*ಸಿದ್ದಾಪುರ, ಸೆ. 17: ಇತ್ತೀಚೆಗಷ್ಟೇ ದೇವಾಲಯದ ಆವರಣದೊಳಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಪುಂಡಾನೆ ಇಂದು ಬೆಳಿಗ್ಗೆ ಮತ್ತೆ ದೇವಾಲಯಕ್ಕೆ ಬಂದಿದೆ. ದೇವಾಲಯದಲ್ಲಿ ದೀಪ ಹಚ್ಚುತ್ತಿದ್ದ ಭಕ್ತರೋರ್ವರ ಹೆಗಲಿಗೆ ಸೊಂಡಿಲು ಹಾಕಿದೆ. ಅದೃಷ್ಟವಶಾತ್ ಭಕ್ತರ ಶರ್ಟ್ ಮಾತ್ರ ಆನೆಗೆ ಸಿಕ್ಕಿದ್ದು, ಭಕ್ತ ಅಲ್ಲಿಂದ ಹೇಗೋ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ.
ಈ ಘಟನೆ ನಡೆದಿದ್ದು, ಅಭ್ಯತ್ಮಂಗಲ ಗ್ರಾಮದ ಶ್ರೀ ಬಸವೇಶ್ವರ ದೇವಾಲಯದಲ್ಲಿ, ಈ ದೇವಾಲಯದಲ್ಲಿ ಪ್ರತಿ ಸೋಮವಾರ ಮಾತ್ರ ಅರ್ಚಕರು ಪೂಜೆ ಮಾಡುತ್ತಾರೆ. ಇನ್ನುಳಿದ ದಿನಗಳಲ್ಲಿ ಸ್ಥಳೀಯರೇ ದೀಪ ಹಚ್ಚುವದಾಗಿದೆ. ಅಂತೆಯೇ ದೇವಾಲಯದ ಸನಿಹದಲ್ಲಿರುವ ದೋಲ್ಪಾಡಿ ರಮೇಶ್ ಎಂಬವರಿಗೆ ಊರವರು ಈ ಜವಾಬ್ದಾರಿಯನ್ನು ನೀಡಿದ್ದರು.
ಅದರಂತೆ ಬೆಳಿಗ್ಗೆ ರಮೇಶ್ ಅವರು, ದೇವಾಲಯದಲ್ಲಿ ದೀಪ ಹಚ್ಚುತ್ತಿದ್ದಾಗ ಹಿಂದಿನಿಂದ ಬಂದ ಕಾಡಾನೆ ಇವರ ಹೆಗಲಿಗೆ ಸೊಂಡಿಲು ಹಾಕಿದೆ. ಸೊಂಡಿಲಿಗೆ ಶರ್ಟ್ ಸಿಕ್ಕಿದ್ದು, ಅದನ್ನು ಆನೆ ಎಳೆದಿದೆ. ಶರ್ಟ್ ಹರಿದುಕೊಂಡ ರಮೇಶ್ ಆನೆ ಕಂಡು ಬೆದರಿ ಅಲ್ಲಿಂದ ಅದ್ಹೇಗೋ ಓಡಿ ಹೋಗಿ ಮನೆ ಸೇರಿದ್ದಾರೆ. ಶರ್ಟ್ ಕಿತ್ತುಕೊಂಡ ಆನೆ ಅಲ್ಲಿಯೇ ಸಮೀಪದಲ್ಲಿದ್ದ ನೀರಿನ ನಲ್ಲಿಯನ್ನು ಪುಡಿಗಟ್ಟಿ ಕಾಡಿಗೆ ಮರಳಿದೆ.
ಅಲ್ಲದೆ, ಕಳೆದ ರಾತ್ರಿ ಅಲ್ಲಿನ ನಿವಾಸಿಗಳಾದ ವೇದಾವತಿ ಅಜಿತ್ ಅವರುಗಳ ತೋಟಕ್ಕೆ ನುಗ್ಗಿ ಅಡಿಕೆ, ಕಾಫಿ ಗಿಡಗಳನ್ನು ನಾಶ ಮಾಡಿವೆ. ಗೀತಾ ಎಂಬವರು ತೋಟದಲ್ಲಿ ಕರಿಮೆಣಸಿಗೆ ಔಷಧಿ ಸಿಂಪಡಿಸಲೆಂದು ಇರಿಸಿದ್ದ ಡ್ರಂಗಳನ್ನು ಪುಡಿಗಟ್ಟಿವೆ. ಈ ಪುಂಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಅನುಮತಿ ಸಿಕ್ಕಿದ್ದು, ಸದ್ಯದಲ್ಲೇ ಕಾರ್ಯಾಚರಣೆ ನಡೆಯಲಿರುವದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
-ಅಂಚೆಮನೆ ಸುಧಿ