ಕಣಿವೆ, ಸೆ. 13: ಗ್ರಾಮೀಣ ಪ್ರದೇಶಗಳ ಜನರಿಗೆ ಹೆಚ್ಚು ಉಪಯುಕ್ತವಾಗಿರುವ ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಶ್ರಮಿಸಬೇಕೆಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆಕೊಟ್ಟರು. ಹೆಬ್ಬಾಲೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 18 ನೇ ಶಾಖಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳಲ್ಲಿ ಸಾಲ ಪಡೆವವರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಆರ್ಥಿಕ ಬೆಳವಣಿಗೆಗೆ ಕೈಜೋಡಿಸಬೇಕಿದೆ. ಅದೇ ರೀತಿ ಸಂಘದ ಆಡಳಿತ ಮಂಡಳಿಯವರು ಕೂಡ ಸಂಘಗಳಿಗೆ ಹೆಚ್ಚು ಆದಾಯ ತರಬಲ್ಲಂತಹ ಯೋಜನೆಗಳಿಗೆ ಸಾಲ ನೀಡಬೇಕು. ಸಾಧ್ಯವಾದಷ್ಟು ಜಾಮೀನು ಸಾಲಗಳನ್ನು ಸೀಮಿತಗೊಳಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಸಹಕಾರ ಸಂಘ ಕೊಡಗು ಜಿಲ್ಲೆಯ ಹೊರತಾಗಿ ಬೇರೆ ಯಾರಿಗೂ ಸಾಲ ನೀಡಬಾರದು ಎಂದು ಹೇಳಿದ ಶಾಸಕ ರಂಜನ್, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿ ಸಮಾನಾದ ಪೈಪೆÇೀಟಿಯಲ್ಲಿ ಸಾಲಯೋಜನೆ ಹಮ್ಮಿಕೊಳ್ಳಬೇಕು. ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನಿವೃತ್ತ ನೌಕರರು ಹಾಗೂ ಹಾಲೀ ನೌಕರರು ಇದ್ದು ಅವರಿಂದ ಹೆಚ್ಚು ಠೇವಣಿ ಪಡೆಯಬಹುದಾಗಿದೆ ಎಂದರು. ರಾಜ್ಯದ ರೈತರ ಸಾಲಮನ್ನಾ ಯೋಜನೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲೇ ಅತೀ ಹೆಚ್ಚು ಜಾರಿಯಾಗಿದ್ದು, ಇದರಿಂದ ಸಹಸ್ರಾರು ರೈತರಿಗೆ ಅನುಕೂಲವಾಗಿದೆ ಎಂದರು.

ಮಡಿಕೇರಿ ಹೊರಭಾಗದಲ್ಲಿ ಡಿಸಿಸಿ ಬ್ಯಾಂಕಿನ ಶತಮಾನೋತ್ಸವ ಭವನವನ್ನು ಅಚ್ಚುಕಟ್ಟಾಗಿ ವಿಶಾಲ ಜಾಗದಲ್ಲಿ ನಿರ್ಮಿಸಿದರೆ ಸಹಕಾರಿಗಳಿಗೆ ಹಾಗೂ ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂಬ ಸಲಹೆ ನೀಡಿದ ಶಾಸಕರು, ಸಹಕಾರ ಸಂಘಗಳ ಬೆಳವಣಿಗೆಗೆ ಸರ್ಕಾರದಿಂದ ಸಿಗಬೇಕಿರುವ ಸೌಲಭ್ಯಗಳ ಬಗ್ಗೆ ಶ್ರಮಿಸುವುದಾಗಿ ಹೇಳಿದರು.

