ಮಡಿಕೇರಿ, ಸೆ. 13: ಕಂದಾಯ ಇಲಾಖೆಯ ಕಚೇರಿಗೆ ತಮ್ಮ ಭೂದಾಖಲೆಯ ನಿರ್ವಹಣೆಗಾಗಿ ಅಲೆಯುತ್ತಾ ಸುಸ್ತು ಹೊಡೆದವರು ಒಂದೆಡೆಯಾದರೆ, ಭೂ ಸರ್ವೆ ಇಲಾಖೆಯ ಬಾಗಿಲು ಬಡಿದು ಬೇಸತ್ತವರು ಮತ್ತೊಂದೆಡೆಯಿದ್ದು, ಗ್ರಾಮ ಪಂಚಾಯಿತಿ ಕಚೇರಿ, ಕಂದಾಯ ಹೋಬಳಿ ಕಚೇರಿ, ತಾಲೂಕು ಕಚೇರಿ, ಉಪವಿಭಾಗ ಕಚೇರಿಗಳಿಗೆ ನಿರಂತರ ಸುತ್ತಾಡಿ ಯಾವ ಪ್ರಯೋಜನ ಕಂಡುಕೊಳ್ಳಲಾರದ ಮಂದಿ ಅನಿವಾರ್ಯ ಪರಿಸ್ಥಿತಿಯಲ್ಲಿ ಕೊಡಗು ಸೇವಾ ಕೇಂದ್ರದತ್ತ ಮುಖ ಮಾಡಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಬಹುತೇಕ ಕಡೆ ಲಂಚಗುಳಿತನದ ಬಹಿರಂಗ ಆರೋಪ ಕೇಳಿ ಬರುತ್ತಿರುವ ಕಾರಣ, ನೊಂದವರಿಗೆ ಸಹಾಯಕ್ಕಾಗಿ ಮಡಿಕೇರಿ ಕೊಡವ ಸಮಾಜದಲ್ಲಿರುವ ‘ಕೊಡಗು ಸೇವಾ ಕೇಂದ್ರ’ ನೆರವಿನ ಹಸ್ತ ಚಾಚಿದೆ. ಅಲ್ಲದೆ ಮಡಿಕೇರಿ ತಾಲೂಕಿನ ಕಂದಾಯ ಹೋಬಳಿ ನಾಪೋಕ್ಲು ವ್ಯಾಪ್ತಿಯ ಸಮಸ್ಯೆಗಳಿಗೆ ಸ್ಪಂದಿಸುವ ದಿಸೆಯಲ್ಲಿ ಸೇವಾ ಕೇಂದ್ರ ಪ್ರಮುಖರು ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಆದರೆ ಈ ವಿಷಯ ತಿಳಿದಿರುವ ಕೊಡಗಿನ ಹಲವೆಡೆಯ ಮುನ್ನೂರಕ್ಕೂ ಅಧಿಕ ನೊಂದ ನಾಗರಿಕರು, ದಶಕಗಳಿಂದ ಸರಕಾರಿ ಕಚೇರಿ ಕೆಲಸಗಳನ್ನು ಮಾಡಿಕೊಡದೆ ಸತಾಯಿಸುತ್ತಿರುವ ನೌಕರರು, ಅಧಿಕಾರಿಗಳ ವಿರುದ್ಧ ದೂರುಗಳನ್ನು ಹೊತ್ತು ಸೇವಾ ಕೇಂದ್ರದ ಬಾಗಿಲಿಗೆ ಬರುತ್ತಿರುವದು ಗೋಚರಿಸಿದೆ.

2 ದಶಕದಿಂದ ಅಲೆದಾಟ : ಬಹುತೇಕ ಭೂ ಒಡೆತನದ ಜಾಗ ವಿವಾದ, ಕಂದಾಯ ನಿಗದಿಪಡಿಸದಿರುವ ಸಂಕಟ, ಭೂನಕ್ಷೆ ತಿದ್ದುಪಡಿ, ಗಣಕಯಂತ್ರದಲ್ಲಿ ತಪ್ಪು ಹೆಸರು ನಮೂದಾಗಿರುವ ಕಾರಣ, ಮರು ತಿದ್ದುಪಡಿ, ಪತಿ ಹೆಸರಿನಲ್ಲಿರುವ ಖಾತೆಯ ಬದಲಾವಣೆ ಅಥವಾ ಮೃತ ತಂದೆಯ ಹೆಸರಿನ ಖಾತೆ ಮಕ್ಕಳ ಹೆಸರಿಗೆ ವರ್ಗಾವಣೆ ಇತ್ಯಾದಿಗಾಗಿ ಅನೇಕರು ಎರಡು ದಶಕಗಳಿಂದ ನಿರಂತರವಾಗಿ ವಿವಿಧ ಕಚೇರಿಗಳಿಗೆ ಬರುತ್ತಿದ್ದರೂ ಬಿಡಿಗಾಸಿನ ಕೆಲಸವಾಗದೆ ಹಿಂತೆರಳುತ್ತಿರುವದು ಬಹಿರಂಗವಾಗಿದೆ.

