ಸೋಮವಾರಪೇಟೆ, ಸೆ. 15: ಕೊಡಗನ್ನಾಳಿದ ಹಾಲೇರಿ ಅರಸರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷರು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ, ಜಿಲ್ಲಾ ವೀರಶೈವ, ಲಿಂಗಾಯತ, ಜಂಗಮ ಅರ್ಚಕರ ಸಂಘದ ವತಿಯಿಂದ ಪಟ್ಟಣ ಠಾಣೆಗೆ ದೂರು ನೀಡಲಾಗಿದೆ.

ಕೊಡಗು ಜಿಲ್ಲಾ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರು ಸಂಸದರನ್ನು ಉಲ್ಲೇಖಿಸಿ ಫೇಸ್‍ಬುಕ್‍ನಲ್ಲಿ ಬರೆದ ಬಹಿರಂಗ ಪತ್ರದಲ್ಲಿ ಹಾಲೇರಿ ಅರಸರ ಬಗ್ಗೆ ಅವಹೇಳನ ಮಾಡಲಾಗಿದ್ದು, ಇದೊಂದು ಶಾಂತಿ ಕದಡುವ ಪ್ರಯತ್ನವಾಗಿದೆ ಎಂದು ಸಂಘದ ಅಧ್ಯಕ್ಷ ಮೋಹನ್ ಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎಲ್ಲಾ ಜನಾಂಗದವರು ಶಾಂತಿಯಿಂದ ಜೀವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಒಂದು ಸಮುದಾಯದ ವಿರುದ್ಧ ಅವಹೇಳನ ಮಾಡಿರುವ ಪವನ್ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ದೂರು ನೀಡುವ ಸಂದರ್ಭ ಸಂಘದ ಖಜಾಂಚಿ ಬಸವಕುಮಾರ್ ಶಾಸ್ತ್ರಿ, ಜಯರಾಜ್ ಉಪಸ್ಥಿತರಿದ್ದರು.

ಶನಿವಾರಸಂತೆ: ಫೇಸ್ ಬುಕ್‍ನಲ್ಲಿ ಕೊಡಗನ್ನಾಳಿದ ವೀರಶೈವ ರಾಜರ ಬಗ್ಗೆ ಜಿಲ್ಲಾ ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಎಂಬ ವ್ಯಕ್ತಿ ಸಂಸದರ ಹೇಳಿಕೆಗೆ ಉತ್ತರಿಸುವಾಗ ಅವಹೇಳನಕಾರಿ ಪೋಸ್ಟ್ ಹಾಕಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಸಮಿತಿಯವರು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ.

ಅವಹೇಳನಕಾರಿ ಪೋಸ್ಟ್ ಹಾಕಿರುವುದರಿಂದ ಸಮಾಜದವರಿಗೆ ಹಾಗೂ ಕೊಡಗನ್ನಾಳಿದ ರಾಜರಿಗೆ ಅಗೌರವ ತೋರಿಸಿರುತ್ತಾರೆ. ವೀರಶೈವ ಸಮಾಜದವರಿಗೆ ನೋವು ಉಂಟಾಗಿದ್ದು, ಅವರನ್ನು ಕರೆಸಿ ಬಹಿರಂಗವಾಗಿ ವೀರಶೈವ ಸಮಾಜದ ಕ್ಷಮೆ ಕೋರಬೇಕು. ತಪ್ಪಿದಲ್ಲಿ ಕೊಡಗು ವೀರಶೈವ ಸಮಾಜದಿಂದ ಜಿಲ್ಲೆ ಹಾಗೂ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ವೀರಶೈವ ಮಹಾಸಭಾದ ಉಪಾಧ್ಯಕ್ಷ ಜಿ.ಎಂ. ಕಾಂತರಾಜ್, ಮಾಜಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಹಾಗೂ ತಾಲೂಕು ಅಧ್ಯಕ್ಷ ಕೆ.ಬಿ. ಹಾಲಪ್ಪ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮಡಿಕೇರಿ: ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರು ಕೊಡಗನ್ನು ಆಳಿದ ರಾಜರ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದು, ಇದು ರಾಜವಂಶದ ವೀರಶೈವ ಸಮಾಜವನ್ನು ಅಪಮಾನಿಸಿದಂತಾಗಿದೆ. ಈ ನಿಟ್ಟಿನಲ್ಲಿ ಪವನ್ ಪೆಮ್ಮಯ್ಯ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮಡಿಕೇರಿಯ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.