ಗೋಣಿಕೊಪ್ಪಲು, ಸೆ.12: ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಸೋಮವಾರಪೇಟೆ ತಾಲೂಕು ಪೊಲೀಸ್ ಉಪ ಅಧೀಕ್ಷಕ ಹೆಚ್.ಎಸ್.ಶೈಲೇಂದ್ರ ಹಾಗೂ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸ್ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಅವರನ್ನು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೋಣಿಕೊಪ್ಪಲು ಸ್ಥಾನೀಯ ಸಮಿತಿ ಹಾಗೂ ದಿ ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.ಗೋಣಿಕೊಪ್ಪಲು ಇವರ ಸಂಯುಕ್ತ ಆಶ್ರಯದಲ್ಲಿ ಹರಿಶ್ಚಂದ್ರಪುರದಲ್ಲಿರುವ ವರ್ತಕರ ಸಂಘದ ನೂತನ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗೋಣಿಕೊಪ್ಪ ಸ್ಥಾನೀಯ ಛೇಂಬರ್‍ನ ಅಧ್ಯಕ್ಷರಾದ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಶಾಲನಗರ ಡಿವ್ಯೆಎಸ್‍ಪಿ ಹೆಚ್.ಎಂ.ಶೈಲೇಂದ್ರ ಅವರು ವೀರಾಜಪೇಟೆ ಗೋಣಿಕೊಪ್ಪಲುವಿನಲ್ಲಿ ಸೇವೆ ಸಲ್ಲಿಸಿದ ದಿನಗಳು ಮರೆಯುವಂತಿಲ್ಲ ಎಂದರು.
ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸ್ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್ ಮಾತನಾಡಿ, ತಾವು ಶ್ರೀಮಂಗಲದಲ್ಲಿ 2002ರಲ್ಲಿ ಪೊಲೀಸ್ ಉಪ ನಿರೀಕ್ಷಕನಾಗಿ ಜಿಲ್ಲೆಯಲ್ಲಿ ಸೇವೆ ಆರಂಭಿಸಿದ್ದು, ಬಹುತೇಕ ದಕ್ಷಿಣ ಕೊಡಗಿನಲ್ಲಿಯೇ ಅಧಿಕ ಸೇವೆ ಸಲ್ಲಿಸಿದ ಬಗ್ಗೆ ಮೆಲುಕು ಹಾಕಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವೀರಾಜಪೇಟೆ ಪೊಲೀಸ್ ಅಧೀಕ್ಷಕ ಜಯಕುಮಾರ್, ಇಬ್ಬರು ಅರ್ಹ ಅಧಿಕಾರಿಗಳಿಗೆ ರಾಷ್ಟ್ರಪತಿ ಪ್ರಶಸ್ತಿ ಸಂದಿದೆ. ಇವರ ಉತ್ತಮ ಸೇವೆಯನ್ನು ಇಲಾಖೆ ಗುರುತಿಸಿದೆ. ಇವರಿಗೆ ಇನ್ನಷ್ಟು ಉತ್ತಮ ಪ್ರಶಸ್ತಿಗಳು ಬರಲಿ ಎಂದು ಶುಭ ಕೋರಿದರು.
ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಮಾತನಾಡಿ ಗೋಣಿಕೊಪ್ಪದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪಿ.ಕೆ.ರಾಜು, ಶೈಲೇಂದ್ರ ಹಾಗೂ ದಿವಾಕರ್ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಚಾರ ನಗರಕ್ಕೆ ಆಗಮಿಸುವ ಅಧಿಕಾರಿಗಳು ಎಲ್ಲರೊಂದಿಗೂ ಉತ್ತಮ ಭಾಂದವ್ಯ ಹೊಂದುವ ಮೂಲಕ ಉತ್ತಮ ಕೆಲಸ ನಿರ್ವಹಿಸುತ್ತಿರುವುದೇ ಸಾಧನೆಗೆ ಕಾರಣ ಎಂದರು.
ಚೇಂಬರ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಅಧಿಕಾರಿಗಳ ಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ನಿರ್ದೇಶಕಿ ಚೇಂದಂಡ ಸುಮಿಸುಬ್ಬಯ್ಯ ಪ್ರಾರ್ಥಿಸಿ, ಮಾಜಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್.ಪ್ರಕಾಶ್ ಸ್ವಾಗತಿಸಿ ಹಾಗೂ ಪ್ರಭಾಕರ್ ನೆಲ್ಲಿತ್ತಾಯ ವಂದಿಸಿದರು. ಕಾರ್ಯಕ್ರಮದಲ್ಲಿ ದೇವರಪುರದ ಕೊಡುಗೈ ದಾನಿ ಮನೆಯಪಂಡ ಡಬ್ಲ್ಯು ಅಯ್ಯಪ್ಪ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಎಂ.ಪಿ.ಕೇಶವ್ ಕಾಮತ್, ವರ್ತಕರ ಸಂಘ ಹಾಗೂ ಬ್ಯಾಂಕ್ ಪದಾಧಿಕಾರಿಗಳು ಹಾಜರಿದ್ದರು.