‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ, ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ, ಎಲ್ಲಿ ಮುಗಿಲಲಿ ಮಿಂಚಿನೊಳ್ ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ, ಅಲ್ಲಿ ಆ ಕಡೆ ನೋಡಲಾ, ಅಲ್ಲಿ ಕೊಡಗರ ಬೀಡಲಾ’ ಎಂಬ ಕವಿ ಪಂಜೆಮಂಗೇಶರಾಯರ ಕವಿವಾಣಿಯಂತೆ ಸುಂದರ ಕೊಡಗಿನ ಪಶ್ಚಿಮಘಟ್ಟಗಳ ಸಾಲನ್ನು ನೋಡಲು ಈಗ ಎರಡು ಕಣ್ಣುಗಳು ಸಾಲದು. ಮಳೆಗಾಲದಲ್ಲಿ ಸಹಜವಾಗಿಯೇ ನವಿರಾದ ಹಸಿರುಡುಗೆ ತೊಟ್ಟು ನಿಂತ ಬೆಟ್ಟ ಸಾಲುಗಳು... ಅರೆ ಕ್ಷಣ ಆ ಮುಗಿಲನ್ನು ಅಪ್ಪಿ ಹಾಗೆಯೇ ಮುತ್ತಿಟ್ಟು ಮುಂದೆ ಸಾಗುವ ಮೋಡಗಳ ಲೀಲಾ ವಿನೋದಗಳು ಇದೀಗ ಕ್ಯಾಮೆರಾದ ಕಣ್ಣುಗಳಿಗೆ ಸೆರೆಯಾಗುವ ನಿತ್ಯದ ವೈಭವ. ಮಳೆಗಾಲದ ಈ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿ ಪ್ರಕೃತಿ ಪ್ರಿಯರ ಕಣ್ಣುಗಳಿಗೆ ರಸದೌತಣ ನೀಡುವ ಚಿತ್ರ ಸದೃಶಗಳು ಶಾಂತಳ್ಳಿ, ಬೀದಳ್ಳಿ, ಸೂರ್ಲಬ್ಬಿ ಭೂಭಾಗದಲ್ಲಿ ಕಂಡು ಬರುತ್ತವೆ. ಕರ್ನಾಟಕದ ಕಾಶ್ಮೀರವೆಂದೇ ವಿಖ್ಯಾತಿಗೊಂಡ ಕೊಡಗು ಜಿಲ್ಲೆಯ ಪಶ್ಚಿಮೋತ್ತರ ದಿಕ್ಕಿನಲ್ಲಿ ಕಂಡು ಬರುವ ಈ ಪಶ್ಚಿಮಘಟ್ಟಗಳ ಸಾಲು ಎಂಥವರನ್ನು ಇದೀಗ ಕೈಬೀಸಿ ಕರೆಯುತ್ತವೆ. ಈ ಪಶ್ಚಿಮಘಟ್ಟ ಸಾಲಿನಲ್ಲಿ ಗರಿಗೆದರುವ ಜಲರಾಶಿಯನ್ನು ನೋಡುವುದೇ ಒಂದು ಅದ್ಭುತ. ಸ್ವಾಭಾವಿಕವಾದ ಬೆಟ್ಟ ಶ್ರೇಣಿಗಳಲ್ಲಿ ಜಿನುಗಿ ಹರಿವ ಈ ಜಲಧಾರೆ ಅದೊಂದು ನಿಸರ್ಗದೇವತೆಯ ಪರಮ ತೀರ್ಥವೇ ಸರಿ. ಅಷ್ಟೊಂದು ಸ್ವಚ್ಛಂದವಾಗಿ ಹಾಗೂ ಶುಭ್ರವಾಗಿ ಹರಿವ ನೀರು ಪಶ್ಚಿಮ ಘಟ್ಟ ಶ್ರೇಣಿಗಳಲ್ಲಿ ವಾಸವಿರುವ ಜನರ ಆರೋಗ್ಯದ ಮೂಲವಾಗಿದೆ. ಸ್ವಾಭಾವಿಕವಾಗಿ ಬೆಳೆದು ನಿಂತ ಸಸ್ಯರಾಶಿ, ಗಿಡ ಮರಗಳ ಬೇರುಗಳ ಸಂದುಗಳಲ್ಲಿ ಹಾಗೂ ಶಿಲಾಪದರಗಳೊಳಗೆ ಹರಿದು ಬರುವ ಪಾವನ ಗಂಗೆಯನ್ನು ಕುಡಿಯುವುದೇ ಒಂದು ಪರಮಾನಂದ. ಇನ್ನು ಇಲ್ಲಿ ಸಿಗುವ ಗಿಡಮೂಲಿಕೆಗಳು, ಸಸ್ಯ ಪ್ರಬೇಧಗಳು ಭಾರತದ ಆಯುರ್ವೇದ ಶಾಸ್ತ್ರದ ಮೇರು ಮಂತ್ರ. ಈ ಪಶ್ಚಿಮಘಟ್ಟಗಳಲ್ಲಿ ಸಿಗುವ ಶುದ್ಧ ಆಮ್ಲಜನಕವಂತೂ ಅಬ್ಬಬ್ಬಾ...! ವಿವರಣೆಗೆ ನಿಲುಕದ್ದು. ಇಂತಹ ಸುಂದರ ನಿಸರ್ಗದ ಮಡಿಲಲ್ಲಿರುವ ನಾವೇ ಧನ್ಯರು. ಇನ್ನು ಈ ಘಟ್ಟಪ್ರದೇಶದ ಪ್ರಮುಖ ಜಲಧಾರೆಯಾಗಿ ಕಂಡುಬರುವ ಮಲ್ಲಳ್ಳಿ ಜಲಪಾತ ವೈಭವವನ್ನು ಮೈದುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು. ರಾಜ್ಯದ ಕೊಡಗು ಜಿಲ್ಲೆಯೂ ಸೇರಿದಂತೆ ನೆರೆಯ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಸೇರಿದಂತೆ ಆರು ರಾಜ್ಯಗಳಲ್ಲಿ ಸುಮಾರು 1600 ಕಿ.