ಕೂಡಿಗೆ, ಸೆ. 13: ಎಂಟು ದಿನಗಳ ಹಿಂದೆ ಇಲ್ಲಿಗೆ ಸಮೀಪದ ಕಣಿವೆಯಲ್ಲಿ, ವ್ಯಕ್ತಿಯೊಬ್ಬರು ಮನೆಯ ಎದುರು ನಿಲ್ಲಿಸಿದ್ದ ಕಾರೊಂದು ಕಾಣೆಯಾಗಿದ್ದು, ಇದೀಗ ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಹಟ್ಟಿಹೊಳೆಯಲ್ಲಿ ಪತ್ತೆಯಾಗಿದೆ. ಕಣಿವೆಯ ನಿವಾಸಿ ಆಯಿಷಾ ಇಸ್ಮಾಯಿಲ್ ಎಂಬವರು ತಾ. 5 ರಂದು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಕಾರು (ಕೆ.ಎ. 03 - ಡಿ. 4562) ಕಾಣೆಯಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.ಆ ಮೇರೆಗೆ ಅಲ್ಲಿನ ಡಿವೈಎಸ್ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ಪೊಲೀಸರು ಜಿಲ್ಲೆಯ ಗಡಿದ್ವಾರಗಳ ಸಹಿತ ಹೆದ್ದಾರಿ ಮಾರ್ಗದಲ್ಲಿ ವ್ಯಾಪಕ ಶೋಧ ನಡೆಸಿದ್ದರು. ಗಡಿ ಚೆಕ್ಪೋಸ್ಟ್ಗಳ ಸಿ.ಸಿ. ಕ್ಯಾಮರಾ ತಪಾಸಣೆ ನಡೆಸಿದ್ದರೂ ಯಾವದೇ ಸುಳಿವು ಲಭಿಸಿರಲಿಲ್ಲ. ಎಂಟು ದಿನಗಳ ಬಳಿಕ ಇಂದು ಸಂಬಂಧಿಸಿದ ಕಾರು ಸೋಮವಾರಪೇಟೆ - ಮಡಿಕೇರಿ ಹೆದ್ದಾರಿಯ ನಡುವೆ ಹಟ್ಟಿಹೊಳೆ ಸೇತುವೆ ಬಳಿ ಗೋಚರಿಸಿದೆ. ಇದೀಗ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು, ಚಾಲಿಸಲಾರದೆ ಕೆಟ್ಟು ನಿಂತಿದ್ದರಿಂದ ಬೇರೆ ವಾಹನದ ಸಹಾಯದಿಂದ ಕುಶಾಲನಗರ ಗ್ರಾಮಾಂತರ ಠಾಣೆಗೆ ಎಳೆದೊಯ್ದು ತನಿಖೆ ಕೈಗೊಂಡಿದ್ದಾರೆ.ಈ ವೇಳೆ ಕಾರಿನೊಳಗೆ ಬೀಡಿ ತುಂಡು, ಖಾಲಿ ಮದ್ಯದ ಪ್ಯಾಕೇಟ್ ಇತ್ಯಾದಿ ಲಭಿಸಿದ್ದು, ಕಾರಿನ ಕಳ್ಳತನದ ಹಿಂದಿರುವ ರಹಸ್ಯ ಬೇಧಿಸಲು ಮುಂದಾಗಿದ್ದಾರೆ. ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ಕುಮಾರ್, ಅಪರಾಧ ವಿಭಾಗದ ಠಾಣಾಧಿಕಾರಿ ಮೋಹನ್ಕುಮಾರ್, ಸಿಬ್ಬಂದಿಗಳಾದ ದಯಾನಂದ್, ಪ್ರಕಾಶ್ ಮತ್ತಿತರರು ಕಾರ್ಯಾಚರಣೆ ತಂಡದಲ್ಲಿದ್ದಾರೆ.