ಸೋಮವಾರಪೇಟೆ, ಸೆ. 12: ಕೆಲಸದ ಅವಧಿಯಲ್ಲೂ ಕಚೇರಿಯತ್ತ ಸುಳಿಯದ, ಕಚೇರಿಗೆ ತಡವಾಗಿ ಆಗಮಿಸುವ ಹಲವಷ್ಟು ಅಧಿಕಾರಿ ಗಳನ್ನು ಕಂಡಿದ್ದೇವೆ. ಆದರೆ ಸೋಮವಾರಪೇಟೆಯ ತಹಶೀಲ್ದಾರ್ ಸರ್ಕಾರಿ ರಜೆಯ ದಿನವೂ ಸಹ ಕಚೇರಿಗೆ ಆಗಮಿಸಿ, ತಮ್ಮ ಸಿಬ್ಬಂದಿ ಯೊಂದಿಗೆ ಕಡತಗಳ ವಿಲೇವಾರಿ ಯಲ್ಲಿ ತೊಡಗಿಸಿಕೊಂಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಎರಡನೇ ಶನಿವಾರ ಸರ್ಕಾರಿ ರಜೆ ಇದ್ದು, ಭಾನುವಾರವೂ ರಜೆ ಇರುವದರಿಂದ ಸರ್ಕಾರಿ ನೌಕರರು ಎರಡು ದಿನಗಳ ಕಾಲ ರಜೆಯಲ್ಲಿ ದ್ದಾರೆ. ಆದರೆ ಸೋಮವಾರಪೇಟೆ ತಾಲೂಕಿನ ತಹಶೀಲ್ದಾರ್ ಗೋವಿಂದರಾಜು ಅವರು ರಜೆಯ ದಿನವೂ ಕಚೇರಿಗೆ ಆಗಮಿಸಿ, ಕಡತಗಳ ವಿಲೇವಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾ. 15 ರಂದು 94 ಸಿ. ಅಡಿಯಲ್ಲಿ ಹಲವಷ್ಟು ಕಡತಗಳನ್ನು ವಿಲೇವಾರಿ ಮಾಡಲು ಸಿದ್ಧತೆ ಕೈಗೊಳ್ಳಲಾಗಿದ್ದು, ಬಾಕಿ ಇರುವ ಕೆಲಸಗಳಿಗಾಗಿ ರಜೆಯ ದಿನವನ್ನು ಬಳಸಿಕೊಂಡಿದ್ದಾರೆ. ಕೆರೆಗಳ ಒತ್ತುವರಿ ತೆರವು, ಪ್ರಾಕೃತಿಕ ವಿಕೋಪದ ಪರಿಹಾರದ ಅರ್ಜಿಗಳು, ಇಲಾಖೆಯ ಸಭೆಗಳಿಂದ ‘ಬ್ಯುಸಿ’ಯಾಗಿರುವ ನಡುವೆಯೇ ಹಕ್ಕುಪತ್ರಗಳ ವಿತರಣೆಗೆ ಕ್ರಮವಹಿಸಲಾಗುತ್ತಿದೆ.

ತಹಶೀಲ್ದಾರ್ ಗೋವಿಂದರಾಜು ಕಂದಾಯ ಇಲಾಖೆಯ ಇತರ ಅಧಿಕಾರಿಗಳು, ಸಿಬ್ಬಂದಿಗಳು ಹಕ್ಕು ಪತ್ರಗಳ ವಿತರಣೆಗೆ ಕ್ರಮವಹಿಸಿದ್ದು, ತಾ.15 ರಿಂದ 94 ಸಿ. ಅಡಿಯಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಸಿದ್ಧತೆ ಪೂರ್ಣಗೊಂಡಿದೆ.

ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ 4607 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 4208 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ತಾ. 15ರಂದು ಪೂರ್ವಾಹ್ನ 10.30ಕ್ಕೆ ಕುಶಾಲನಗರದ ರೈತ ಭವನದಲ್ಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ 65 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವದು ಎಂದು ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ 3015 ಅರ್ಜಿಗಳು ಸಲ್ಲಿಕೆಯಾಗಿದ್ದು, ಈವರೆಗೆ 2042 ಅರ್ಜಿಗಳನ್ನು ವಿಲೇವಾರಿ ಮಾಡ ಲಾಗಿದೆ. ತಾ. 16ರಂದು ಪೂರ್ವಾಹ್ನ 10.30ಕ್ಕೆ ಶನಿವಾರಸಂತೆಯ ಜಿಎಂಪಿ ಶಾಲಾ ಆವರಣದಲ್ಲಿ 53 ಮಂದಿ ಫಲಾನುಭವಿಗಳಿಗೆ ಶಾಸಕರು ಹಕ್ಕುಪತ್ರ ವಿತರಿಸಲಿದ್ದಾರೆ. ಕೊಡ್ಲಿಪೇಟೆ ಹೋಬಳಿಗೆ ಒಳಪಟ್ಟಂತೆ 1837 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 1265 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡ ಲಾಗಿದೆ. ತಾ. 16ರಂದು ಪೂರ್ವಾಹ್ನ 11.39ಕ್ಕೆ ಕೊಡ್ಲಿಪೇಟೆಯಲ್ಲಿ 172 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಗೋವಿಂದ ರಾಜು ಮಾಹಿತಿ ನೀಡಿದ್ದಾರೆ.

ಊರುಡುವೆ, ಊರುಗುಪ್ಪೆ ಜಾಗಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪ್ರಾಥಮಿಕ ಹಂತದಲ್ಲಿಯೇ ತಿರಸ್ಕøತಗೊಳಿಸಲಾಗಿದೆ. ಉಳಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ಥಳಪರಿಶೀಲನೆ, ಸರ್ವೆ ಕಾರ್ಯ ನಡೆಸಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

-ವಿಜಯ್ ಹಾನಗಲ್