ಮಡಿಕೇರಿ, ಸೆ.12 : ಕಾಂಗ್ರೆಸ್ ಲೀಡರ್ ಆಧಾರಿತ ಪಕ್ಷವಲ್ಲ, ಇದೊಂದು ಕೇಡರ್ ಆಧಾರಿತ ಪಕ್ಷ ಎನ್ನುವುದನ್ನು ಸಾಬೀತು ಪಡಿಸಬೇಕಾಗಿದ್ದು, ಕಾರ್ಯಕರ್ತರು ನೇರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಕರೆ ನೀಡಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲು ಹಿರಿಯ ಕಾಂಗ್ರೆಸ್ಸಿಗರು ಶ್ರಮಿಸಬೇಕೆಂದು ಸೂಚನೆ ನೀಡಿದರು.
ವಲಯ, ಬ್ಲಾಕ್, ವಿಧಾನಸಭಾ ಕ್ಷೇತ್ರದ ಸಭೆಯಗಳಲ್ಲಿ ಎಲ್ಲಾ ಹಿರಿಯ ಕಾಂಗ್ರೆಸ್ಸಿಗರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಸಭೆಗಳಿಗೆ ನಿರಂತರವಾಗಿ ಗೈರು ಹಾಜರಾಗುವವರ ವಿವರವನ್ನು ಕೆಪಿಸಿಸಿಗೆ ಕಳುಹಿಸಿಕೊಡುವಂತೆ ಸಲೀಂ ಜಿಲ್ಲಾ ಸಮಿತಿಗೆ ತಿಳಿಸಿದರು. ಬ್ಲಾಕ್ ಹಂತದಲ್ಲಿ ಮಾಸಿಕ ಎರಡು ಸಭೆ, ಜಿಲ್ಲಾ ಕಾಂಗ್ರೆಸ್ ಹಂತದಲ್ಲಿ ಒಂದು ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದರು.
ಮುಖ್ಯ ಸಚೇತಕ ನಾರಾಯಣ ಸ್ವಾಮಿ ಅವರು ಮಾತನಾಡಿ, ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿಯೂ ಒಗ್ಗಟ್ಟಾಗಿ ಸಂಘಟನೆ ಮಾಡಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವಂತೆ ಕರೆ ನೀಡಿದರು.
ವಿಧಾನ ಪರಿಷತ್ ಸದಸೆÀ್ಯ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾಧ್ಯಕ್ಷರ ಬಗ್ಗೆ ನಾನು ಎಲ್ಲೂ ಅಪಸ್ವರ ವ್ಯಕ್ತಪಡಿಸಿಲ್ಲ. ನಾವೆಲ್ಲರೂ ಒಟ್ಟಾಗಿ ದುಡಿದು ಪಕ್ಷದ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕೆಪಿಸಿಸಿ ಪ್ರಮುಖರಾದ ಕೆ.ಪಿ.ಚಂದ್ರಕಲಾ ಮಾತನಾಡಿ, ಚುನಾವಣೆಯಲ್ಲಿ ಎರಡು ಬಾರಿ ಸೋಲಾಗಿ ನೋವು ಅನುಭವಿಸಿದ್ದೇನೆ. ಈ ರೀತಿಯ ಪರಿಸ್ಥಿತಿ ಬೇರೆ ಯಾವ ಅಭ್ಯರ್ಥಿಗೂ ಬಾರದಂತೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಎಂದು ಮನವಿ ಮಾಡಿದರು.
ಹಿರಿಯರಾದ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಪಕ್ಷ ಸಂಘಟನೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಕೊಡಗು ಜಿಲ್ಲೆಯಲ್ಲೂ ಪಕ್ಷದ ಚಟುವಟಿಕೆ ಅಚ್ಚುಕಟ್ಟುತನದಿಂದ ಕೂಡಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರೊಬ್ಬರು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಪ್ರೋತ್ಸಾಹ ನೀಡಿರುವುದು ಶ್ಲಾಘನೀಯ ಎಂದರು.
ರಾಜ್ಯ ನಾಯಕರ ನಿರೀಕ್ಷೆಯಂತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಶಸ್ಸು ತಂದುಕೊಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಡಿಸಿಸಿಯಿಂದ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮ, ಜನಧ್ವನಿ ಮತ್ತಿತರ ಹೋರಾಟಗಳ ಬಗ್ಗೆ ಬ್ಲಾಕ್ ಹಾಗೂ ಮುಂಚೂಣಿ ಘಟಕಗಳ ಅಧ್ಯಕ್ಷರುಗಳಿಂದ ಸಲೀಂ ಅಹಮ್ಮದ್ ಅವರು ಮಾಹಿತಿ ಪಡೆದರು. ಮುಂಬರುವ ಚುನಾವಣೆಗಳಿಗೆ ನಡೆಸಿರುವ ಸಿದ್ಧತೆಗಳ ಬಗ್ಗೆ ಚರ್ಚಿಸಿದರು.
ಪ್ರಮುಖರಾದ ಹರೀಶ್ ಬೋಪಣ್ಣ, ನಟೇಶ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನವೀನ್, ಅನಂತಕುಮಾರ್, ರಂಜಿ ಪೂಣಚ್ಚ, ಸತೀಶ್, ಅಪ್ರುರವೀಂದ್ರ, ಇಸ್ಮಾಯಿಲ್, ವಾಸು, ಬಿ.ಆರ್.ರಮಾನಾಥ್, ನರೇಂದ್ರ ಕಾಮತ್, ಕೆ.ಎಂ.ಲೋಕೇಶ್, ವಿ.ಪಿ.ಶಶಿಧರ್, ರಾಜೇಶ್, ಜಿಲ್ಲಾ ಖಜಾಂಚಿ ನಂದಕುಮಾರ್, ವಕ್ಫ್ ಮಂಡಳಿಯ ಜಿಲ್ಲಾಧ್ಯಕ್ಷ ಕೆ.ಎ.ಯಾಕುಬ್, ಹಿರಿಯರಾದ ಟಿ.ಪಿ.ರಮೇಶ್ ಸೇರಿದಂತೆ ಎಲ್ಲಾ ಘಟಕ, ವಲಯ ಮತ್ತು ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.