ಮಡಿಕೇರಿ, ಸೆ. 9: ತಲಕಾವೇರಿ, ಭಾಗಮಂಡಲ ಹಾಗೂ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಗಳಲ್ಲಿ ಅಮ್ಮ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕೆಂದು ಹಕ್ಕು ಮಂಡಿಸಲಾಗಿದೆಯೇ ಹೊರತು ಇತರರ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಮಾಡುತ್ತಿಲ್ಲವೆಂದು ಅಖಿಲ ಅಮ್ಮ ಕೊಡವ ಸಮಾಜ ಸ್ಪಷ್ಟಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಉಪಾಧ್ಯಕ್ಷ ಪಾಡಿಯಮ್ಮಂಡ ಮುರುಳಿ ಕರುಂಬಮ್ಮಯ್ಯ, ಕೊಡಗಿನ ಕುಲದೇವಿ ಕಾವೇರಮ್ಮನ ಸೇವೆಯಲ್ಲಿ ಮೂಲನಿವಾಸಿಗಳಾದ ಅಮ್ಮ ಕೊಡವರನ್ನು ಭಾಗಿಯಾಗಿಸಬೇಕೆನ್ನುವ ಬಗ್ಗೆ ಈ ಹಿಂದೆ ಅನೇಕ ಬಾರಿ ಹೂ ಪ್ರಶ್ನೆಯನ್ನು ಇಟ್ಟಾಗ ತಿಳಿದು ಬಂದಿದೆ. ಇದಕ್ಕೆ ಪೂರಕವಾಗಿ 1998-99 ರ ಅಷ್ಟಮಂಗಲ ಪ್ರಶ್ನೆಯ ಪುಟ ಸಂಖ್ಯೆ 22 ರಲ್ಲಿ ಉಲ್ಲೇಖಿಸಿರುವಂತೆ ತಲಕಾವೇರಿಯಲ್ಲಿ ಭಂಡಾರ ತೆಗೆಯುವಾಗಲೂ ಮತ್ತು ಪ್ರಾರ್ಥಿಸುವಾಗಲೂ ಅಮ್ಮ ಕೊಡವರು ಖಡ್ಡಾಯವಾಗಿ ಹಾಜರಿರಬೇಕು ಎಂದು ತಿಳಿಸಲಾಗಿದೆ.

ಕೊಡಗಿನ ಅಭ್ಯುದಯಕ್ಕಾಗಿ ಅಮ್ಮಕೊಡವ ಜನಾಂಗಕ್ಕೆ ಕಾವೇರಿ ಕ್ಷೇತ್ರದಲ್ಲಿ ಪೂಜಾಕಾರ್ಯ ಮತ್ತು ತಕ್ಕಮುಖ್ಯಸ್ಥರ ಸ್ಥಾನಮಾನ ಸಹಿತ ಖಾಯಂ ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ನಮ್ಮ ಹಕ್ಕನ್ನು ನಾವು ಕೇಳಿದ್ದೇವೆ, ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕ ವೃಂದ ನಡೆಸುತ್ತಿರುವ ಸರದಿ ಪೂಜಾ ಕ್ರಮಕ್ಕೆ ನಮ್ಮ ಆಕ್ಷೇಪವಿಲ್ಲ. ಅಮ್ಮ ಕೊಡವರಿಗೆ ಪ್ರಾತಿನಿಧ್ಯ ನೀಡಬೇಕು ಎನ್ನುವುದು ಮನವಿಯಷ್ಟೇ ಎಂದು ಸ್ಪಷ್ಟಪಡಿಸಿದರು.

ಅಮ್ಮ ಕೊಡವ ಜನಾಂಗ ಎಂದಿಗೂ ದ್ವೇಷ ಬಿತ್ತುವ, ಜಾತಿ ವೈಷಮ್ಯ ಮಾಡುವ, ಸಮಾಜದ ಶಾಂತಿ ಕದಡುವ ಕೆಲಸ ಮಾಡುವುದಿಲ್ಲ. ಗೌಡ, ಬ್ರಾಹ್ಮಣರಾದಿಯಾಗಿ ಎಲ್ಲಾ ಮೂಲ ನಿವಾಸಿಗಳನ್ನು, ಜನಾಂಗದವರನ್ನು ಗೌರವಿಸುವುದಲ್ಲದೆ, ಎಲ್ಲರೊಂದಿಗೆ ಒಗ್ಗಟ್ಟಿನಿಂದ ಬದುಕು ಸಾಗಿಸುತ್ತಿದೆ. ಅಮ್ಮಕೊಡವರು ಅತೀ ಕಡಿಮೆ ಸಂಖ್ಯೆಯಲ್ಲಿರುವುದರಿಂದ ಅನೇಕ ಅವಕಾಶಗಳಿಂದÀ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೀಗ ದೇವಾಲಯಗಳಲ್ಲಿ ಪ್ರಾತಿನಿಧ್ಯಕ್ಕಾಗಿ ಮುಜರಾಯಿ ಇಲಾಖೆಯ ನಿಯಮದಡಿಯಲ್ಲಿ ಬೇಡಿಕೆ ಇಡಲಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲವೆಂದು ಮುರುಳಿ ಸ್ಪಷ್ಟಪಡಿಸಿದರು.

ಸಮಾಜದ ಗೌರವ ಅಧ್ಯಕ್ಷ ಬಾನಂಡ ಎನ್. ಪ್ರಥ್ಯು ಮಾತನಾಡಿ, ನಾವು ಯಾರನ್ನೂ ನೋಯಿಸಿಲ್ಲ, ಇನ್ನು ಮುಂದೆಯೂ ನೋಯಿಸುವುದಿಲ್ಲ. ಆದರೆ ಯಾರೂ ಕೂಡ ಇತಿಹಾಸ ತಿಳಿಯದೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಬಾರದು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಎ.ಆರ್. ವೇಣುಗೋಪಾಲ್, ಕಾರ್ಯದರ್ಶಿ ಪುತ್ತಾಮನೆ ಅನಿಲ್ ಪ್ರಸಾದ್ ಹಾಗೂ ಮಾಜಿ ಉಪಾಧ್ಯಕ್ಷೆ ಉಮಾಪ್ರಭು ಉಪಸ್ಥಿತರಿದ್ದರು.