ಸೋಮವಾರಪೇಟೆ, ಸೆ. 13: ತಾಲೂಕಿನಲ್ಲಿ ಸರ್ಕಾರಿ ಕೆರೆಗಳ ಜಾಗ ಒತ್ತುವರಿ ತೆರವಿಗೆ ಕಂದಾಯ ಇಲಾಖೆ ಸಮರೋಪಾದಿ ಕೆಲಸ ನಿರ್ವಹಿಸುತ್ತಿದ್ದು, ಈವರೆಗೆ 21 ಕೆರೆಗಳಿಗೆ ಸಂಬಂಧಿಸಿದಂತೆ 20.82 ಎಕರೆ ಒತ್ತುವರಿಯಾಗಿದ್ದ ಕೆರೆ ಜಾಗವನ್ನು ತೆರವುಗೊಳಿಸಲಾಗಿದೆ.ಸರ್ಕಾರಿ ಕೆರೆಗಳ ಜಾಗವನ್ನು ಒತ್ತುವರಿ ಮಾಡಿಕೊಂಡು ತೋಟ, ಗದ್ದೆ, ಹೊಲಗಳನ್ನಾಗಿ ಪರಿವರ್ತಿಸಿ ಅನುಭವ ಸ್ವಾಧೀನದಲ್ಲಿ ಇರಿಸಿಕೊಂಡಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಿ, ಸರ್ವೆ ಕಾರ್ಯ ನಡೆಸಿದ ನಂತರ ಒತ್ತುವರಿಯಾಗಿದ್ದ ಜಾಗವನ್ನು ತೆರವುಗೊಳಿಸಲು ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ನೇತೃತ್ವದಲ್ಲಿ ಕ್ರಮಕೈಗೊಳ್ಳಲಾಗಿದ್ದು, ಈವರೆಗೆ 20.82 ಎಕರೆ ಜಾಗವನ್ನು ತೆರವುಗೊಳಿಸಲಾಗಿದೆ. ಒತ್ತುವರಿಯಾಗಿದ್ದ ಕೆರೆಗಳ ಜಾಗವನ್ನು ತೆರವುಗೊಳಿಸುವ ಸಂಬಂಧವಾಗಿ ತಾಲೂಕು ಕಂದಾಯ ಇಲಾಖೆಯಿಂದ ಕೆರೆಗಳ ಒತ್ತುವರಿ (ಮೊದಲ ಪುಟದಿಂದ) ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಒಟ್ಟಾರೆಯಾಗಿ ಸೋಮವಾರಪೇಟೆ ತಾಲೂಕಿನಲ್ಲಿ 39 ಕೆರೆಗಳು ಒತ್ತುವರಿಯಾಗಿವೆ. ಇದರಲ್ಲಿ 16 ಕೆರೆಗಳು ಒತ್ತುವರಿ ತೆರವಿಗೆ ಬಾಕಿಯಿವೆ ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.
ಚೌಡ್ಲು ಗ್ರಾಮದ 142 ಸ.ನಂ.ರಲ್ಲಿ 0.18 ಏಕರೆ, ತೋಯಳ್ಳಿ ಗ್ರಾಮದ ಸ.ನಂ.47ರಲ್ಲಿ 1.07 ಎಕರೆ, 7ನೇ ಹೊಸಕೋಟೆಯ ಸ.ನಂ.130ರ 1.02 ಎಕರೆ, ಇದೇ ಪಂಚಾಯಿತಿಯ ಸ.ನಂ.127ರಲ್ಲಿ 0.48 ಎಕರೆ ಸಂಪೂರ್ಣವಾಗಿ ಒತ್ತುವರಿಯಾಗಿರುವ ಬಗ್ಗೆ ಅಧಿಕಾರಿಗಳು ವರದಿ ತಯಾರಿಸಿದ್ದರು. ಈ ಬಗ್ಗೆ ತೆರವಿಗೆ ತಾಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಗೋವಿಂದರಾಜು ಅವರು ಮುಂದಾಗಿದ್ದಾರೆ.
ಹೋಬಳಿವಾರು ಒತ್ತುವರಿ: ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯ ಹಾನಗಲ್ಲು ಶೆಟ್ಟಳ್ಳಿ, ಯಡೂರು, ಚೌಡ್ಲು, ತೋಯಳ್ಳಿ, ದೊಡ್ಡಮಳ್ತೆ, ಕ್ಯಾತನಹಳ್ಳಿ, ಮಾಲಂಬಿ, ಆಲೂರು, ದುಂಡಳ್ಳಿ, ಶನಿವಾರಸಂತೆ ಹೋಬಳಿಯ ಹೊಸಳ್ಳಿ ಗ್ರಾಮದ ಮೂರು ಕೆರೆಗಳು, ನಂದಿಗುಂದದ 2 ಕೆರೆಗಳು, ಹಾರೆಹೊಸೂರು ಕೆರೆ, ಸುಂಟಿಕೊಪ್ಪ ಹೋಬಳಿಯ 7ನೇ ಹೊಸಕೋಟೆಯಲ್ಲಿ 7 ಕೆರೆಗಳು ಒತ್ತುವರಿಯಾಗಿವೆ.
