ಮಡಿಕೇರಿ, ಸೆ. 8: ಆಗಸ್ಟ್‍ನಲ್ಲಿ ಸುರಿದ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಸಂಭವಿಸಿದ ಹಾನಿಯ ಬಗ್ಗೆ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಇಂದು ಕೇಂದ್ರ ಸರ್ಕಾರದಿಂದ ನಿಯೋಜಿಸಲ್ಪಟ್ಟ ಅಧಿಕಾರಿಗಳ ತಂಡ ಕೊಡಗಿಗೆ ಭೇಟಿ ನೀಡಿತ್ತು.ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರತಾಪ್ ನೇತೃತ್ವದಲ್ಲಿ ಭಾರತ ಸರ್ಕಾರದ ವಿತ್ತ ಸಚಿವಾಲಯದ ನಿರ್ದೇಶಕ ಡಾ. ಭಾರ್ತೇಂದು ಕುಮಾರ್ ಸಿಂಗ್ ಹಾಗೂ ಭಾರತ ಸರ್ಕಾರದ ಕೆ.ಎಸ್.ಡಿ.ಎಂ.ಎ. ಆಯುಕ್ತರಾದ ಮನೋಜ್ ರಂಜನ್ ಇವರುಗಳನ್ನು ಒಳಗೊಂಡ ತಂಡ ಇಂದು ಬೆಳಿಗ್ಗೆ ಕೂಡಿಗೆಯ ಸೈನಿಕ ಶಾಲೆಯ ಹೆಲಿಪ್ಯಾಡ್‍ಗೆ ಬಂದಿಳಿಯಿತು. ಬಳಿಕ ಸೈನಿಕ ಶಾಲೆಯ ಸಭಾಂಗಣದಲ್ಲಿ ಕೊಡಗು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆ ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿತು. ನಂತರ ಮಡಿಕೇರಿ ಸಮೀಪದ ಕಡಗದಾಳುವಿಗೆ ತೆರಳಿ ಹಾನಿ ಬಗ್ಗೆ ಪರಿಶೀಲಿಸಿತು. ಬಳಿಕ ಭಾಗಮಂಡಲ,ಕೋರಂಗಾಲ ಹಾಗೂ ತಲಕಾವೇರಿಯಲ್ಲಿ ಅರ್ಚಕ ಕುಟುಂಬ ಭೂ ಸಮಾಧಿಯಾದ ಸ್ಥಳ ಮತ್ತಿತರೆಡೆಗೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.ಭಾಗಮಂಡಲದ ಕೋರಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಯಿಂದ ಸಂಪೂರ್ಣವಾಗಿ ಹಾನಿಯಾಗಿರುವ ಶಾಲಾ ಕಟ್ಟಡವನ್ನು ಕೇಂದ್ರ ತಂಡದ ಅಧಿಕಾರಿಗಳು ಪರಿಶೀಲಿಸಿದರು. ಕೋರಂಗಾಲದ ರಸ್ತೆ ಹಾನಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.ಜೊತೆಗೆ ಬಲ್ಲಮಾವಟಿ ಗ್ರಾ.ಪಂ.ವ್ಯಾಪ್ತಿಯ ದೊಡ್ಡ ಪುಲಿಕೋಟುವಿನ ಹಾನಿಯಾದ ಅಂಗನವಾಡಿ ಕಟ್ಟಡವನ್ನು ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಣೆ ಮಾಡಿದರು. ಇದರೊಂದಿಗೆ ಚೇರಂಬಾಣೆಯ ಬೇಂಗೂರುವಿನಲ್ಲಿ ಉಂಟಾಗಿರು ಕಾಫಿ ಮತ್ತು ಕಾಳುಮೆಣಸು ಹಾನಿಯ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಈ ವೇಳೆ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಪ್ರಭಾಕರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ

(ಮೊದಲ ಪುಟದಿಂದ) ಉಂಟಾದ ಹಾನಿಯ ಬಗ್ಗೆ ಕೇಂದ್ರ ತಂಡದ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಒದಗಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಡಿ.ಎಂ.ಎ. ಆಯುಕ್ತ ಮನೋಜ್‍ರಂಜನ್, ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಒಟ್ಟು 2 ತಂಡಗಳು ಕರ್ನಾಟಕಕ್ಕೆ ಬಂದಿದ್ದು, ಈ ಪೈಕಿ ಒಂದು ತಂಡ ಕೊಡಗಿಗೆ ಬಂದಿದೆ. ಈಗಾಗಲೇ ಇಲ್ಲಿನ ಮಳೆಹಾನಿಯ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ತಾ. 9 ರಂದು (ಇಂದು) ರಾಜ್ಯ ಕಂದಾಯ ಸಚಿವರೊಂದಿಗೆ ಜಿಲ್ಲೆಯಲ್ಲಿನ ಹಾನಿಯ ಕುರಿತಾದ ಮಾಹಿತಿಯೊಂದಿಗೆ ಚರ್ಚಿಸಿ ನಂತರ ಕೇಂದ್ರ ಸರ್ಕಾರಕ್ಕೆ ವರದಿ ನೀಡುವದಾಗಿ ಹೇಳಿದರು.

