ಮಡಿಕೇರಿ, ಸೆ. 16: ಬಂದೂಕು ಪರವಾನಗಿ ನವೀಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ಸಭೆಯಲ್ಲಿ ಮಾತನಾಡಿದ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ, ಹೊಸ ಬಂದೂಕು ಪರವಾನಗಿ ಅಥವಾ ಬಂದೂಕು ಪರವಾನಗಿ ನವೀಕರಣ ಪ್ರಕ್ರಿಯೆ ಜಿಲ್ಲಾಧಿಕಾರಿಯವರ ಮೂಲಕ ನಡೆಯಬೇಕು. ಪರವಾನಗಿ ಪಡೆಯುವಾಗ ಸಲ್ಲಿಸಲಾಗುವ ದಾಖಲಾತಿಗಳನ್ನು ಪರವಾನಗಿ ನವೀಕರಣದ ಸಂದರ್ಭವೂ ಹಾಜರುಪಡಿಸಬೇಕು ಎಂಬ ಆದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಂದೂಕು ಪರವಾನಗಿ ಪಡೆಯುವ ಸಂದರ್ಭವೇ ಅಗತ್ಯ ದಾಖಲಾತಿಗಳಿಗಾಗಿ ಹರಸಾಹಸಪಟ್ಟು ಎಲ್ಲವನ್ನು ಹಾಜರುಪಡಿಸಲಾಗಿರುತ್ತದೆ. ಹೀಗಿರುವಾಗ ನವೀಕರಣ ಸಂದರ್ಭವೂ ಆ ಎಲ್ಲಾ ದಾಖಲಾತಿಗಳನ್ನು ಮತ್ತೊಮ್ಮೆ ಸಲ್ಲಿಸಬೇಕು ಎಂಬ ಸೂಚನೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಈ ರೀತಿ ವಿನಾಕಾರಣ ತೊಂದರೆ ಕೊಡುವುದಾದರೆ ನಮ್ಮ ಬಳಿ ಇರುವ ಬಂದೂಕುಗಳನ್ನು ಹಿಂತಿರುಗಿಸಲು ಏನು ಮಾಡಬೇಕು ಎಂಬುದನ್ನು ತಿಳಿಸಿ; ನಾವು ಬಂದೂಕನ್ನು ನಿಮಗೇ ಹಿಂತಿರುಗಿಸುತ್ತೇವೆ ಎಂದು ತಹಶೀಲ್ದಾರ್ ಮಹೇಶ್ ಅವರೆದುರು ನಾಗೇಶ್ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧನಿಗೂಡಿಸಿದ ಮತ್ತೋರ್ವ ಸದಸ್ಯ ಅಪ್ರು ರವೀಂದ್ರ ಪರವಾನಗಿ ನವೀಕರಣ ಪ್ರಕ್ರಿಯೆ ತೀರಾ ವಿಳಂಬವಾಗುತ್ತಿದೆ. (ಮೊದಲ ಪುಟದಿಂದ) ಇದೇ ರೀತಿ ಮುಂದುವರೆದರೆ ಬಂದೂಕನ್ನು ಹಿಂತಿರುಗಿಸುವುದೊಂದೇ ಉಳಿದಿರುವ ದಾರಿ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹೇಶ್ ಅವರು, ಇತ್ತೀಚೆಗಿನ ನಿಯಮದಂತೆ ಜಿಲ್ಲಾಧಿಕಾರಿಯವರೆ ಬಂದೂಕು ಪರವಾನಗಿ ನೀಡಬೇಕು; ನವೀಕರಿಸಿಕೊಡಬೇಕು. ನವೀಕರಣ ಸಂದರ್ಭವೂ ಎಲ್ಲಾ ದಾಖಲೆಗಳನ್ನು ಹಾಜರುಪಡಿಸಬೇಕು. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಶಿರಸ್ತೇದಾರ್ ಪ್ರವೀಣ್ ನೂತನ ನಿಯಮದ ಬಗ್ಗೆ ಮಾಹಿತಿಯಿತ್ತರು.