ಸುಳ್ಳು ಮಾಹಿತಿ ಬಹಿರಂಗ : ಅರ್ಜಿದಾರರ ನೋವಿನ ಕತೆ ಕೇಳಿ ಸೇವಾ ಕೇಂದ್ರದ ಪ್ರಮುಖರು, ಕೊಡಗು ಜಿಲ್ಲಾಧಿಕಾರಿಗಳ ಬಳಿ ಸಮಸ್ಯೆ ಕುರಿತು ಗಮನ ಸೆಳೆದಾಗ, ಮೇಲಧಿಕಾರಿಗಳಿಗೆ ಕೆಳ ಹಂತದ ಸಿಬ್ಬಂದಿ ನಿರಂತರವಾಗಿ ಸಭೆಗಳಲ್ಲಿ ಸುಳ್ಳು ಮಾಹಿತಿ ನೀಡಿರುವ ಅಂಶ ಬಹಿರಂಗಗೊಂಡಿದೆ. ವಿವಿಧ ಇಲಾಖೆಗಳ ಅನುಪಾಲನಾ ವರದಿಯನ್ನು ಸಲ್ಲಿಸುವಾಗ, ಸಾರ್ವಜನಿಕ ಸಮಸ್ಯೆಗಳಿಗೆ ಸಂಬಂಧಿಸಿದ ‘ಯಾವದೇ ಕಡತಗಳು ಬಾಕಿ ಇರುವದಿಲ್ಲ’ ಎಂದು ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾಡಳಿತಕ್ಕೆ ಸುಳ್ಳು ಸಂದೇಶ ನೀಡಿರುವದು ಬೆಳಕಿಗೆ ಬಂದಿದೆ.

ಜಿಲ್ಲಾಧಿಕಾರಿ ಅಚ್ಚರಿ : ಕೆಲವು ಪ್ರಕರಣಗಳಲ್ಲಿ 1998-99 ರಿಂದ 2020ರ ಪ್ರಾರಂಭಿಕ ವರ್ಷದ ತನಕವೂ ವಿವಾದ

(ಮೊದಲ ಪುಟದಿಂದ) ಬಗೆಹರಿಯದೆ ತುಂಬಾ ಹಿರಿಯ ನಾಗರಿಕರ ಸಹಿತ ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಅಲೆಯುತ್ತಿರುವ ಬಗ್ಗೆ ಪ್ರಮುಖರು ಗಮನ ಸೆಳೆದಾಗ ಸ್ವತಃ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಚ್ಚರಿಯೊಂದಿಗೆ, ನಿರ್ದಿಷ್ಟ ಪ್ರಕರಣಗಳನ್ನು ಪರಿಶೀಲಿಸಿ ಅಗತ್ಯ ಕ್ರಮವಹಿಸುವ ಭರವಸೆ ನೀಡಿದ್ದಾರೆ.

ನಿಖರ ಪ್ರಕರಣ : 1992 ರಿಂದ ಬಿ.ಪಿ. ಮೇದಪ್ಪ ಎಂಬವರ ಭೂ ದುರಸ್ತಿ ಕಡತ ಭೂ ಮಾಪನ ಇಲಾಖೆಯಲ್ಲಿ ದೂಳು ಹಿಡಿದಿರುವದು, ಅಮ್ಮತ್ತಿ ಹೋಬಳಿ ಕಚೇರಿಯಲ್ಲಿ 75ರ ಇಳಿವಯಸ್ಸಿನ ಎಂ.ಎಸ್. ಮೀನಾಕ್ಷಿ ಎಂಬವರಿಗೆ ಭೂ ಕಂದಾಯ ನಿಗದಿಗೊಳಿಸದೆ ಸತಾಯಿಸುತ್ತಿರುವ ಕಡತ ಪ್ರಕರಣ, ಹೊದ್ದೂರು ನಿವಾಸಿ 77 ವರ್ಷದ ಸಿ.ಎಂ. ಮೇದಪ್ಪ ಎಂಬವರು ತಮ್ಮ ಜಮೀನಿನ ಸರ್ವೆ ಸಂಖ್ಯೆ ತಿದ್ದುಪಡಿಗಾಗಿ ಪ್ರಯತ್ನಿಸಿ ಹೈರಾಣಾಗಿರುವ ಅಂಶ, ನಾಪೋಕ್ಲು ಹೋಬಳಿಯ 25ಕ್ಕೂ ಹೆಚ್ಚಿನವರು ತಮ್ಮ ಆಸ್ತಿಗಾಗಿ ಭೂಕಂದಾಯ ನಿಗದಿಗಾಗಿ ಅಲೆಯುತ್ತಿರುವ ಅರ್ಜಿಗಳ ಕುರಿತು ಸೇವಾ ಕೇಂದ್ರ ಉದಾಹರಣೆ ಸಹಿತ ಗಮನ ಸೆಳೆದಿದೆ.

