ಕುಶಾಲನಗರ, ಸೆ. 8: ವಿಶ್ವವಿಖ್ಯಾತ ಪ್ರವಾಸಿ ತಾಣವೆಂದು ಖ್ಯಾತಿ ಪಡೆದಿರುವ ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೊಂದಿದ ಬೆನ್ನಲ್ಲೇ ಕೇಂದ್ರದಲ್ಲಿ ನಡೆಯುತ್ತಿದ್ದ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಸ್ಥಬ್ಧಗೊಳ್ಳುವುದರೊಂದಿಗೆ ನೂರಾರು ಕುಟುಂಬಗಳು ತಮ್ಮ ದಿನನಿತ್ಯದ ಜೀವನಕ್ಕೆ ಪರದಾಡುವಂತಹ ಪರಿಸ್ಥಿತಿ ಸೃಷ್ಠಿಯಾಗಿದೆ. ದಿನಬೆಳಗಾದರೆ ನೂರಾರು ಸಂಖ್ಯೆಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಸಾಕಾನೆ ಶಿಬಿರದ ಆನೆಗಳು ಇನ್ನೊಂದೆಡೆ ಕಾವೇರಿ ನದಿಯಲ್ಲಿ ನಡೆಯುತ್ತಿದ್ದ ರ್ಯಾಫ್ಟಿಂಗ್ ಕ್ರೀಡಾ ಚಟುವಟಿಕೆಗಳು ಸೇರಿದಂತೆ ಎಲ್ಲಾ ಚಟುವಟಿಕೆಗಳು ರದ್ದುಗೊಂಡು ಪ್ರವಾಸಿ ತಾಣ ಬಿಕೋ ಎನ್ನುವಂತಾಗಿದೆ.
ಇದರ ಪರಿಣಾಮವಾಗಿ ರ್ಯಾಫ್ಟಿಂಗ್ ಮಾಲೀಕರು ಸಂಕಷ್ಟಕ್ಕೆ ಒಳಗಾಗುವ ನಡುವೆ ರ್ಯಾಫ್ಟಿಂಗ್ ಗೈಡ್‍ಗಳು, ಸಹಾಯಕರು ಸೇರಿದಂತೆ ಸುಮಾರು 150 ಕ್ಕೂ ಅಧಿಕ ಮಂದಿ ಕಳೆದ 6 ತಿಂಗಳಿನಿಂದ ಯಾವುದೇ ಕೆಲಸವಿಲ್ಲದೆ ಪರ್ಯಾಯ ಕೆಲಸದತ್ತ ಮುಖ ಮಾಡುವಂತಾಗಿದೆ. ಆದರೆ ಲಾಕ್‍ಡೌನ್ ಹಿನ್ನೆಲೆ ಅದೂ ಕೂಡ ಸಾಧ್ಯವಾಗದೆ ತಮ್ಮ ಕುಟುಂಬ ಸಾಗಿಸುವುದು ಕಷ್ಟಸಾಧ್ಯ ಎನಿಸಿದೆ.
ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗೆ ಸಿಲುಕುತ್ತಿದ್ದ ದುಬಾರೆ ರ್ಯಾಫ್ಟಿಂಗ್ ಕ್ರೀಡೆ ಕಳೆದ ಎರಡು ವರ್ಷಗಳ ಹಿಂದೆಯ ಘಟನೆಯೊಂದರ ಹಿನ್ನೆಲೆ ಜಿಲ್ಲಾಡಳಿತ ರ್ಯಾಫ್ಟಿಂಗ್ ಚಟುವಟಿಕೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ತದನಂತರ ಜಿಲ್ಲಾಡಳಿತ ವಿಶೇಷ ಸಮಿತಿಯೊಂದನ್ನು ರಚಿಸಿ ನಿಯಮಾನುಸಾರ ರ್ಯಾಫ್ಟಿಂಗ್‍ಗೆ ಅನುಮತಿ ನೀಡಿ ಅಲ್ಪಕಾಲ ಚಟುವಟಿಕೆಗಳು ಗರಿಗೆದರುತ್ತಿದ್ದಂತೆ ಕೊರೊನಾ ಈ ಚಟುವಟಿಕೆಗೆ ಅಡ್ಡಿಯುಂಟಾಯಿತು. ಈ ಹಿಂದೆ ನಿತ್ಯ ಸಾವಿರಕ್ಕೂ ಅಧಿಕ ಪ್ರವಾಸಿಗರು ಸಾಕಾನೆ ಶಿಬಿರಕ್ಕೆ ಬಂದು ಆನೆಗಳ ಚಟುವಟಿಕೆಗಳನ್ನು ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದರು. ಇದೀಗ ಎಲ್ಲಾ ಚಟುವಟಿಕೆಗಳು ರದ್ದುಗೊಂಡಿದ್ದು ಮುಂದಿನ ಆದೇಶದ ತನಕ ಯಾವುದೇ ಚಟುವಟಿಕೆಗಳು ನಡೆಯುವಂತಿಲ್ಲ ಎನ್ನುತ್ತಾರೆ ಸಾಕಾನೆ ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್.