ಆನೆ ಪ್ರತ್ಯಕ್ಷ! ಸದಸ್ಯರ ಅನುಭವ
ಮಡಿಕೇರಿ ತಾಲೂಕಿನ ಅರೆಕಾಡು ಮತ್ತಿತರ ಕಡೆಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ತಾನು ಬರುವಾಗಲೂ ತನ್ನ ವಾಹನದೆದುರು ಕಾಡಾನೆ ಪ್ರತ್ಯಕ್ಷವಾಗಿದೆ. ಕೆಲ ದಿನಗಳ ಹಿಂದೆ ಕಾಡಾನೆಗಳ ದಂಡು ದಿಢೀರ್ ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಅರೆಕಾಡಿನಿಂದ ಅತ್ತಿಮಂಗಲದವರೆಗೆ ಸುಮಾರು 4 ಕಿ.ಮೀ. ದೂರ ವಾಹನವನ್ನು ‘ರಿವರ್ಸ್’ ತೆಗೆದುಕೊಂಡು ಹೋಗಲಾಯಿತು. ಕಾಡಾನೆಗಳಿಂದಾಗಿ ಜನ ತತ್ತರಿಸಿಹೋಗಿದ್ದಾರೆ. ರಸ್ತೆ ಬದಿ ಒಂದು ಮರವನ್ನು ಕಡಿದರೆ ಪ್ರಶ್ನೆ ಮಾಡುವ ಅರಣ್ಯ ಇಲಾಖೆ ಕಾಡಾನೆಗಳ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾದರೆ ಜನರ ನೋವಿಗೆ ಸ್ಪಂದಿಸುವವರು ಯಾರು ಎಂದು ಸದಸ್ಯ ಅಪ್ರು ರವೀಂದ್ರ ಪ್ರಶ್ನಿಸಿದರು. ಈ ಬಗ್ಗೆ ಅರಣ್ಯ ಇಲಾಖೆಯ ಗಮನ ಸೆಳೆಯುವಂತೆ ಇಓ ಲಕ್ಷ್ಮಿ ಅವರಿಗೆ ಮನವಿ ಮಾಡಿದರು.
ಸ್ಮಶಾನಕ್ಕೆ ಜಾಗ ಕೊಡಿ
ನಾನು ಪ್ರತಿ ಸಭೆಯಲ್ಲೂ ಪೆರಾಜೆಗೆ ಸ್ಮಶಾನ ಜಾಗ ಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದೇನೆ. ನನ್ನ ಈ ಬೇಡಿಕೆಗೆ ಮನ್ನಣೆ ಸಿಗಲೇಬೇಕಿದೆ. ಜಾಗ ಒದಗಿಸಿ ಕೊಡಿ ಎಂದು ತಹಶೀಲ್ದಾರ್ ಎದುರು ಮನವಿ ಮಾಡಿದ ಸದಸ್ಯ ನಾಗೇಶ್ ಕುಂದಲ್ಪಾಡಿ, ಹಿರಿಯ ಸದಸ್ಯನಾಗಿರುವ ತನ್ನನ್ನು ಕಂಡು ಜನ ‘ಇವನಿಗೆ ಹೆಣ ಸುಡಲು ಜಾಗ ಒದಗಿಸಿ ಕೊಡಲಾಗಲಿಲ್ಲ’ ಎಂದು ಆಡಿಕೊಳ್ಳುವಂತೆ ಮಾಡದಿರಿ ಎಂದು ಕೋರಿದರು. ಸದಸ್ಯ ಅಪ್ರು ರವೀಂದ್ರ ಮಾತನಾಡಿ, ಅರೆಕಾಡಿನಲ್ಲಿ ಸುಮಾರು 13 ಎಕರೆ ಪೈಸಾರಿ ಜಾಗವಿದ್ದರೂ, ಸ್ಮಶಾನಕ್ಕೆ ಜಾಗ ಇಲ್ಲದಂತಾಗಿದೆ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ ಇಲ್ಲವಾದರೆ ಮುಂದೆ ಯಾವುದಾದರೂ ಸಾವು ಸಂಭವಿಸಿದರೆ ಗ್ರಾಮ ಪಂಚಾಯಿತಿ ಎದುರೇ ಶವವನ್ನು ಇಡಬೇಕಾಗುತ್ತದೆ ಎಂದು ನುಡಿದರು.
