ಶನಿವಾರಸಂತೆ, ಸೆ. 12: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಸಂಜೆ ವೇಳೆಗೆ ಒಂದು ಇಂಚು ಮಳೆಯಾಗಿದೆ. ಶೀತ ವಾತಾವರಣದೊಂದಿಗೆ ಚಳಿ ಅಧಿಕವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಶನಿವಾರ ವಾರದ ಸಂತೆಯ ದಿನವಾಗಿದ್ದು, ಸಂತೆ ಮಾರುಕಟ್ಟೆಯೊಳಗಿನ ರಸ್ತೆಗಳು ಕೆಸರುಮಯವಾಗಿ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಮಹಾಲಯ ಅಮಾವಾಸ್ಯೆ ಪ್ರಯುಕ್ತ ಹಬ್ಬದ ಸಂತೆಯಾಗಿದ್ದು, ಮಳೆಯನ್ನೂ ಲೆಕ್ಕಿಸದೇ ವ್ಯಾಪಾರಿಗಳು ತರಕಾರಿ, ಹಣ್ಣುಹಂಪಲು, ದಿನಸಿ ಸಾಮಾನು, ಪ್ಲಾಸ್ಟಿಕ್ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರು. ಗ್ರಾಹಕರು ಮಾಸ್ಕ್ ಧರಿಸಿ ಸಂತೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿ, ತರಕಾರಿ ಬೆಲೆ ಹೆಚ್ಚಾಗಿರುವ ಬಗ್ಗೆ ಗೊಣಗುತ್ತಲೆ ಆತುರಾತುರವಾಗಿ ತೆರಳುತ್ತಿದ್ದರು.

ಸುರಿಯುತ್ತಿರುವ ಮಳೆ ರೈತರಲ್ಲಿ ಸಂತಸ ಮೂಡಿಸಿದರೂ, ಕಾಫಿ ತೋಟಗಳಿಗೆ ಹಾನಿಯುಂಟು ಮಾಡುತ್ತದೆ. ಕಾಳುಮೆಣಸು ಬಳ್ಳಿಯಿಂದ ಉದುರಲಾರಂಭಿಸುತ್ತದೆ. ಗದ್ದೆಗಳಿಗೆ ಒಳ್ಳೆಯದಾಗಿದ್ದರೂ ಇದೇ ರೀತಿ ಜಿಟಿಜಿಟಿ ಮಳೆ ಮುಂದುವರೆದರೆ ಕಾಫಿ ತೋಟಕ್ಕೆ ಹಾನಿ ಉಂಟು ಮಾಡಬಹುದು ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.