ಮಡಿಕೇರಿ, ಸೆ. 16: ವೀರಾಜಪೇಟೆಯ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಬ್ಯಾಂಕ್‍ನಲ್ಲಿ ಅವ್ಯವಹಾರದ ಕುರಿತು ‘ಶಕ್ತಿ’ ಬೆಳಕು ಚೆಲ್ಲುವದರೊಂದಿಗೆ, ಹಣ ದುರ್ಬಳಕೆ ಇತ್ಯಾದಿಯ ಬಗ್ಗೆ ವರದಿ ಪ್ರಕಟಿಸಿದ ಫಲಶೃತಿಯಾಗಿ ಇದೀಗ ಕೊಡಗು ಜಿಲ್ಲಾ ಸಹಕಾರ ಇಲಾಖೆಯಿಂದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಈ ಸಂಬಂಧ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ ಅವರು ಲಿಖಿತ ಆದೇಶ ಹೊರಡಿಸಿದ್ದಾರೆ.ಅಲ್ಲದೆ ವೀರಾಜಪೇಟೆಯ ಮುಸ್ಲಿಂ ಸಹಕಾರ ಬ್ಯಾಂಕ್‍ನಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಶಾಮಿಲಾಗಿ ಅವ್ಯವಹಾರ ಎಸಗಿರುವ ಅಂಶ ಪ್ರಾಥಮಿಕ ಹಂತದಲ್ಲಿ ಗೋಚರಿಸಿರುವ ಹಿನ್ನೆಲೆ, ಹೆಚ್ಚಿನ ತನಿಖೆಗಾಗಿ ಸಹಕಾರ ಇಲಾಖೆಯ ಮಾರಾಟ ವಿಭಾಗದ ಅಧಿಕಾರಿ ಎಸ್.ಎಂ. ರಘು ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ಆದೇಶ ನೀಡಿರುವದಾಗಿ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.(ಮೊದಲ ಪುಟದಿಂದ) ವೀರಾಜಪೇಟೆ ತಾಲೂಕು ಸಹಕಾರ ಇಲಾಖೆಯ ಅಧಿಕಾರಿಗಳು ವಿಷಯ ಗಮನಕ್ಕೆ ಬಂದೊಡನೆ ಸಂಬಂಧಿಸಿದ ಬ್ಯಾಂಕ್‍ಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸಿದೆ. ಈ ಹಂತದಲ್ಲಿ ಸಂಬಂಧಿಸಿದ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಮತ್ತು ಇತರರು ಶಾಮಿಲಾಗಿ ಅವ್ಯವಹಾರದೊಂದಿಗೆ, ಹಣ ದುರುಪಯೋಗ ಎಸಗಿರುವ ಅಂಶ ಬಹಿರಂಗಗೊಂಡಿದೆ. ಆ ಮೇರೆಗೆ 1959ರ ಪ್ರಕರಣ 64ರ ಅನ್ವಯ ತಾವು ತಾ. 14 ರಂದು ಅಧಿಕೃತ ಆದೇಶ ನೀಡಿ ಕಾನೂನು ಕ್ರಮಕ್ಕೆ ಸೂಚಿಸಿರುವದಾಗಿ ಸ್ಪಷ್ಟಪಡಿಸಿದ್ದಾರೆ.
ಕೊರೊನಾ ತೊಡಕು : ಕೊರೊನಾದಿಂದಾಗಿ ಕಾನೂನಿನ ಚೌಕಟ್ಟಿನಲ್ಲಿ ತನಿಖೆ ಆದೇಶದೊಂದಿಗೆ ವಿಚಾರಣೆಗೆ ಸ್ವಲ್ಪ ವಿಳಂಬವಾಗಿದೆ ಎಂದು ಅವರು ನೆನಪಿಸಿದ್ದಾರೆ.