ಮಡಿಕೇರಿ, ಸೆ. 9: ವೀರಾಜಪೇಟೆ ಪಟ್ಟಣ ಪಂಚಾಯಿತಿ ನಿಯಮ ಬಾಹಿರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸ್ಥಳೀಯ ಜನರ ಮೂಲಭೂತ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ವೀರಾಜಪೇಟೆ ನಾಗರಿಕ ಸಮಿತಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖ ಹಾಗೂ ವಕೀಲ ಸೋಮಲೋಕನಾಥ್, ಪ.ಪಂ. ವ್ಯಾಪ್ತಿಯ ಜನ ಅನುಭವಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಈ ಹಿಂದೆ ಮುಖ್ಯಾಧಿಕಾರಿ, ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ನೀಡಲಾಗಿತ್ತು. ಆದರೆ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರೆತ್ತಿಲ್ಲವೆಂದು ಟೀಕಿಸಿದರು.

ಹಸಿಮೀನು-ಮಾಂಸ ಮಾರುಕಟ್ಟೆಯನ್ನು 2020-21ನೇ ಸಾಲಿಗೆ ಹರಾಜು ಮಾಡಿದ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿದರು. ಹರಾಜು ಪ್ರಕ್ರಿಯೆ ಕುರಿತು ಸೂಕ್ತ ತನಿಖೆ ನಡೆಸಿ ನಿಯಮ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮಳೆಯಿಂದ ಹಾನಿಗೊಳಗಾದ ಸರ್ಕಾರಿ ಕಟ್ಟಡಗಳು, ರಸ್ತೆ ಮತ್ತು ಚರಂಡಿ ಕಾಮಗಾರಿಯ ಕ್ರಿಯಾ ಯೋಜನೆಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಸುಮಾರು 10 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ. ಆದರೆ ಬಹಳಷ್ಟು ಕಾಮಗಾರಿಗಳನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೊರಗಿನ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸದೆ ಹೊರಗಿರುವ ಪ್ರದೇಶಗಳ ಅಭಿವೃದ್ಧಿಗೆ ಹಣ ಮೀಸಲಿರಿಸಲಾಗಿದೆ ಎಂದು ಸೋಮಲೋಕನಾಥ್ ಆರೋಪಿಸಿದರು.

ಸಮಿತಿಯ ಸಂಚಾಲಕ ಡಾ. ಇ.ರಾ. ದುರ್ಗಾಪ್ರಸಾದ್ ಮಾತನಾಡಿ, ಪಟ್ಟಣದಲ್ಲಿ ಬುಧವಾರ ಸಂತೆಯ ದಿನ ಬೀದಿ ಬದಿ ವ್ಯಾಪಾರಿಗಳಿಂದ “ಸುಂಕ” ಎಂಬ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಒತ್ತಡ ಹಾಕಿ ತಲಾ ರೂ. 40 ರಿಂದ 50 ವಸೂಲಿ ಮಾಡಲಾಗುತ್ತಿದೆ. ವಸೂಲಿ ಮಾಡಿದ ಈ ಮೊತ್ತಕ್ಕೆ ರಶೀತಿಯನ್ನು ಕೂಡ ನೀಡುತ್ತಿಲ್ಲವೆಂದು ಆರೋಪಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಪ್ರಮುಖರಾದ ಅನಿತಾ ಥೆರೇಸಾ ಹಾಗೂ ನೆಲ್ಲಮಕ್ಕಡ ಗಣಪತಿ ಉಪಸ್ಥಿತರಿದ್ದರು.