ಒಟ್ಟಿನಲ್ಲಿ ಕೊಡಗಿನ ಪ್ರತ್ಯೇಕ ಜಮ್ಮಾ, ಸಾಗು, ಉಂಬಳಿ ಇತ್ಯಾದಿ ಭೂ ಸಮಸ್ಯೆಗಳ ಅರಿವಿಲ್ಲದ ಅದೆಷ್ಟೋ ಕಚೇರಿ ಮಂದಿ, ಸಾರ್ವಜನಿಕ ಸಮಸ್ಯೆಗಳನ್ನು ಸರಿಪಡಿಸುವ ಬದಲಿಗೆ ಕಾಲಹರಣದೊಂದಿಗೆ ಕೈ ‘ಬಿಸಿ’ ಮಾಡಿಕೊಂಡು ನಿರಂತರ ತಮ್ಮ ಬಳಿ ಬರುವವರನ್ನು ನಿರ್ಲಕ್ಷಿಸುತ್ತಿರುವ ಬೆಳವಣಿಗೆ ಬಟ್ಟ ಬಯಲಾಗುವಂತಾಗಿದೆ.

ಘೋಷಣೆಗೆ ಸೀಮಿತ ಪೌತಿ ಖಾತೆ : ಇನ್ನು ಕೊಡಗಿನ ಭೂ ಒಡೆತನದಲ್ಲಿರುವ ಮೃತರು ಅಥವಾ ಪಟ್ಟೆದಾರಿಕೆ ವಿಂಗಡಣೆಯ ಪೌತಿ ಖಾತೆಯ ವರ್ಗಾವಣೆ ಅಭಿಯಾನ ಕೂಡ ಕೇವಲ ಸರಕಾರಿ ಪತ್ರಗಳ ಘೋಷಣೆಗಳಿಗೆ ಸೀಮಿತಗೊಂಡಿದೆ ಎಂಬ ಅಸಮಾಧಾನ ಕೇಳಿಬರತೊಡಗಿದೆ.

ಈ ನಿಮಿತ್ತ ಕಂದಾಯ ಕಚೇರಿಗಳಿಗೆ ತೆರಳುವವರಿಗೆ, ಇಡೀ ಕುಟುಂಬ ಸದಸ್ಯರ ಒಪ್ಪಿಗೆ ಪತ್ರ ಹಾಗೂ ಭೂವಿಂಗಡಣೆ ಮಾಡಿ ಆಸ್ತಿ ನೋಂದಾಯಿಸಿಕೊಂಡ ದಾಖಲೆ ಕೇಳುತ್ತಾರೆ. ಆದರೆ ಕೊಡಗಿನಲ್ಲಿ ಬಹುತೇಕ ಭೂ ಒಡೆತನವಿರುವ ಪಟ್ಟೆದಾರರಿಗೂ, ಆ ಕುಟುಂಬದ ಹಿರಿಯರ ಇತರ ಮಕ್ಕಳಿಗೂ ವಂಶವೃಕ್ಷ ಪಟ್ಟಿ ಕಲ್ಪಿಸುವಲ್ಲಿ ತಾಂತ್ರಿಕ ತೊಡಕು ಎದುರಿಸುವಂತಾಗಿದೆ. ಇಂತಹ ಕೌಟುಂಬಿಕ ವಿವಾದಗಳನ್ನು ಬಂಡವಾಳ ಮಾಡಿಕೊಂಡಿರುವ ಗ್ರಾಮ ಲೆಕ್ಕಿಗರು, ಭೂ ಮಾಪಕರು, ಕಂದಾಯ ನಿರೀಕ್ಷಕರು ಹಾಗೂ ಇನ್ನಿತರು ಸಾರ್ವಜನಿಕ ಕೆಲಸಗಳಿಗೆ ಬರುವವರನ್ನು ಆಯಾ ಕಚೇರಿಗಳಿಗೆ ವರ್ಷಾನುಗÀÀಟ್ಟಲೆ ಅಲೆಯಿಸುತ್ತಿರುವ ಆರೋಪವಿದೆ.