ಮಡಿಕೇರಿ, ಸೆ. 16: ತಲಕಾವೇರಿ - ಭಾಗಮಂಡಲ ಕ್ಷೇತ್ರವನ್ನು ಪ್ರವಾಸಿ ತಾಣವೆಂಬ ವಿಚಾರದಿಂದ ಹೊರತುಪಡಿಸಿ ಇದನ್ನು ಪವಿತ್ರವಾದ ಧಾರ್ಮಿಕ ಕ್ಷೇತ್ರವನ್ನಾಗಿಯೇ ಪರಿಚಯಿಸಿ ಪಾವಿತ್ರ್ಯತೆ ಕಾಪಾಡುವ ಕುರಿತಾಗಿ ಬಾಳುಗೋಡುವಿನ ಫೆಡರೇಷನ್ ಆಫ್ ಕೊಡವ ಸಮಾಜದಲ್ಲಿ ತಾ. 23 ರಂದು ಜಿಲ್ಲೆಯ ಮೂಲನಿವಾಸಿ ಜನಾಂಗಗಳ ಪ್ರತಿನಿಧಿಗಳ ಮಹತ್ವದ ಸಭೆಯೊಂದನ್ನು ಆಯೋಜಿಸಲಾಗಿದೆ. ಕೊಡವ ಸಮಾಜದ ಒಕ್ಕೂಟದ ಮೂಲಕ ಈ ಸಭೆಯನ್ನು ಕರೆಯಲಾಗಿದ್ದು, ಸಭೆಗೆ ಎಲ್ಲಾ ಕೊಡವ ಭಾಷಿಕ ಜನಾಂಗಗಳ ಪ್ರತಿನಿಧಿಗಳು ಹಾಗೂ ಗೌಡ ಸಮಾಜ ಒಕ್ಕೂಟದ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ.ಸಭೆಯಲ್ಲಿ ಪ್ರಮುಖವಾಗಿ ಈ ಕ್ಷೇತ್ರದ ವಿಚಾರ ಮಾತ್ರ ಚರ್ಚೆಗೆ ಬರಲಿದ್ದು, ಈ ಕ್ಷೇತ್ರಗಳು ಪ್ರವಾಸಿ ಭೂಪಟದಲ್ಲಿ ಪ್ರವಾಸಿ ತಾಣದ ಪಟ್ಟಿಯಲ್ಲಿ ಸೇರಿರುವದನ್ನು ತೆಗೆದು ಹಾಕಿ ಧಾರ್ಮಿಕ ಕ್ಷೇತ್ರವೆಂದು ಗುರುತಿಸುವ ವಿಚಾರ ಹಾಗೂ ಈ ಎರಡು ಕ್ಷೇತ್ರಗಳ ನಿರ್ವಹಣೆಯ ಕುರಿತಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವದು. ಬಳಿಕ ಈ ಕುರಿತಾಗಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವ ಕುರಿತೂ ನಿರ್ಧಾರ ಕೈಗೊಳ್ಳಲಾಗುವದು ಎಂದು ಪ್ರಮುಖರು ತಿಳಿಸಿದ್ದಾರೆ.
ಕೊಡವ ಸಮಾಜದ ಒಕ್ಕೂಟದ ಪ್ರಮುಖರು, ವಿವಿಧ ಕೊಡವ ಸಮಾಜಗಳ ಅಧ್ಯಕ್ಷರು, ಇತರ ಭಾಷಿಕ ಜನಾಂಗಗಳ ಪ್ರತಿನಿಧಿಗಳು, ಗೌಡ ಸಮಾಜದ ಒಕ್ಕೂಟದ ಪ್ರತನಿಧಿಗಳನ್ನು ಒಳಗೊಂಡಂತೆ ಈ ಸಭೆ ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಪ್ರಮುಖರಾದ ವಾಟೇರಿರ ಶಂಕರಿ ಪೂವಯ್ಯ ಅವರು ತಿಳಿಸಿದ್ದಾರೆ.
ಸಭೆಯ ಜವಾಬ್ದಾರಿಯನ್ನು ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನು ಮುತ್ತಪ್ಪ ಹಾಗೂ ಪೊನ್ನಂಪೇಟೆ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ ಅವರಿಗೆ ನೀಡಲಾಗಿದೆ.