ಪತ್ರಿಕಾ ವಿತರಕರ ಯೋಜನೆ ಜಾರಿಗೆ ಆಗ್ರಹ
ಮಡಿಕೇರಿ, ಸೆ. 11: ಮಳೆ, ಗಾಳಿ, ಬಿಸಿಲೆನ್ನದೆ ಪತ್ರಿಕೆಗಳನ್ನು ಮನೆಯ ಬಾಗಿಲುಗಳಿಗೆ ಪ್ರತಿ ದಿನವೂ ತಲುಪಿಸುವ ಕಾಯಕ ಮಾಡುತ್ತಿರುವ ಪತ್ರಿಕಾ ವಿತರಕರಿಗಾಗಿ ಸರ್ಕಾರ ಎರಡು ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ ಆದರೆ ಈತನಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಕೂಡಲೇ ಈ ಯೋಜನೆ ರೂಪಿಸುವ ಬಗ್ಗೆ ಗಮನ ಹರಿಸಬೇಕು. ಅವರುಗಳ ಸಾವು - ನೋವುಗಳಾದ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹಾಗೂ ಪದಾಧಿಕಾರಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಮಂಡ್ಯದಲ್ಲಿ ಅರ್ಚಕರ ಬರ್ಬರ ಹತ್ಯೆ
ಮಂಡ್ಯ, ಸೆ. 11: ತಲೆ ಮೇಲೆ ಕಲ್ಲು ಹಾಕಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸಕ್ಕರೆನಾಡಿನ ಮಂಡ್ಯ ಜನತೆಯನ್ನು ಬೆಚ್ಚಿಬೀಳಿಸಿದೆ. ಗಣೇಶ, ಪ್ರಕಾಶ ಮತ್ತು ಆನಂದ ಕೊಲೆಯಾದವರು. ಗುರುವಾರ ರಾತ್ರಿ ಮಂಡ್ಯದ ಅರ್ಕೇಶ್ವರ ದೇವಾಲಯದಲ್ಲಿ ಘಟನೆ ನಡೆದಿದೆ. ಮೂವರು ಅರ್ಚಕರಾಗಿ ಹಾಗೂ ಸೆಕ್ಯುರಿಟಿ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಮಲಗಿರುವಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ದೇವಾಲಯದ ಆವರಣದಲ್ಲೇ ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳು ದೇವಸ್ಥಾನದ ಹುಂಡಿ ಹೊತ್ತೊಯ್ದು ಹೊರಗೆ ಬಿಸಾಡಿದ್ದು, ಹುಂಡಿ ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಠಾಣಾ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಂತ್ರಸ್ಥ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ದೇವಸ್ಥಾನದ ಪೂಜಾರಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಈ ಬಾರಿಯೂ ಕರ್ನಾಟಕಕ್ಕೆ ಹಣವಿಲ್ಲ
ನವದೆಹಲಿ, ಸೆ.11 : 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕ ಹೊರತುಪಡಿಸಿದಂತೆ 14 ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗಿ 6,195 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೊರೋನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆದಾಯ ಕೊರತೆ ಎದುರಿಸುತ್ತಿರುವ 14 ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲವಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. 15 ನೇ ಹಣಕಾಸು ಆಯೋಗದ ಆರ್ಥಿಕ ಸಲಹಾ ಮಂಡಳಿಯು ಮುಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2020-21 ಮತ್ತು 2021-22ರ ಆರ್ಥಿಕ ವರ್ಷವನ್ನು ವಿಭಿನ್ನವಾಗಿ ಪರಿಗಣಿಸುವಂತೆ ಸೆಪ್ಟೆಂಬರ್ 5 ರಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತು.
