ಕೊಲೆ ಆರೋಪದಡಿ ಆರೋಪಿ ಬಂಧನ

ವೀರಾಜಪೇಟೆ, ಸೆ. 15: ವೀರಾಜಪೇಟೆ ಬಳಿಯ ಕುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಅವಿವಾಹಿತ ವಿಶೇಷಚೇತನ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಸಾವಿಗೆ ಕಾರಣನಾದ ಮೇರೆ ಕುಟ್ಟ ಬಳಿಯ ಬೇರುಕೊಲ್ಲಿಯ ನಿವಾಸಿ ಸತೀಶ್ (35) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಕಳೆದ ತಾ. 7 ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದ ಕಿವಿ ಕೇಳದ, ಬಾಯಿ ಬಾರದ ಅವಿವಾಹಿತೆಯಾಗಿದ್ದ 25 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ದೂರಿನ ಮೇರೆ ಕುಟ್ಟ ಪೊಲೀಸರು ಸತೀಶ್ ಎಂಬಾತನನ್ನು ಬಂಧಿಸಿ ಆತನ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅತ್ಯಾಚಾರಕ್ಕೊಳಗಾದ ಮಹಿಳೆ ಕಳೆದ ಮೂರು ದಿನಗಳ ಹಿಂದೆ ನಿರಂತರವಾಗಿ ವಾಂತಿ ಮಾಡಿಕೊಳ್ಳುತ್ತಿದ್ದುದರಿಂದ ಆಕೆಯನ್ನು ಮಡಿಕೇರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಮಹಿಳೆ ಸಾವನ್ನಪ್ಪಿದ ನಂತರ ನ್ಯಾಯಾಂಗ ಬಂಧನದಲ್ಲಿರುವ ಸತೀಶ್‍ನ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿವೈಎಸ್‍ಪಿ ಜಯಕುಮಾರ್ ತಿಳಿಸಿದ್ದಾರೆ.

ವೀರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಮಹಿಳೆಯ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿ ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.