ಮೀ. ಉದ್ದ ಪಸರಿಸಿರುವ ಈ ಪಶ್ಚಿಮಘಟ್ಟಗಳು 1200 ಮೀ. ಎತ್ತರದಲ್ಲಿವೆ. ಈ 1600 ಕಿ.ಮೀ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಕರ್ನಾಟಕ ರಾಜ್ಯದಲ್ಲಿಯೇ ಈ ಪಶ್ಚಿಮಘಟ್ಟಗಳಿವೆ. ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಯಾಗಿರುವ ಈ ಪಶ್ಚಿಮಘಟ್ಟಗಳಲ್ಲಿ 5 ಸಾವಿರಕ್ಕೂ ಹೆಚ್ಚಿನ ಗಿಡ ಮರಗಳು, 130ಕ್ಕೂ ಹೆಚ್ಚಿನ ಸಸ್ತನಿ ಹಾಗೂ ಸಸ್ಯಪ್ರಬೇಧಗಳು, 508 ವಿವಿಧ ಮಾದರಿಯ ಪಕ್ಷಿಗಳು, 175 ವಿವಿಧ ಪ್ರಾಕಾರಗಳ ಉಭಯವಾಸಿಗಳು ಇಲ್ಲಿವೆ. ವಿಶ್ವದ ಅಳಿವಿನಂಚಿನಲ್ಲಿರುವ 325 ತಳಿಗಳ ಜೀವಿಗಳು ಈ ಶ್ರೇಣಿಯಲ್ಲಿ ನೆಲೆಸಿವೆ ಎಂಬುದು ವಿಶೇಷ. ಮಳೆಯ ಮೋಡಗಳನ್ನು ತಡೆಯುವ ಈ ಪಶ್ಚಿಮ ಘಟ್ಟಗಳಿಂದಲೇ ಪ್ರತೀ ವರ್ಷ ಮಳೆ ಉತ್ತಮವಾಗಿ ಬೀಳುವುದರಿಂದಲೇ ಈ ಪಶ್ಚಿಮ ಘಟ್ಟಗಳು ನಿತ್ಯಹರಿದ್ವರ್ಣದಲ್ಲಿರುತ್ತವೆ. ಆಮ್ಲಜನಕವನ್ನು ಹೆಚ್ಚಾಗಿ ಉತ್ಪಾದಿಸುವ ಈ ಪಶ್ಚಿಮಘಟ್ಟಗಳು ಅರ್ಧ ಭಾರತದ ಜನರ ಉಸಿರು ಎನ್ನಲಾಗಿದೆ. ಇಂಗಾಲದ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವ ಈ ಘಟ್ಟಗಳು ಶುದ್ಧ ಆಮ್ಲಜನಕವನ್ನು ನಮ್ಮ ಉಸಿರಾಟಕ್ಕೆ ನೀಡುವ ಮೂಲಕ ನಮ್ಮನ್ನು ಆರೋಗ್ಯದಿಂದ ಸಂರಕ್ಷಿಸುತ್ತಿವೆ. ಮಾನವ ಆರೋಗ್ಯದ ಈ ಪಶ್ಚಿಮ ಘಟ್ಟಗಳನ್ನು ನಾವೆಲ್ಲಾ ಹಾಳು ಮಾಡದೇ ಉಳಿಸಿ ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಅಷ್ಟೇ ಜೋಪಾನವಾಗಿ ಹಾಗೂ ಸ್ವಚ್ಛಂದವಾಗಿ ಹಸ್ತಾಂತರಿಸಬೇಕಿದೆ. ಸುಂದರ ಪರಿಸರ, ಪ್ರಕೃತಿ ಹಾಗೂ ನದಿ ಮೂಲಗಳು ಮಾನವನ ಅಸ್ತಿತ್ವ. ಅವುಗಳನ್ನು ನಾವು ಸದಾ ಪೂಜಿಸುವ ಮೂಲಕ ಆರಾಧಿಸುವ ಮೂಲಕ ಸಂರಕ್ಷಿಸಬೇಕಿದೆ. ಇಂತಹ ಸುಂದರವಾದ ಪ್ರಾಕೃತಿಕ ಸೊಬಗನ್ನು ಆಸ್ವಾದಿಸಲು ಬರುವ ಪ್ರವಾಸಿಗರು ಈ ಭೂಮಿತಾಯಿಯ ತೊಟ್ಟಿಲನ್ನು ಅಸ್ವಚ್ಛ ಮಾಡದಂತೆ, ಪರಿಸರವನ್ನು ಅಸ್ವಸ್ಥ ಮಾಡದಂತೆ ಎಚ್ಚರಿಕೆ ವಹಿಸಿದರೆ ಮಾತ್ರ ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆಯ ಶ್ವಾಸದ ಮೇಲೆ ವಿಶ್ವಾಸ ಇಟ್ಟು ಭೂಮಿತಾಯಿಯ ಮಡಿಲನ್ನು ಆರಾಧಿಸೋಣ. ಆಸ್ವಾಧಿಸೋಣ... ಏನಂತೀರಾ...?

- ಕೆ.ಎಸ್. ಮೂರ್ತಿ