ಮಡಿಕೇರಿ, ಸೆ. 14: ನಾಪೋಕ್ಲು ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಮೂಲಕ ನಡೆಸಲಾಗಿರುವ ಕಾಮಗಾರಿಗಳು ಕಳಪೆ ಗುಣಮಟ್ಟ ದಿಂದ ಕೂಡಿರುವದಲ್ಲದೆ ಇವುಗಳಲ್ಲಿ ದುರುಪಯೋಗದ ಆರೋಪ ವ್ಯಕ್ತಪಡಿಸಿರುವ ಸಾರ್ವಜನಿಕರು ಈ ಬಗ್ಗೆ ಜಿ.ಪಂ. ಅಧ್ಯಕ್ಷರು - ಕಾರ್ಯನಿರ್ವ ಹಣಾಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.ಗುತ್ತಿಗೆದಾರನ ಬಗ್ಗೆ ಗುರುತರವಾದ ಆರೋಪ ವ್ಯಕ್ತಗೊಂಡಿದ್ದು, ಆತನನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿದ್ದಾರೆ. ಮಾತ್ರವಲ್ಲದೆ ಈ ವಿಚಾರದಲ್ಲಿ ಕ್ಷೇತ್ರದ ಜಿ.ಪಂ. ಸದಸ್ಯರ ಮೌನದ ಬಗ್ಗೆಯೂ ಅಸಮಾಧಾನ ಕೇಳಿ ಬಂದಿದೆ.
ನಾಪೋಕ್ಲು ಗ್ರಾ.ಪಂ. ವ್ಯಾಪ್ತಿಯ ಇಂದಿರಾನಗರದಲ್ಲಿ ಕಳೆದ ಮೂರು ತಿಂಗಳ ಹಿಂದೆ ಅಲ್ಲಿನ ವಿನಾಯಕ ಎಂಬವರು ಶಾಸಕರ ಅನುದಾನದಲ್ಲಿ ರೂ. 11 ಲಕ್ಷಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡಿದ್ದಾರೆ. ಇದರಲ್ಲಿ ಚರಂಡಿ ಕಾಮಗಾರಿ ಪೂರ್ಣ ಕಳಪೆಮಟ್ಟದ್ದಾಗಿದೆ. ಮಣ್ಣಿನ ಮೇಲೆ ಕಾಂಕ್ರಿಟ್ ಹಾಕಿದ್ದು, ಅವೈಜ್ಞಾನಿಕ ವಾಗಿದ್ದು, ಚರಂಡಿ ಶಿಥಿಲಗೊಂಡಿದೆ ಎಂದು ಆಕ್ಷೇಪಿಸಲಾಗಿದೆ.
ಬೇತು ಗ್ರಾಮದ ಚೋಕಿರ ಸಜಿತ್ ಚಿಣ್ಣಪ್ಪ ಅವರ ಮನೆಬಳಿ ಜಿ.ಪಂ. ಅನುದಾನದಲ್ಲಿ ರೂ. 1 ಲಕ್ಷ ಹಣದಲ್ಲಿ ಮಾಡಿದ ತಡೆಗೋಡೆಯೂ ಕಳಪೆಯಾಗಿದೆ. ಇಷ್ಟು ಅನುದಾನದಲ್ಲಿ ಕೇವಲ 2.5 ಅಡಿ ಎತ್ತರ ಹಾಗೂ 30 ಅಡಿ ಉದ್ದದ ಅಡಿಪಾಯ ಮಾತ್ರ ಹಾಕಲಾಗಿದೆ ಎನ್ನಲಾಗಿದೆ.
ನಾಪೋಕ್ಲು ಪಂಚಾಯಿತಿ ವತಿಯಿಂದ ಅಲ್ಲಿನ ಕೊಡವ ಸಮಾಜ ರುದ್ರಭೂಮಿಯಲ್ಲಿ ನಡೆದ ಕಾಮ ಗಾರಿಯೂ ಪೂರ್ಣ ಕಳಪೆಯಾಗಿದೆ. ಇದಕ್ಕೆ ಹಣ ಮಂಜೂರು ಮಾಡಿದ ವರ ಮೇಲೆ ಕ್ರಮದೊಂದಿಗೆ ಕಾಮ ಗಾರಿ ನಡೆಸಿದವರಿಂದ ಇದನ್ನು ಸರಿ ಪಡಿಸಬೇಕೆಂದು
(ಮೊದಲ ಪುಟದಿಂದ) ಆಗ್ರಹಿಸಲಾಗಿದೆ.
ಸ್ಥಳೀಯ ಕೊಡವ ಸಮಾಜ ರಸ್ತೆಯಿಂದ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಶಾಸಕರ ಅನುದಾನ ರೂ. 4 ಲಕ್ಷದಲ್ಲಿ ವಿನಾಯಕ ಎಂಬವರು ನಿರ್ವಹಿಸಿರುವ ಕಾಮಗಾರಿಯೂ ಕಳಪೆಯಾಗಿದೆ. ಈ ಬಗ್ಗೆಯೂ ಪರಿಶೀಲಿಸಿ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ದೂರು ನೀಡಲಾಗಿದೆ.
ಹಳೇ ತಾಲೂಕು ಅಂಗನವಾಡಿ ರಸ್ತೆ, ಅಜ್ಜಿಮುಟ್ಟ ಗ್ರಾಮದ ರಸ್ತೆಯೂ ಕಳಪೆಯಾಗಿದ್ದು, ಅನುದಾನದ ದುರ್ಬಳಕೆಯಾಗಿದೆ. ಈ ಹಿನ್ನೆಲೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.