ ಜಿಲ್ಲಾ ಕಾರ್ಯದರ್ಶಿ ಧರ್ಮರಾಜ್, ಸಂಘಟನೆಯ ಮುಖಂಡರುಗಳಾದ ರಮೇಶ್ ಮಾಯಮುಡಿ, ಎ.ಐ.ವೈ.ಎಫ್. ಜಿಲ್ಲಾಧ್ಯಕ್ಷ ರಫೀಕ್, ಮಣಿ, ಕುಮಾರ್, ಗಣೇಶ್ ಇನ್ನಿತರರು ಹಾಜರಿದ್ದರು.