ವೀರಾಜಪೇಟೆ, ಸೆ.8: ವೀರಾಜಪೇಟೆ ಸಿದ್ದಾಪುರ ರಸ್ತೆಯಲ್ಲಿ ಡೆಂಟಲ್ ಕಾಲೇಜಿಗೆ ಹೋಗುವ ಪ್ರವೇಶ ದ್ವಾರ ಬಳಿ ಅಕ್ರಮ ಗಾಂಜಾ ದಂಧೆ ನಡೆಸುತ್ತಿದ್ದ ಐದು ಮಂದಿ ಹಾಗೂ ರೂ1,10,000 ಮೌಲ್ಯದ 3.400 ಕೆ.ಜಿ. ಅಕ್ರಮ ಗಾಂಜಾ, ಒಂದು ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, 5 ಮಂದಿ ಆರೋಪಿಗಳನ್ನು ಮಡಿಕೇರಿಯ ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಮೇರೆ ಎಲ್ಲರನ್ನು 15 ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಇಂದು ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಇಲ್ಲಿನ ಸುಂಕದಕಟ್ಟೆ ಬಳಿಯಲ್ಲಿ ಅಕ್ರಮವಾಗಿ ಗಾಂಜಾ ದಂಧೆಯಲ್ಲಿ ತೊಡಗಿದ್ದ ಫಾರೂಕ್, ಮುದಾಶೀರ್, ರಫೀಕ್, ಮನು ಹಾಗೂ ಮಹೇಶ್ ಎಂಬ ಐದು ಮಂದಿ ಗುಂಪಿನ ಮೇಲೆ ದಾಳಿ ನಡೆಸಿದ ಪೊಲೀಸರು ಅದೇ ಸ್ಥಳದಲ್ಲಿ ಮಾರುತಿ 800 (ಕೆ.ಎ.36- 0733) ಕಾರಿನಲ್ಲಿ ದಾಸ್ತಾನಿಟ್ಟಿದ್ದ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.ಆರೋಪಿಗಳ ಬಳಿ ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ತಲಾ 50 ಗ್ರಾಮ್ ನಿಂದ 100 ಗ್ರಾಮ್ ವರೆಗಿನ ಪ್ಯಾಕೇಟ್‍ಗಳಿದ್ದು, ಈ ಗಾಂಜಾ ಪ್ಯಾಕೇಟ್‍ಗಳನ್ನು ಸಗಟು ಮಾರಾಟಕ್ಕಾಗಿ ಇಟ್ಟುಕೊಂಡಿದ್ದು ಇದನ್ನು ಚಿಲ್ಲರೆ ಖರೀದಿದಾರರು ಇನ್ನು ಸಣ್ಣ ಪ್ಯಾಕೇಟ್‍ಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದರೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ದಾಳಿಯಲ್ಲಿ ಡಿ.ವೈಎಸ್.ಪಿ ಸಿ.ಟಿ.ಜಯಕುಮಾರ್, ಸಿಪಿ.ಐ. ಕ್ಯಾತೆಗೌಡ, ನಗರ ಎಚ್.ಎಸ್. ಬೋಜಪ್ಪ, ಸಿಬ್ಬಂದಿಗಳಾದ ಗಿರೀಶ್, ಸಂತೋಷ್, ಮುಸ್ತಾಫ ಹಾಗೂ ಮುನೀರ್ ಭಾಗವಹಿಸಿದ್ದರು.