ಅರಣ್ಯ ಸಿಬ್ಬಂದಿಗೆ 30 ಲಕ್ಷ ಪರಿಹಾರ
ಬೆಂಗಳೂರು, ಸೆ.11 : ಅರಣ್ಯ ಇಲಾಖೆಯಲ್ಲಿ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಮರಣ ಹೊಂದಿದಲ್ಲಿ ಅವರಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ 20 ರಿಂದ 30 ಲಕ್ಷ ರೂ. ಗಳಿಗೆ ಏರಿಕೆ ಮಾಡಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಅವರು ಹೇಳಿದ್ದಾರೆ.ಅಲ್ಲದೆ ಹುತಾತ್ಮರ ಕುಟುಂಬಗಳಿಗೆ ನೆರವಾಗಲು ಹುತಾತ್ಮರ ದಿನಾಚರಣೆ ಸಮಿತಿಯನ್ನು ರಚಿಸಿ ನಿಧಿ ಸಂಗ್ರಹಿಸಲಾಗಿದ್ದು, ಈವರೆಗೆ ಕ್ರೋಢೀಕರಣವಾಗಿರುವ ಒಟ್ಟು 20,64,842 ರೂ. ಮೊತ್ತವನ್ನು ಹುತಾತ್ಮರ ಅವಲಂಬಿತರ ಏಳಿಗೆಗಾಗಿ ಬಳಸಲಾಗುವುದು ಎಂದರು. ಅರಣ್ಯ ಭವನದಲ್ಲಿಂದು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ-2020 ಹಾಗೂ ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅವರು, ಅರಣ್ಯ ಉಳಿಸಿ ಬೆಳೆಸುವುದು, ಅರಣ್ಯ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರವಲ್ಲ. ಅರಣ್ಯ ಸಂರಕ್ಷಣೆ ರಾಷ್ಟ್ರದ ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಎಂದರು.
60 ವರ್ಷ ಮೀರಿದವರಿಗೆ ವೃದ್ಧಾಪ್ಯ ಪಿಂಚಣಿ
ತುಮಕೂರು, ಸೆ.11 : ಇನ್ನು ಮುಂದೆ 60 ವರ್ಷ ಮೀರಿದ ಎಲ್ಲರಿಗೂ ವೃದ್ಧಾಪ್ಯ ಪಿಂಚಣಿ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಇನ್ನು ಮುಂದೆ 60 ವರ್ಷ ಮೀರಿದವರು ಅರ್ಜಿ ಸಲ್ಲಿಸದೇ ಇದ್ದರೂ ಪಿಂಚಣಿ ಪಡೆಯುವ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 60 ವರ್ಷ ವಯೋಮಿತಿ ಮೀರಿದವರ ದಾಖಲೆಗಳು ನಮ್ಮಲ್ಲಿಯೇ ಲಭ್ಯವಿದ್ದು, 60 ವರ್ಷ ಮೀರಿದವರು ಪಿಂಚಣಿ ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲಾಗುವುದು ಎಂದು ಹೇಳಿದರು.
ಈ ದಿಸೆಯಲ್ಲಿ ಉಡುಪಿ ಹಾಗೂ ಬಳ್ಳಾರಿಯಲ್ಲಿ ಈಗಾಗಲೇ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, 10 ಸಾವಿರ ಮಂದಿಗೆ ಈ ರೀತಿ ಪಿಂಚಣಿ ನೀಡಲಾಗಿದೆ ಎಂದರು.
ನಟಿಯರು 3 ದಿನ ಪೊಲೀಸರ ಕಸ್ಟಡಿಗೆ
ಬೆಂಗಳೂರು, ಸೆ.11 : ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ. ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವೀಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪ್ರಕರಣದಲ್ಲಿ ಇದುವರೆಗೂ ಆಗಿರುವ ತನಿಖೆಯ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.
ದಾಖಲೆಯ 12,545 ಮಂದಿ ಡಿಸ್ಚಾರ್ಜ್
ಬೆಂಗಳೂರು, ಸೆ.11 : ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆಸಿದೆ. ಇದರ ನಡುವೆ ಇಂದು ದಾಖಲೆ 12,545 ಮಂದಿ ಕೊರೋನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 9,464 ಹೊಸ ಪ್ರಕರಣಗಳು ವರದಿಯಾಗಿದ್ದು, 130 ಮಂದಿ ಮೃತಪಟ್ಟಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,40,411 ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಇಂದು 130 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 7,067ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 30 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 130 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 3,426 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸಿಲಿಕಾನ್ ಸಿಟಿಯ ಸೋಂಕಿತರ ಸಂಖ್ಯೆ 1,63,631ಕ್ಕೆ ಏರಿಕೆಯಾಗಿದೆ.