ಮಡಿಕೇರಿ ಖಾಸಗಿ ಹಳೆಯ ಬಸ್ ನಿಲ್ದಾಣ ಬಳಿ; ನಿತ್ಯ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಸಂಜೆ 6 ಗಂಟೆಯತನಕ ಸದಾ ಜನತೆಯ ನಿರಂತರ ಒಡನಾಟ ಇದ್ದವರು ಎಂ. ಮಹಮ್ಮದ್, 62 ವರ್ಷದ ಈ ಮಹಮ್ಮದ್ ಸದಾ ನಗುಮೊಗದೊಂದಿಗೆ ದಣಿವರಿಯದೆ ಕೊರೊನಾ ನಡುವೆಯೂ ಜನತೆಯ ಅವಶ್ಯಕ ವಸ್ತುಗಳಾದ ಹಾಲು, ಪತ್ರಿಕೆ ಸಹಿತ ಇತರ ಸಾಕಷ್ಟು ಕೊರತೆಗಳನ್ನು ನೀಗುವಂತೆ ನೋಡಿ ಕೊಂಡಿದ್ದರು. ಮುಖ್ಯವಾಗಿ ಕೊರೊನಾ ಸೋಂಕಿನ ಆತಂಕ ನಡುವೆ ಜಿಲ್ಲಾಡಳಿತ ಹಾಗೂ ಸರಕಾರದಿಂದ ಬೇಕರಿಗಳನ್ನು ಮುಚ್ಚಲಾಗಿತ್ತು. ಹಾಲು ಮತ್ತು ಪತ್ರಿಕೆಗಳ ವಿತರಣೆಗೂ ಸಮಯ ನಿಗಧಿಗೊಳಿಸಿತ್ತು. ಈ ಎಲ್ಲಾ ಸಂದರ್ಭ ನಿಗಧಿತ ಕಾಲ ಮಿತಿಯೊಳಗೆ ದೂರದ ಕೂಡಿಗೆಯಿಂದ ನಿತ್ಯ ಮಡಿಕೇರಿಗೆ ಅದೇ ಹಾಲಿನ ಲಾರಿಯಲ್ಲಿ ಮಹಮ್ಮದ್ ಪ್ರಯಾಣಿಸುತ್ತಾ, ಮಡಿಕೇರಿ ಜನತೆಗೆ ಹಾಲು, ಪತ್ರಿಕೆ, ಬೇಕರಿ ಉತ್ಪನ್ನಗಳಾದ ಬ್ರೆಡ್, ಬಿಸ್ಕತ್, ರಸ್ಕ್, ಇನ್ನಿತರ ರೆಡಿಮೆಡ್ ಆಹಾರ ಪದಾರ್ಥಗಳ ಕೊರತೆಯನ್ನು ನೀಗಿಸುತ್ತಿದ್ದರು. ನಿರ್ಬಂಧಗಳ ನಡುವೆ ಜನ ನೂಕು ನುಗ್ಗಲಿನಲ್ಲಿ ತಮ್ಮ ಬೇಡಿಕೆಗಳಿಗೆ ಮುಗಿಬಿದ್ದರೂ, ಈ ಮಹಮ್ಮದ್ ಕೊಂಚವೂ ದಣಿವು ತೋರಿಸಿಕೊಳ್ಳದೆ; ಪೈಸೆಯ ಚಿಲ್ಲರೆಯೂ ವ್ಯತ್ಯಾಸವಾಗದಂತೆ ವ್ಯವಹರಿಸುತ್ತಾ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದರು.

ದಸರಾದಂತ ಸಂದರ್ಭ ಇಡೀ ರಾತ್ರಿ ಜನತೆಗೆ ಕುಡಿಯಲು ಬಿಸಿಬಿಸಿ ಹಾಲಿನೊಂದಿಗೆ ಇತರ ತಿನಿಸುಗಳ ಕೊರತೆ ಆಗದಂತೆ ವ್ಯಾಪಾರ ಧರ್ಮ ಪಾಲಿಸುತ್ತಿದ್ದುದ್ದು ಇನ್ನು ನೆನಪು ಮಾತ್ರ. ತಾ. 7 ರಂದು ಕೂಡ ನಡುರಾತ್ರಿ ಸರಿಯುತ್ತಿದ್ದಂತೆಯೇ ತಾ. 8 ರಂದು ಉಷಾಃಕಾಲದಲ್ಲಿ ಎದ್ದು ಮತ್ತೆ ಕರ್ತವ್ಯಕ್ಕೆ ಅಣಿಗೊಳ್ಳುತ್ತಿದ್ದ ಮಹಮ್ಮದ್ ಹಠಾತ್ ಎದೆನೋವಿನೊಂದಿಗೆ ಹೃದಯಾಘಾತದಿಂದ ಆಸ್ಪತ್ರೆಗೆ ಮನೆಮಂದಿ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಮಡಿಕೇರಿ ಡೈರಿ ಉಪಕೇಂದ್ರದಲ್ಲಿ ‘‘ಶಕ್ತಿ’’ಯನ್ನು ಸದಾ ಓದುಗರಿಗೆ ತಲುಪಿಸುತ್ತಿದ್ದ ಅವರ ಕಾಳಜಿ ಇನ್ನೂ ಮರೆಯಲಾಗದು... -ಮಿರರ್