ವೀರಾಜಪೇಟೆ, ಸೆ. 9: ಪಕೃತಿ ವಿಕೋಪದಿಂದ ಕಳೆದ ಮೂರು ವರ್ಷದಿಂದ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು ಕಾಫಿ ಮಂಡಳಿ ಬೆಳೆ ಪರಿಹಾರ ವಿಚಾರದಲ್ಲಿ ತಾರತಮ್ಯ ಎಸಗಿದೆ. ಅತಿ ಹೆಚ್ಚು ನಷ್ಟಕ್ಕೊಳಗಾದ ಗ್ರಾಮಗಳನ್ನು ಪರಿಹಾರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ಆರೋಪಿಸಿರುವ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಡೇಟಿರ ಅನಿಲ್ ಅಯ್ಯಪ್ಪ, ಕೈಬಿಟ್ಟಿರುವ ಗ್ರಾಮಗಳನ್ನು ಪರಿಹಾರ ಪಟ್ಟಿಗೆ ಸೇರಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಹೇಳಿದ್ದಾರೆ.

ಪತ್ರಿಕೆಗೆ ಹೇಳಿಕೆ ನೀಡಿರುವ ಅವರು, ಕಾಫಿ ಮಂಡಳಿ ನೀಡಿದ ವರದಿಯಲ್ಲಿ ಕಾವೇರಿ ನದಿ ಪಾತ್ರವಾದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳ್ಳುಮಾಡು ಮತ್ತು ಕುಂಜಿಲಗೇರಿ ಗ್ರಾಮವನ್ನು ಸೇರಿಸಿ ನಾಲ್ಕೇರಿ ಗ್ರಾಮವನ್ನು ಕೈ ಬಿಡಲಾಗಿದೆ. ನಾಲ್ಕೇರಿ ಗ್ರಾಮದಲ್ಲಿ ಬಹುತೇಕ ಕಾಫಿ ತೋಟಗಳು ಹಾಗೂ ಭತ್ತದ ಗದ್ದೆಗಳು, ಅಡಿಕೆ ತೋಟಗಳು ಕಾವೇರಿ ನೀರಿನ ಪ್ರವಾಹದಲ್ಲಿ ಮುಳುಗಡೆಗೊಂಡಿವೆ. ಕಂದಾಯ ಇಲಾಖೆಯನ್ನು ಕೇಳಿದರೆ ಕಾಫಿ ಮಂಡಳಿ ನೀಡಿದ ಸಮೀಕ್ಷಾ ವರದಿಯ ಆಧಾರದ ಮೇಲೆ ಪಟ್ಟಿ ಮಾಡಲಾಗಿದೆ ಎಂದು ಹೇಳುತ್ತಾರೆ. ನಷ್ಟ ಆದ ಗ್ರಾಮಗಳಿಗೆ ಭೇಟಿ ನೀಡದೆ ಕಚೇರಿಯಲ್ಲಿಯೇ ಕುಳಿತು ಸಮೀಕ್ಷೆ ನಡೆಸಿ ವರದಿ ನೀಡಲಾಗಿದೆ ಎಂದು ದೂರಿರುವ ಅನಿಲ್ ಈ ಬಗ್ಗೆ ಮಂಡಳಿಯ ಕೇಂದ್ರ ಕಚೇರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.