ಪೆರಾಜೆಯಲ್ಲಿ ಸರ್ವೆ ನಂ.138/1ರಲ್ಲಿ ಸ್ಮಶಾನಕ್ಕಾಗಿ ಜಾಗವನ್ನು ಮೀಸಲಿಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅರೆಕಾಡುವಿನಲ್ಲು ಕ್ರಮಕ್ಕೆ ಮುಂದಾಗಿದ್ದು, ಸದ್ಯದಲ್ಲೇ ಸಮಸ್ಯೆ ಬಗೆಹರಿಸುವುದಾಗಿ ತಹಶೀಲ್ದಾರ್ ಮಹೇಶ್ ಭರವಸೆಯಿತ್ತರು.
ದಾಖಲಾತಿ ಸರಿಪಡಿಸಿ
ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಬಹುತೇಕ ಶಾಲೆ ಹಾಗೂ ಅಂಗನವಾಡಿಗಳ ಜಾಗಕ್ಕೆ ಸೂಕ್ತ ದಾಖಲಾತಿಗಳಿಲ್ಲ. ಈ ಬಗ್ಗೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸದಸ್ಯರುಗಳು ಸಿಡಿಪಿಓ ಅರುಂಧತಿ ಅವರನ್ನು ಒತ್ತಾಯಿಸಿದರು. ಇಲ್ಲವಾದರೆ ಜಾಗಗಳು ಖಾಸಗಿಯವರ ಪಾಲಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಸಮಸ್ಯೆ ಪರಿಹಾರ ಸಂಬಂಧ ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಇಓ ಲಕ್ಷ್ಮಿ ಹೇಳಿದರು. ಕೂಡಲೇ ಈ ಕುರಿತು ಗಮನ ಹರಿಸುವಂತೆ ಅಧ್ಯಕ್ಷೆ ಶೋಭಾ ಮೋಹನ್ ಹೇಳಿದರು.
ಮಾಂಸದ ಅಂಗಡಿಗಳಿಗೆ ತಾಲೂಕು ವ್ಯಾಪ್ತಿಯಲ್ಲಿ ಪರವಾನಿಗೆ ನೀಡುವ ಮೊದಲು ಅದರ ತ್ಯಾಜ್ಯ ನಿರ್ವಹಣೆಗೂ ಮಾಲೀಕರಿಗೆ ಸೂಚನೆ ನೀಡಬೇಕು. ಈ ಸಂಬಂಧ ಸಿ.ಸಿ. ಕ್ಯಾಮರಾ ಅಳವಡಿಸಿ, ತಪ್ಪಿತಸ್ಥರ ವಿರುದ್ಧ ತಾಲೂಕು ಪಂಚಾಯ್ತಿ ವತಿಯಿಂದ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಅಪ್ರು ರವೀಂದ್ರ ಹೇಳಿದರು.
ಕೆಲವು ವ್ಯಾಪಾರಿಗಳು ಕೋಲ್ಡ್ ಸ್ಟೋರೆಜ್ಗೆಂದು ಪರವಾನಗೆ ಪಡೆದುಕೊಂಡು ಅಂಗಡಿಯಲ್ಲೆ ಮಾಂಸವನ್ನು ತುಂಡರಿಸಲಾಗುತ್ತಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಇಓ ಲಕ್ಷ್ಮಿ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಸಂತು ಸುಬ್ರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ದಬ್ಬಡ್ಕ ಶ್ರೀಧರ್, ವಿವಿಧ ಇಲಾಖಾಧಿಕಾರಿಗಳು ಇದ್ದರು.