ನಗದು ಕೌಂಟರ್ ಉದ್ಘಾಟನೆ

ನೂತನ ಶಾಖೆಯ ನಗದು ಕೌಂಟರ್ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಜನೋಪ ಯೋಗಿಯಾಗಿರುವ ಸಂಸ್ಥೆಗಳು ದಕ್ಷ ಆಡಳಿತ ಮಂಡಳಿ ಹಾಗೂ ದೂರದೃಷ್ಟಿಯ ಚಿಂತನೆಯುಳ್ಳ ಅಧ್ಯಕ್ಷರನ್ನು ಹೊಂದಿದ್ದರೆ; ಆ ಸಂಸ್ಥೆ ಹೇಗೆ ಬೆಳೆಯಬಹುದು ಎಂಬದಕ್ಕೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಆಡಳಿತ ಮಂಡಳಿ ಸಾಕ್ಷಿಯಾ ಗಿದೆ. 99 ವರ್ಷಗಳ ಹಿಂದೆ ಸಹಕಾರ ಸಂಘವನ್ನು ಕೊಡಗಿನಲ್ಲಿ ಇದೇ ಕೊಡಂದೇರ ಕುಟುಂಬದವರು ಆರಂಭಿಸಿದ್ದರು. ಈಗ ಅದೇ ಕೊಡಂದೇರ ಕುಟುಂಬದ ಬಾಂಡ್ ಗಣಪತಿ ಅಧಿಕಾರದ ಅವಧಿಯಲ್ಲಿ ಸಂಸ್ಥೆ 2021ಕ್ಕೆ ಶತಮಾನೋತ್ಸವ ಆಚರಿಸಲು ಹೊರಟಿದೆ. ದಕ್ಷ ಆಡಳಿತ ಮಂಡಳಿಗೆ ಅಧಿಕಾರಿಗಳು ಹೆಚ್ಚು ಶ್ರಮ ಹಾಕುವ ಮೂಲಕ ಸಂಸ್ಥೆಯ ಸರ್ವತೋಮುಖ ಪ್ರಗತಿಗೆ ಸಹಕಾರ ನೀಡಬೇಕು ಎಂದರು. ಸೇವಾ ಮನೋಭಾವ ದಿಂದ ಕೆಲಸ ಮಾಡಿದರೆ ಸಂಸ್ಥೆ ಮತ್ತಷ್ಟು ಎತ್ತರಕ್ಕೇರಲಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ (ಮೊದಲ ಪುಟದಿಂದ) ಕೊಡಂದೇರ ಪಿ. ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ, 1921ರಲ್ಲಿ ಕೇವಲ 4400 ರೂ. ಪಾಲು ಬಂಡವಾಳ ಹಾಗೂ ರೂ. 10,000 ಠೇವಣಿಯೊಂದಿಗೆ ಆರಂಭವಾದ ಬ್ಯಾಂಕ್, ಇಂದು 936 ಕೋಟಿ ರೂ.ಗಳ ಠೇವಣಿಗಳೊಂದಿಗೆ, 25 ಕೋಟಿ ಪಾಲು ಬಂಡವಾಳ, 95 ಕೋಟಿ ಸ್ವಂತ ಬಂಡವಾಳ ಹಾಗೂ 1400 ಕೋಟಿ ರೂ.ಗಳಷ್ಟು ದುಡಿಯುವ ಬಂಡವಾಳವನ್ನು ಹೊಂದುವ ಮೂಲಕ ರಾಜ್ಯದ 21 ಸಹಕಾರ ಬ್ಯಾಂಕುಗಳ ಪೈಕಿ ಮೂರನೇ ಸ್ಥಾನದಲ್ಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕುಗಳಿಂದ 360 ಕೋಟಿ ಸಾಲ ಪಡೆದಿದ್ದು, 840 ಕೋಟಿ ಹಣವನ್ನು ವಿವಿಧ ತರಹದ ಸಾಲಗಳಿಗೆ ವಿತರಿಸಲಾಗಿದೆ. 478 ಕೋಟಿ ರೂ.