ಕೂಡಿಗೆ, ಸೆ. 8: ಕೂಡಿಗೆಯಲ್ಲಿ ಸೆಸ್ಕ್ ವೃತ್ತ ಶಾಖಾ ಕಚೇರಿಯನ್ನು ತೆರೆಯಲು ಗ್ರಾಮಸ್ಥರ ಒತ್ತಾಯದ ಮೇರೆಗೆ ಕಳೆದ ಐದು ವರ್ಷಗಳ ಹಿಂದೆ ಸ್ಥಳ ಗುರುತಿಸಲು ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಸೂಚನೆ ನೀಡಿದ್ದರು. ಅದರಂತೆ ಇಲಾಖೆಯ ಇಂಜಿನಿಯರ್‍ಗಳ ತಂಡ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿ ಖಾಲಿ ಇರುವ ಕಟ್ಟಡದಲ್ಲಿ ಶಾಖಾ ಕಚೇರಿಯನ್ನು ತರೆಯಲು ಪರಿಶೀಲನೆ ನಡೆಸಿತು.

ಕುಶಾಲನಗರ ಕೇಂದ್ರ ಸ್ಥಳದಲ್ಲಿ ಇರುವ ಶಾಖಾ ಕೇಂದ್ರವನ್ನು ಈ ಭಾಗಗಳಲ್ಲಿ ತೆರೆದರೆ ಈ ವ್ಯಾಪ್ತಿಯ 5 ಗ್ರಾಮ ಪಂಚಾಯತಿಗಳಾದ ಕೂಡುಮಂಗಳೂರು ಕೂಡಿಗೆ ಹೆಬ್ಬಾಲೆ ತೊರೆನೂರು, ಶಿರಂಗಾಲ ಸೇರಿದಂತೆ ಅನೇಕ ಗ್ರಾಮಗಳಿಗೆ ವಿದ್ಯುತ್ ಸಮಸ್ಯೆ ಬಗೆಹರಿಸಲು ಅನುಕೂಲವಾಗಲಿದೆ. ಅಲ್ಲದೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿ ಇರುವ 30ಕ್ಕೂ ಹೆಚ್ಚು ಕಾಫಿ ಘಟಕಗಳು ಮತ್ತು ಇತರ ಕೈಗಾರಿಕಾ ಘಟಕಗಳಿಗೆ ಸಮರ್ಪಕವಾಗಿ ವಿದ್ಯುತ್ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ.

ಗ್ರಾಮಾಂತರ ಪ್ರದೇಶದಲ್ಲಿ ಶಾಖಾ ಕಚೇರಿಯನ್ನು ತೆರೆಯಲು ಎಲ್ಲಾ ಗ್ರಾಮ ಸಭೆಗಳಲ್ಲಿ ಅನೇಕ ಬಾರಿ ಚರ್ಚೆಗಳು ನಡೆದಿದ್ದವು. ವಿಭಾಗದ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಇಲಾಖೆಯ ಅಧಿಕಾರಿ ಗಳ ಪ್ರಯತ್ನದಿಂದ ಶಾಖಾ ಕಚೇರಿಯನ್ನು ಆರಂಭಿಸಲು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕುಶಾಲನಗರ ಸೆಸ್ಕ್ ಕಿರಿಯ ಇಂಜಿನಿಯರ್ ಲವಕುಮಾರ್ ಹಿರಿಯ ಸಿಬ್ಬಂದಿ ಕೃಷ್ಣೇಗೌಡ, ಗ್ರಾಮ ಪ್ರಮುಖರಾದ ಆರ್. ಕೃಷ್ಣರಾಜು, ಪ್ರಕಾಶ್, ಆನಂದ, ರವಿಕುಮಾರ್ ಸೇರಿದಂತೆ ಹಲವು ಮಂದಿ ಇದ್ದರು.