ಶ್ರೀಮಂಗಲ, ಸೆ. 9: ಕೊಡಗಿನಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಆಸ್ತಿಪಾಸ್ತಿ ಹಾಗೂ ಬೆಳೆ ನಷ್ಟದ ಬಗ್ಗೆ ಅಧ್ಯಯನ ಮಾಡಲು ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ತಂಡವನ್ನು ಭೇಟಿ ಮಾಡಿದ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ನಿಯೋಗ ಈಗ ಇರುವ ಎನ್.ಡಿ.ಆರ್.ಎಫ್‍ನ ಮಾನದಂಡ ದಂತೆ ಕಾಫಿ ಬೆಳೆ ಹಾನಿ ಪರಿಹಾರ ಪ್ರತಿ ಹೆಕ್ಟೇರ್‍ಗೆ ರೂ. 18 ಸಾವಿರ ಇರುವುದನ್ನು 50 ಸಾವಿರಕ್ಕೆ ಪರಿಷ್ಕರಣೆ ಮಾಡಬೇಕು ಹಾಗೂ ಈಗ 2 ಹೆಕ್ಟೇರ್‍ವರೆಗೆ ಕೊಡುತ್ತಿರುವ ಪರಿಹಾರವನ್ನು ಕನಿಷ್ಟ 5 ಹೆಕ್ಟರ್‍ವರೆಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿತು.

ಈ ಮನವಿಯನ್ನು ಪರಿಶೀಲಿಸಿ ಸರಕಾರಕ್ಕೆ ಸೂಕ್ತ ರೀತಿಯಲ್ಲಿ ವರದಿ ಸಲ್ಲಿಸುವುದಾಗಿ ಕೇಂದ್ರ ಅಧ್ಯಯನ ತಂಡದ ಪ್ರಮುಖರು ನಿಯೋಗಕ್ಕೆ ಭರವಸೆ ನೀಡಿದರು.

ಸರಕಾರದಿಂದ ಕಾಫಿ ಬೆಳೆಗೆ ವಿಮೆ ಜಾರಿಗೆ ತರಬೇಕು. ಉತ್ಪಾದನಾ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ರಸಗೊಬ್ಬರ, ಕೀಟ ನಾಶಕಗಳಿಗೆ ಸಹಾಯಧನ ನೀಡಬೇಕು.

ಕಳೆದ 3 ವರ್ಷಗಳಿಂದ ಸತತ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಬೆಳೆಗಾರ ಸಮುದಾಯ ಕಾಫಿ, ಕಾಳುಮೆಣಸು, ಅಡಿಕೆ, ಏಲಕ್ಕಿ, ಭತ್ತ ಇತ್ಯಾದಿ ಬೆಳೆಗೆ ದೊಡ್ಡ ನಷ್ಟ ಸಂಭವಿಸಿದೆ. ಇದರಿಂದ ಬ್ಯಾಂಕುಗಳಲ್ಲಿ ಪಡೆದ ಸಾಲ ಕಟ್ಟಲಾಗದೆ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯ ಸಣ್ಣ ಬೆಳೆಗಾರರ ನಿರ್ದಿಷ್ಟ ಪ್ರಮಾಣದ ಸಾಲಮನ್ನಾ ಮಾಡುವುದು ಮತ್ತು ದೊಡ್ಡ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು.

ಸತತ ಪ್ರಾಕೃತಿಕ ವಿಕೋಪದಿಂದ ಬ್ಯಾಂಕುಗಳಲ್ಲಿ ಸಾಲಕಟ್ಟಲಾಗದೆ ಬೆಳೆಗಾರರ ಖಾತೆ ಎನ್.ಪಿ.ಎ ಆಗಿದೆ. ಇದರಿಂದ ಹೊಸ ಸಾಲ ಲಭ್ಯ ಆಗುತ್ತಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲಾ ಬೆಳೆಗಾರರಿಗೆ ಸಿಬಿಲ್ ವಿನಾಯಿತಿ ನೀಡಬೇಕು.