ಇದಲ್ಲದೆ ಹೊಟೇಲ್ ಇನ್ನಿತರ ವಾಣಿಜ್ಯ ಚಟುವಟಿಕೆ ಕೇಂದ್ರಗಳ ಉದ್ಯಮಿಗಳು ಕಾರ್ಮಿಕರು ಕೂಡ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕಾದ ಪ್ರಮೇಯ ಉಂಟಾಗಿ ಬಹುತೇಕ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಇದೀಗ ಮತ್ತೆ ಇದೇ ಉದ್ಯಮವನ್ನು ಪುನರಾರಂಭಿಸಲು ಕೂಡ ಹಲವಾರು ತೊಡಕುಗಳು ಉಂಟಾಗಿವೆ ಎನ್ನುತ್ತಾರೆ ದುಬಾರೆ ಹೊಟೇಲ್ ಉದ್ಯಮಿ ಕೆ.ಎಸ್. ರತೀಶ್.
ತಮ್ಮ ಊರಿಗೆ ಮರಳಿರುವ ಕಾರ್ಮಿಕರು ಮತ್ತೆ ಹಿಂತಿರುಗುವುದು ಸಂಶಯ ಎನ್ನುವ ರತೀಶ್ ಪ್ರಸಕ್ತ ಪ್ರವಾಸಿಗರು ಕೂಡ ಹಿಂದಿನಂತೆ ಬರುವುದು ಬಹುತೇಕ ಅಸಾಧ್ಯ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ದುಬಾರಿ ಮೌಲ್ಯದ ರ್ಯಾಫ್ಟ್ ಬೋಟ್‍ಗಳು ಶಿಥಿಲವಾಗುತ್ತಿದ್ದು ಇದನ್ನು ಪುನರ್ ಬಳಕೆ ಮಾಡುವುದು ಕೂಡ ಸಾಧ್ಯವಿಲ್ಲ ಎನ್ನುವುದು ಬಾಳುಗೋಡು ವ್ಯಾಪ್ತಿಯ ರ್ಯಾಫ್ಟಿಂಗ್ ಮಾಲೀಕರ ಅಳಲಾಗಿದೆ. ಬದಲೀ ವ್ಯವಸ್ಥೆಗೆಂದು ಅಂಗಡಿಯೊಂದನ್ನು ಪ್ರಾರಂಭಿಸಿದ್ದು ಇದರಲ್ಲಿ ಕೂಡ ಯಾವುದೇ ವಹಿವಾಟು ಕಾಣುತ್ತಿಲ್ಲ ಎನ್ನುವುದು ಅವರ ಮಾತು. ಕೊರೊನಾ ಲಾಕ್‍ಡೌನ್ ಬೆನ್ನಲ್ಲೇ ಮತ್ತೆ ಕಾವೇರಿ ಅಪಾಯದ ಮಟ್ಟ ಮೀರಿ ಹರಿದ ಹಿನ್ನೆಲೆ ನದಿ ತಟದಲ್ಲಿದ್ದ ಅಂಗಡಿ ಮುಂಗಟ್ಟುಗಳು ಕೂಡ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡ ದೃಶ್ಯ ಗೋಚರಿಸಿದೆ. - ಚಂದ್ರಮೋಹನ್