ಕೂಡಿಗೆ ವರದಿ

ಸೈನಿಕ ಶಾಲೆಯ ಸಭಾಂಗಣದಲ್ಲಿ ಕೊಡಗು ಜಿಲ್ಲಾಡಳಿತದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಕೇಂದ್ರದ ಅಧಿಕಾರಿಗಳ ತಂಡಕ್ಕೆ 2020ರಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ಒಟ್ಟು 598.56 ಕೋಟಿ ರೂ. ಮೌಲ್ಯದ ಮೂಲಸೌಕರ್ಯಗಳು ಹಾನಿಗೊಂಡಿವೆ. 41026 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ಒದಗಿಸಿದರು.

2020 ರ ಜನವರಿಯಿಂದ ಇಲ್ಲಿ ತನಕ ಜಿಲ್ಲೆಯಲ್ಲಿ ಒಟ್ಟು 1926 ಮಿಮೀ ಪ್ರಮಾಣದಲ್ಲಿ ಮಳೆಯಾಗಿದೆ. ಆಗಸ್ಟ್ 6 ರಂದು ಅತಿ ಹೆಚ್ಚು 454 ಮಿಮೀ ಪ್ರಮಾಣದ ಮಳೆ ಸುರಿದಿದೆ. ಅತಿವೃಷ್ಟಿ ಹಾಗೂ ಭೂಕುಸಿತದಿಂದ 115 ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ. ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ ತಾಲೂಕುಗಳು ಸೇರಿದಂತೆ 346 ಮನೆಗಳಿಗೆ ಹಾನಿಯಾಗಿದೆ. 2600 ವಿದ್ಯುತ್ ಕಂಬಗಳು ನೆಲಕಚ್ಚಿದ್ದು ಚಾಮುಂಡೇಶ್ವರಿ ವಿದ್ಯುತ್ ನಿಗಮಕ್ಕೆ ರೂ. 3.96 ಕೋಟಿ, 117 ಶಾಲೆಗಳು ಹಾನಿಗೊಂಡು ರೂ. 3.65ಕೋಟಿ, ಲೋಕೋಪಯೋಗಿ ಇಲಾಖೆಗೆ ರೂ. 103.98 ಕೋಟಿ, ಪಿಆರ್‍ಇಡಿಗೆ ರೂ. 312.53 ಕೋಟಿ, ಸಣ್ಣ ನೀರಾವರಿ ಇಲಾಖೆಗೆ ರೂ. 27.90 ಕೋಟಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ರೂ. 127.51ಕೋಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರೂ. 8 ಕೋಟಿ, 54 ಅಂಗನವಾಡಿಗಳಿಗೆ ರೂ. 1.08 ಕೋಟಿ, ಆರೋಗ್ಯ ಇಲಾಖೆಗೆ ರೂ. 54ಲಕ್ಷ, ಕಾವೇರಿ ನೀರಾವರಿ ನಿಗಮಕ್ಕೆ ರೂ. 4.25 ಕೋಟಿ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡಂತೆ 598.56 ಕೋಟಿ ರೂಗಳ ಹಾನಿ ಉಂಟಾಗಿದೆ ಎಂದು ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು. ಪಿಪಿಟಿ ಮೂಲಕ ಜಿಲ್ಲೆಯಲ್ಲಿ ಉಂಟಾದ ಭೂಕುಸಿತ, ಕೈಗೊಂಡ ರಕ್ಷಣಾ ಕಾರ್ಯ, ಹಾನಿಯ ಬಗ್ಗೆ ವಿವರಿಸಲಾಯಿತು.

ಕಳೆದ ಮೂರು ವರ್ಷಗಳ ಕಾಲ ಅತಿವೃಷ್ಟಿ ಹಾಗೂ ಭೂಕುಸಿತದಿಂದ ರೂ. 2331.56 ಕೋಟಿ ಮೌಲ್ಯದ ಮೂಲಸೌಕರ್ಯಗಳು ಹಾನಿಗೊಂಡಿದ್ದು ಇವುಗಳ ಶಾಶ್ವತ ಮರುಸ್ಥಾಪನೆ, ದುರ್ಬಲ ಪ್ರದೇಶದ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವುದು, ನದಿ, ತೊರೆಗಳಲ್ಲಿ ತುಂಬಿರುವ ಹೂಳು ತೆರವುಗೊಳಿಸುವುದು, ಅಪಾಯಕಾರಿ ಬೆಟ್ಟ ಪ್ರದೇಶಗಳಲ್ಲಿ ನೆಲೆಸಿರುವ ಮಂದಿಯ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿರುವ ಕ್ರಮಗಳು ಜಿಲ್ಲಾಡಳಿತದ ಮುಂದಿರುವ ಬಹುದೊಡ್ಡ ಸವಾಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಎಸ್ಪಿ ಕ್ಷಮಾ ಮಿಶ್ರ, ಸಿಇಒ ಭಂವರ್ ಸಿಂಗ್ ಮೀನಾ, ಡಿಎಫ್‍ಓ ಪ್ರಭಾಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.