ಸ್ವಸಹಾಯ ಸಂಘದ ಮೂಲಕ ಸ್ವ ಉದ್ಯೋಗ, ಕಾಫಿ ಹಾಗೂ ಕಾಳುಮೆಣಸು ಸಂಸ್ಕರಣೆ ಮಾಡಿ ಮಾರಾಟ ಮಾಡಲು, ಕಾಫಿ ಬೆಳೆಗೆ ಉತ್ತೇಜನ ನೀಡಲು ವಿಶೇಷ ಪ್ಯಾಕೇಜ್ ಸ್ಥಾಪಿಸಬೇಕು. ಕಾಫಿ ಮಂಡಳಿಯಿಂದ ಕಾಫಿ ಉತ್ಪಾದನೆಗೆ ಪೆÇ್ರೀತ್ಸಾಹ ನೀಡುವ ಸಹಾಯಧನದ ಯೋಜನೆಗಳು ಸ್ಥಗಿತವಾಗಿದ್ದು, ಶೇ. 98.5ರಷ್ಟು ಸಣ್ಣ ಬೆಳೆಗಾರರೇ ಇರುವ ಜಿಲ್ಲೆಯ ಕಾಫಿ ಬೆಳೆಗಾರರ ಸುಧಾರಣೆಗೆ ಮತ್ತು ಉತ್ಪಾದನೆ ಹೆಚ್ಚಿಸಲು ಈ ಯೋಜನೆ ಯನ್ನು ಮುಂದುವರಿಸಬೇಕು, ಕಾಫಿ ಪ್ಯಾಕೇಜ್ ಘೋಷಿಸಿಬೇಕು.

ಸತತ ಅತಿವೃಷ್ಟಿಗೆ ತುತ್ತಾಗುವ ಕೊಡಗಿನ ನದಿಗಳು ದಕ್ಷಿಣ ಭಾರತದ 4 ರಾಜ್ಯಗಳಿಗೆ ಕುಡಿಯಲು ಹಾಗೂ ಕೃಷಿಗೆ ನೀರನ್ನು ಒದಗಿಸಿಕೊಡುತ್ತಿವೆ. ಆದರೆ ಕೊಡಗು ಜಿಲ್ಲೆ ನಿರಂತರ ನಷ್ಟ ಅನುಭವಿಸುತ್ತಿದೆ. ಆದ್ದರಿಂದ ಈ ನಾಲ್ಕು ರಾಜ್ಯದ ನದಿ ನೀರಿನ ಫಲಾನುಭವಿಗಳಿಂದ ಸೆಸ್ ಮೂಲಕ ರಾಜಧನ ಸಂಗ್ರಹಿಸಿ ಕೊಡಗಿನ ಬೆಳೆಗಾರರಿಗೆ ನೆರವು ನೀಡಬೇಕೆಂದು ಗಮನ ಸೆಳೆಯಲಾಯಿತು. ಮನವಿಯನ್ನು ಪರಿಶೀಲಿಸಿ ಸರಕಾರಕ್ಕೆ ಸೂಕ್ತ ರೀತಿಯಲ್ಲಿ ವರದಿ ಸಲ್ಲಿಸುವುದಾಗಿ ಅಧ್ಯಯನ ತಂಡ ಭರವಸೆ ನೀಡಿತು.

ಜಿಲ್ಲಾಧಿಕಾರಿಗಳಿಗೆ ಮನವಿ: ಇದೇ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ಬೆಳೆ ನಷ್ಟ ಪರಿಹಾರ ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಸೆಪ್ಟೆಂಬರ್ 10ರ ಅಂತಿಮ ದಿನವನ್ನು ವಿಸ್ತರಣೆ ಮಾಡಲು ಕೋರಲಾಯಿತು.

ಈ ಸಂದರ್ಭ ಒಕ್ಕೂಟದ ನಿಯೋಗದ ಅಧ್ಯಕ್ಷರಾದ ಕೈಬಿಲೀರ ಹರೀಶ್‍ಅಪ್ಪಯ್ಯ, ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ, ಪ್ರ. ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ ಇದ್ದರು. ಸಿ.ಇ.ಓ. ಭಂವರ್ ಸಿಂಗ್ ಮೀನಾ, ಎಸಿ.ಪಿ. ಕ್ಷಮಾ ಮಿಶ್ರ ಹಾಜರಿದ್ದರು.