ಕುಶಾಲನಗರ, ಸೆ. 11: ಕಳೆದ ಹಲವು ದಶಕಗಳನ್ನು ಕಂಡ ಕುಶಾಲನಗರ ಸಾಂಪ್ರದಾಯಿಕ ಸಂತೆ ಮಾರುಕಟ್ಟೆ ಕೊನೆಗೂ ಸ್ಥಳಾಂತರಗೊಳ್ಳುವುದರೊಂದಿಗೆ ಸಂಭಾವ್ಯ ಅಪಾಯದಿಂದ ಮುಕ್ತಿ ಲಭಿಸುವಂತಾಗಿದೆ. ಎರಡು ದಶಕಗಳಿಂದ ಮಾರುಕಟ್ಟೆ ಆವರಣದ ಮೇಲೆ ಹಾದು ಹೋಗಿರುವ ಭಾರೀ ಪ್ರಮಾಣದ ಅಪಾಯಕಾರಿ ವಿದ್ಯುತ್ ತಂತಿಗಳಿಂದ ದುಷ್ಪರಿಣಾಮಗಳು ಕಂಡುಬಂದರೂ ಈ ಬಗ್ಗೆ ಸ್ಥಳೀಯ ಆಡಳಿತ ಯಾವುದೇ ಗಮನಹರಿಸಿರಲಿಲ್ಲ.
ಸುಮಾರು 10ಕ್ಕೂ ಅಧಿಕ ಬೃಹತ್ ಪ್ರಮಾಣದ ವಿದ್ಯುತ್ ಗೋಪುರಗಳು ಮಾರುಕಟ್ಟೆಯಲ್ಲಿ ತಲೆಎತ್ತಿದ್ದು, ಕಳೆದ ಮೂರು ವರ್ಷಗಳಿಂದ ಕಾವೇರಿ ನದಿ ಉಕ್ಕಿ ಹರಿದು ಕೆಲವು ದಿನಗಳ ಕಾಲ ಜಲಾವೃತಗೊಂಡು ಅಪಾಯದ ಮುನ್ಸೂಚನೆಯನ್ನು ನೀಡುತ್ತಲೇ ಇದ್ದರೂ ಇದರ ಕೆಳಭಾಗದಲ್ಲಿ ಮಾತ್ರ ಸಾವಿರಾರು ಜನ ವ್ಯಾಪಾರ ವಹಿವಾಟು ಮುಂದುವರೆದಿತ್ತು.
ಕುಶಾಲನಗರ ಸಂತೆ ಮಾರುಕಟ್ಟೆ ಅಪಾಯವನ್ನು ಆಹ್ವಾನಿಸುತ್ತಿದೆ ಅನ್ನುವ ವರದಿಗಳು ಆಗಾಗ್ಗೆ ಪ್ರಕಟಗೊಂಡರೂ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ವ್ಯಾಪಾರ ವಹಿವಾಟು ಮಾತ್ರ ನಿರಂತರವಾಗಿ ನಡೆದು ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸುವ ಮುನ್ನ ಇದೀಗ ಕುಶಾಲನಗರ-ಮೈಸೂರು ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಗೊಂಡಿರುವುದು ನಿಜಕ್ಕೂ ಸಂತಸದ ವಿಷಯ.
ಗಣಪತಿ ದೇವಾಲಯ ಸೇವಾ ಸಮಿತಿ ಈ ಅಪಾಯದ ಮುನ್ಸೂಚನೆಯನ್ನು ಅರಿತು ಜಾತ್ರಾ ಸಂತೆಯನ್ನು ಮಾತ್ರ ಕಳೆದ ಕೆಲವು ವರ್ಷಗಳ ಹಿಂದೆಯೇ ಗುಂಡೂರಾವ್ ಬಡಾವಣೆಯ ಪ್ರದೇಶಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿತ್ತು.
ಕುಶಾಲನಗರ ಪಟ್ಟಣ ಪಂಚಾಯಿತಿಗೆ ಸೇರಿದ ಮಾರುಕಟ್ಟೆ ಆವರಣ ಅಂದಾಜು ಏಕರೆಗಟ್ಟಲೆ ಪ್ರದೇಶದಲ್ಲಿ ವ್ಯಾಪಿಸಿದೆ. ಮೇಲ್ಭಾಗದಲ್ಲಿ ಹಾದು ಹೋಗಿರುವ 2 ಲಕ್ಷದ ಇಪ್ಪತ್ತು ಸಾವಿರ ವೋಲ್ಟ್ ಸಾಮಥ್ರ್ಯದ ಭಾರೀ ಪ್ರಮಾಣದ ವಿದ್ಯುತ್ ತಂತಿಗಳು ಅಪಾಯವನ್ನು ಆಹ್ವಾನಿಸುತಿದ್ದವು.
ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯ ಆವರಣದ ಮೇಲ್ಭಾಗದಲ್ಲಿ 220 ಕೆ.ವಿ. ವಿದ್ಯುತ್ ತಂತಿಗಳನ್ನು ಅಳವಡಿಸಲಾಗಿದ್ದು, ಇವುಗಳಿಗೆ ಮಾರುಕಟ್ಟೆಯ ಆವರಣದಲ್ಲಿಯೇ ಕಬ್ಬಿಣದ ಗೋಪುರಗಳನ್ನು ನಿರ್ಮಿಸಲಾಗಿದೆ. ಮೈಸೂರು ಬಸ್ತಿಪುರ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ಈ ಭಾರೀ ಸಾಮಥ್ರ್ಯದ ವಿದ್ಯುತ್ ಲೈನುಗಳು ಕುಶಾಲನಗರದ ಘಟಕಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ಇಲ್ಲಿಂದ 66 ಕೆ.ವಿ. ಸಾಮಥ್ರ್ಯದ ವಿದ್ಯುತ್ ಮಾರ್ಗಗಳು, ಮೈಸೂರು, ಸೋಮವಾರಪೇಟೆ ಹಾಗೂ ರಾಮನಾಥಪುರ ಕಡೆಗೆ ಇದೇ ಮಾರುಕಟ್ಟೆ ಮೇಲೆ ಹಾದು ಹೋಗುತ್ತಿವೆ. ಇಷ್ಟೆಲ್ಲಾ ಸಾಮಥ್ರ್ಯದ ಅಪಾಯಕಾರಿ ವಿದ್ಯುತ್ ಮಾರ್ಗಗಳು ಮೇಲ್ಬಾಗದಲ್ಲಿ ಹಾದು ಹೋಗುತ್ತಿದ್ದರೂ, ಕಳೆದ ಕೆಲವು ವರ್ಷಗಳಿಂದ ಪ.ಪಂ. ಅಧಿಕಾರಿಗಳು ಮೌನವಹಿಸಿದ್ದರು. ಈ ನಡುವೆ ಈ ಜಾಗದಲ್ಲಿ ವ್ಯಾಪಾರ ವಹಿವಾಟು ನಡೆಸಲು ಸೆಸ್ಕಾಂ ಇಲಾಖೆಯಿಂದಾಗಲೀ, ಅಗ್ನಿಶಾಮಕ ಇಲಾಖೆಯಿಂದಾಗಿ ಸಂಬಂಧಿಸಿದ ಆಕ್ಷೇಪಣಾ ರಹಿತ ಪತ್ರವನ್ನು ಪಡೆದಿರಲಿಲ್ಲ ಎಂಬದೇ ದುರಂತ!
ಒಂದು ವೇಳೆ ಮೇಲ್ಭಾಗದಲ್ಲಿ ಹಾದು ಹೋಗಿರುವ ಭಾರೀ ಸಾಮಥ್ರ್ಯದ ವಿದ್ಯುತ್ ಮಾರ್ಗದಲ್ಲಿಯ ತಂತಿಗಳು ಏರುಪೇರು ಉಂಟಾದಲ್ಲಿ ಭಾರೀ ಅನಾಹುತ ಸಂಭವಿಸಿದರೆ ನಾಗರಿಕರಿಗೆ ಯಾವುದೇ ಭದ್ರತೆಯ ಬಗ್ಗೆ ಪಂಚಾಯಿತಿ ಅಧಿಕಾರಿಗಳು ನಿಗಾವಹಿಸದಿದ್ದದು ಆತಂಕಕಾರಿ ಬೆಳವಣಿಗೆ. ವಿಶೇಷವೆಂದರೆ, ಇಷ್ಟೆಲ್ಲಾ ಆವಾಂತರಗಳಿರುವ ಜಾಗದಲ್ಲಿ ಸರ್ಕಾರದ ಕೋಟಿಗಟ್ಟಲೆ ಹಣವನ್ನು ಬಳಸಿ ಸ್ಥಳೀಯ ಆಡಳಿತ ಸಂತೆ ಮಾರುಕಟ್ಟೆ ನಿರ್ಮಾಣ ಕೈಗೊಂಡಿತ್ತು!