ಗಳನ್ನು ವಿವಿಧೆಡೆಗಳಲ್ಲಿ ಲಾಭದಾಯಕವಾದ ಯೋಜನೆಗಳಿಗೆ ಹೂಡಿಕೆ ಮಾಡಲಾಗಿದೆ. ಕಳೆದ ಮಾರ್ಚ್ ಅಂತ್ಯಕ್ಕೆ ಸಹಕಾರ ಬ್ಯಾಂಕ್ 9.73 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದರು. ಇದೇ ಸಂದರ್ಭ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸಿರುವ ಹಿರಿಯ ಚೇತನಗಳನ್ನು ಸ್ಮರಿಸಿದ ಬಾಂಡ್ ಗಣಪತಿ, 18ನೇ ಶಾಖೆಯನ್ನು ಹೆಬ್ಬಾಲೆಯಲ್ಲಿ, 19ನೇ ಶಾಖೆಯನ್ನು ಟಿ. ಶೆಟ್ಟಿಗೇರಿಯಲ್ಲಿ, 20ನೇ ಶಾಖೆಯನ್ನು ಬಾಳೆಲೆಯಲ್ಲಿ ಸ್ಥಾಪಿಸಲಾಗುತ್ತಿದೆ. ಹಾಗೆಯೇ ಸಹಕಾರ ಕೇಂದ್ರ ಬ್ಯಾಂಕಿನ ಶತಮಾನೋತ್ಸವದ ಸವಿನೆನಪಿಗೆ ಕೊಡ್ಲಿಪೇಟೆಯಲ್ಲಿ 21ನೇ ಶಾಖೆಯನ್ನು 2021ರ ಜನವರಿಯಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು. ಶತಮಾನೋತ್ಸವದ ನೆನಪಿಗಾಗಿ ಹಳೆಯ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ 10 ಕೋಟಿ ವೆಚ್ಚದ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು. ಇದೇ ಸಂದರ್ಭ ನೂತನ ಶಾಖೆಗೆ ಕಟ್ಟಡ ನೀಡಿದ ಹಿರಿಯ ಸಹಕಾರಿ ನಂಜಮ್ಮ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರಾ ಹರೀಶ್ ಪೂವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಸಲೀಂ, ಪ್ರಧಾನ ವ್ಯವಸ್ಥಾಪಕ ಕೋಡಿರ ಕೆ. ಪೂವಯ್ಯ, ಆಡಳಿತ ಮಂಡಳಿ ನಿರ್ದೇಶಕರಾದ ಪಟ್ರಪಂಡ ಬಿ. ರಘುನಾಣಯ್ಯ, ಹೊಟ್ಟೇಂಗಡ ಎಂ. ರಮೇಶ್, ಬಿ.ಡಿ. ಮಂಜುನಾಥ್, ಬಿ.ಕೆ. ಚಿಣ್ಣಪ್ಪ, ಎಸ್.ಬಿ. ಭರತಕುಮಾರ್, ಹೊಸೂರು ಜೆ. ಸತೀಶ್ ಕುಮಾರ್, ಕಿಮ್ಮುಡಿರ ಎ. ಜಗದೀಶ್, ಕನ್ನಂಡ ಸಂಪತ್, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೋಲತಂಡ ಎ. ಸುಬ್ರಮಣಿ, ಉಷಾ ತೇಜಸ್ವಿ, ಕುಂಞಂಗಡ ಅರುಣ್ ಭೀಮಯ್ಯ, ಎ. ಗೋಪಾಲಕೃಷ್ಣ, ನಬಾರ್ಡ್ ಸಂಸ್ಥೆಯ ಡಿಜಿಎಂ ಶ್ರೀನಿವಾಸ್, ನೂತನ ಹೆಬ್ಬಾಲೆ ಶಾಖೆಯ ವ್ಯವಸ್ಥಾಪಕ ಎಸ್.ಎಂ. ಭರತ್, ಕುಶಾಲನಗರ ಶಾಖೆಯ ತುಂಗರಾಜು ಸೇರಿದಂತೆ ಜಿಲ್ಲೆಯ ವಿವಿಧೆಡೆಗಳ ಶಾಖೆಗಳ ಸಿಬ್ಬಂದಿಗಳಿದ್ದರು. ಕಾರ್ಯಕ್ರಮಕ್ಕೂ ಮುನ್ನಾ ನೂತನ ಕಟ್ಟಡದಲ್ಲಿ ಗಣಪತಿ ಹೋಮ ನೆರವೇರಿಸಲಾಯಿತು.