ಕೊಡ್ಲಿಪೇಟೆ ಹೋಬಳಿಯ ಹೆಬ್ಬುಲುಸೆ, ಕ್ಯಾತನಹಳ್ಳಿಯಲ್ಲಿ ತಲಾ ಒಂದು ಹಾಗೂ ರಾಮೇನಹಳ್ಳಿಯಲ್ಲಿ ಎರಡು ಕೆರೆಗಳು ಒತ್ತುವರಿಯಾಗಿವೆ. ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಚಿಕ್ಕತ್ತೂರು, ಸಿದ್ದಲಿಂಗಪುರ-3, ಚಿಕ್ಕನಾಯಕನ ಹೊಸಳ್ಳಿ-2, ಮರೂರು, 6ನೇ ಹೊಸಕೋಟೆ, ಮಾದಾಪಟ್ಟಣ, ಹೊಸಪಟ್ಟಣ, ಮಣಜೂರು, ಕಾಸಲಗೋಡು, ದೊಡ್ಡಅಳುವಾರ ಗ್ರಾಮಗಳಲ್ಲಿ ಸರ್ಕಾರಿ ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ಸರ್ವೆ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಗೆ ವರದಿ ನೀಡಿದ್ದರು.
ಈ ವರದಿಯ ಅನುಸಾರ ಅಗತ್ಯ ಕ್ರಮ ವಹಿಸಿರುವ ಕಂದಾಯ ಇಲಾಖೆ, ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಡೆಪ್ಯೂಟಿ ತಹಶೀಲ್ದಾರ್, ಸ್ಥಳೀಯ ಪೊಲೀಸ್ ಸಿಬ್ಬಂದಿ, ಗ್ರಾ.ಪಂ. ಅಧಿಕಾರಿಗಳನ್ನು ಒಳಗೊಂಡಂತೆ ತಂಡವಾಗಿ ಒತ್ತುವರಿ ತೆರವಿಗೆ ಕ್ರಮಕೈಗೊಂಡಿದ್ದಾರೆ.
ಈವರೆಗೆ ತೆರವು ಮಾಡಿರುವ 20.82 ಎಕರೆ ಜಾಗವನ್ನು ಸ್ಥಳೀಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಜಾಗ ಮತ್ತೆ ಒತ್ತುವರಿಯಾಗದಂತೆ ಕಾಪಾಡುವ ಜವಾಬ್ದಾರಿಯನ್ನೂ ಹೊರಿಸಿದ್ದಾರೆ. ಕೆರೆಗಳ ಸುತ್ತಮುತ್ತ ಇದ್ದ ಜಾಗವನ್ನು ಅನೇಕ ಮಂದಿ ಒತ್ತುವರಿ ಮಾಡಿಕೊಂಡು ಕಾಫಿ, ಸಿಲ್ವರ್ ಗಿಡಗಳು, ಶುಂಠಿ, ಭತ್ತವನ್ನು ಬೆಳೆಯಲು ಬಳಸುತ್ತಿದ್ದರು. ಇದೀಗ ಅಂತಹ ಪ್ರಕರಣಗಳನ್ನು ಪತ್ತೆಹಚ್ಚಿ ಒತ್ತುವರಿ ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.
ತಾಲೂಕಿನ ಸಿದ್ದಲಿಂಗಪುರದಲ್ಲಿ ಕೆರೆಯ ಜಾಗದಲ್ಲಿ ಕುಟುಂಬವೊಂದು ಮನೆಯನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿತ್ತು. ಈ ಪ್ರಕರಣದಲ್ಲೂ ಸಹ ಜಾಗ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ತಾಲೂಕು ಕಂದಾಯ ಇಲಾಖೆ, ಡಿಸೆಂಬರ್ ತಿಂಗಳ ಒಳಗೆ ಸ್ವತಃ ಮನೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದು, ಈ ಬಗ್ಗೆ ನಿಯಮಾನುಸಾರ ಕ್ರಮ ವಹಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದೆ.
- ವಿಜಯ್ ಹಾನಗಲ್