ಅಪಾಯಕಾರಿ ವಿದ್ಯುತ್ ಮಾರ್ಗಗಳ ಕೆಳಭಾಗದಲ್ಲಿ ದಿನನಿತ್ಯ ಜೀವ ಕೈಯಲ್ಲಿ ಹಿಡಿದು ಮಾಂಸ ಮಾರುಕಟ್ಟೆಯ ಕಾರ್ಮಿಕರು ಕೆಲಸ ನಿರ್ವಹಿಸಬೇಕಾಗಿದೆ. ಆಗಾಗ್ಯೆ ಭಾರೀ ಶಬ್ದಗಳು ಉಂಟಾಗುತ್ತಿವೆ. ಮಳೆಗಾಲದಲ್ಲಿ ಕೆಲಮೊಮ್ಮೆ ಭೂಮಿಯಲ್ಲಿ ವಿದ್ಯುತ್ ಶಾಕ್ ಹೊಡೆಯುವ ಅನುಭವ ಕೂಡ ಉಂಟಾಗುತ್ತವೆ ಎನ್ನುವುದು ಕೆಲವರ ಮಾತು. ಭಾರೀ ಗಾತ್ರದ ಪಕ್ಷಿಗಳು ಹಾರಾಡುವ ಸಂದರ್ಭ ತಂತಿಗಳಿಗೆ ತಗುಲಿ ಬಾಂಬ್ ಸಿಡಿದಂತೆ ಭಾಸವಾಗುತ್ತದೆ. ಭಾರೀ ಗಾತ್ರದ ವಿದ್ಯುತ್ ಗೋಪುರಗಳ ಅಡಿಯಲ್ಲಿಯೇ ವಾಹನ ಪಾರ್ಕಿಂಗ್ ವ್ಯವಸ್ಥೆ ಇತ್ತು.
ಇದೀಗ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅಪಾಯಕಾರಿ ಮಾರುಕಟ್ಟೆ ಆವರಣದಿಂದ ವಾರದ ಸಂತೆಯನ್ನು ಸ್ಥಳಾಂತರಗೊಳಿಸುವಲ್ಲಿ ಯಶಸ್ವಿಯಾಗಿರುವುದು ಈ ಭಾಗದ ವರ್ತಕರಲ್ಲಿ ಸಂತಸ ತಂದಿದೆ.
ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು ಈ ಎಲ್ಲಾ ಅಂಶಗಳ ಪರಿಗಣನೆಯೊಂದಿಗೆ ಕುಶಾಲನಗರದ ವಾರದ ಸಂತೆ ಎಪಿಎಂಸಿ ಆವರಣಕ್ಕೆ ಸ್ಥಳಾಂತರಗೊಂಡಿದೆ.
ಕುಶಾಲನಗರ ಹಳೆಯ ಮಾರುಕಟ್ಟೆ ಆವರಣ ಯಾವುದೇ ರೀತಿಯಲ್ಲಿ ಖಾಸಗಿ ವ್ಯಕ್ತಿಗಳ ಪರಭಾರೆಯಾಗದಂತೆ ಎಚ್ಚರವಹಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ಬೆಲೆಬಾಳುವ ಜಾಗವನ್ನು ತಮ್ಮದಾಗಿಸಿಕೊಳ್ಳುವ ದಂಧೆಯಿಂದ ಈ ಜಾಗವನ್ನು ಸಂರಕ್ಷಿಸಿಕೊಳ್ಳಲು ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ಅಪಾಯಕಾರಿ ವಿದ್ಯುತ್ ಮಾರ್ಗವನ್ನು ಪಟ್ಟಣದಿಂದ ಹೊರ ವಲಯಕ್ಕೆ ಸ್ಥಳಾಂತರಿಸುವುದರೊಂದಿಗೆ ಈ ಪ್ರದೇಶವನ್ನು ತಾಲೂಕು ಕೇಂದ್ರ ಕಚೇರಿಗಳ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳುವುದು ಸೂಕ್ತ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. -ಎಂ. ಎನ್. ಚಂದ್ರಮೋಹನ್