ಕೊಡವರು ಕೊಡಗಿಗೆ ಸೀಮಿತವಾದ ಅದಿಮ ಸಂಜಾತ ಬುಡಕಟ್ಟು ಕುಲ ಎನ್ನುವುದು ನಿರ್ವಿವಾದ. ಈ ಕುರಿತು ಸಾಕಷ್ಟು ಚಾರಿತ್ರಿಕ ದಾಖಲೆಗಳು ಮತ್ತು ಪುರಾವೆಗಳು, ಬ್ರಿಟಿಷರ ಕಾಲದ ಮಾನವಶಾಸ್ತ್ರ ಅಧ್ಯಯನ ಹಾಗೂ 1881 ರಿಂದ 1931 ರವರೆಗೆ ನಡೆದ ಎಲ್ಲಾ ಜನಗಣತಿಗಳಲ್ಲೂ ಕೊಡವರ ಬುಡಕಟ್ಟು ಲಕ್ಷಣ ಸಾಕ್ಷೀಕರಿಸಲ್ಪಟ್ಟಿದೆ.

ಸ್ವತಂತ್ರ ಭಾರತ ಸರಕಾರ ಗುರುತಿಸಿರುವ 645 ಬುಡಕಟ್ಟು ಸಮುದಾಯಗಳಲ್ಲಿ ಕೊಡವರೂ ಸೇರಿದ್ದಾರೆಂಬದು ಮಹತ್ವದ ವಿಚಾರ. ಇದರಲ್ಲಿ 644 ಸಮುದಾಯಗಳು ಈಗಾಗಲೇ ಎಸ್‍ಟಿ ಪಟ್ಟಿಯಲ್ಲಿ ಸೇರಿ ಭದ್ರತೆ ಪಡೆದುಕೊಂಡಿವೆ. ಆದರೆ ಕೊಡವ ಬುಡಕಟ್ಟು ಎಸ್‍ಟಿ ಪಟ್ಟಿಯಲ್ಲಿ ಇನ್ನೂ ಸೇರ್ಪಡೆಯಾಗಲಿಲ್ಲ ಎನ್ನುವುದು ವಿಷಾದದ ಸಂಗತಿ.

ಇಂದಿನ ಯುವ ಸಮುದಾಯ ಕೊಡವರ ತೀವ್ರ ಅತಂತ್ರತೆಯನ್ನು ಅರಿತುಕೊಂಡು ತಮ್ಮ ಬಾಳು, ಭವಿಷ್ಯತನ್ನು ಉಜ್ವಲಗೊಳಿಸಲು ಸ್ವತಂತ್ರ ಭಾರತದ ಸಂವಿಧಾನದಡಿಯಲ್ಲಿ ಎಸ್‍ಟಿ ಪಟ್ಟಿಯಲ್ಲಿ ಸೇರಿದರೆ ಮಾತ್ರ ನಮ್ಮ ಅದೃಷ್ಟ ರೇಖೆ ಉಜ್ವಲಗೊಳ್ಳಬಹುದೆಂಬ ಕಟುಸತ್ಯವನ್ನು ಮನಗಂಡು ವ್ಯಾಪಕ ಹಾಗೂ ಅರ್ಥಪೂರ್ಣ ಹೋರಾಟವನ್ನು ರೂಪಿಸಿರುತ್ತಾರೆ.

ಈ ಹಿನ್ನೆಲೆ ಕೊಡವರ ಬುಡಕಟ್ಟು ಅಂಶಗಳನ್ನು ಪರಿಗಣಿಸಿ ಅವರನ್ನು ಎಸ್‍ಟಿ ಪಟ್ಟಿಗೆ ಸೇರ್ಪಡೆಗೊಳಿಸುವುದು ಮಾನವಶಾಸ್ತ್ರಜ್ಞರು, ಸಂವಿಧಾನ ತಜ್ಞರು ಹಾಗೂ ಸರಕಾರದ ಜವಾವ್ದಾರಿಯಾಗಿದೆ.

ಕೊಡವರಿಗೆ ಬುಡಕಟ್ಟು ಲಕ್ಷಣಗಳ ಅರ್ಹತೆಯಿದ್ದರೆ ಅವರು ಎಸ್‍ಟಿ ಪಟ್ಟಿಗೆ ಸೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕೊಡವರ ಜನಪದೀಯ ಅಂಶಗಳು, ಆಚಾರ, ವಿಚಾರಗಳು ಅಪೂರ್ವ ಮತ್ತು ಅನನ್ಯವಾಗಿದ್ದು, ಇದನ್ನು ಯಾರೇ ಗಮನಿಸಿದರೂ ಕೊಡವರು ಬುಡಕಟ್ಟು ಜನಾಂಗವೆಂಬ ನಿರ್ಧಾರಕ್ಕೆ ಬರುತ್ತಾರೆ.

ಕೊಡವರು ಎಸ್‍ಟಿ ಪಟ್ಟಿಯಲ್ಲಿ ಸೇರ್ಪಡೆಗೆ ಅಪೇಕ್ಷೆ ವ್ಯಕ್ತಪಡಿಸುತ್ತಿರುವುದು ನಮ್ಮ ಜನ್ಮದತ್ತ ಹಕ್ಕು. ಮೂಲಭೂತ ಹಕ್ಕು ಮತ್ತು ಸಂವಿಧಾನಿಕ ಹಕ್ಕಾಗಿದೆ. ಈ ಕುರಿತು ಹಕ್ಕೊತ್ತಾಯ ಮಂಡಿಸುತ್ತಾ ಬಂದಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಗೆ ನಮ್ಮೆಲ್ಲರ ಶುಭಾಶೀರ್ವಾದವಿದೆ.

ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನವು ಕೊಡವರೂ ಸೇರಿದಂತೆ ಭಾರತದ ಎಲ್ಲಾ ದೇಶವಾಸಿಗಳಿಗೂ ಶಾಸನಾತ್ಮಕವಾಗಿ ಆಶ್ರಯ ನೀಡುವ ಶ್ರೇಷ್ಠ ರಾಜ್ಯ ದಾಖಲೆಯಾಗಿದೆ.

ಇಂದು ಪ್ರಜಾಪ್ರಭುತ್ವದಲ್ಲಿ ಕೊಡವರಿಗೆ ಸಂವಿಧಾನದಲ್ಲಿ ಎಲ್ಲಾ ಹಕ್ಕುಗಳನ್ನು ಕೇಳುವ, ಪಡೆಯುವ ಸ್ವಾತಂತ್ರ್ಯವಿದ್ದೇಯಿದೆ. ಅಂತೆಯೇ ಕೊಡವರನ್ನು ವಿರೋಧಿಸುವ ಸ್ವಾತಂತ್ರ್ಯವೂ ಇತರರಿಗಿದೆ. ಆದರೆ ವಿರೋಧಿಸುವ ನೆಪದಲ್ಲಿ ಪೂರ್ವಾಗ್ರಹ ಪೀಡಿತರಾಗಿ ಕೊಡವರ ಅಸ್ತಿತ್ವ ಮತ್ತು ಪೌರಸತ್ವವನ್ನೇ ಪ್ರಶ್ನಿಸಿ (ಡೀಲೆಜಿಟಿಮೈಸ್) ಕೊಡವರ ತೇಜೋವಧೆ ಮಾಡುತ್ತಿರುವುದು ಆಕ್ಷೇಪಾರ್ಹ. ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ಎಸ್‍ಟಿ ಪಟ್ಟಿಗೆ ಸೇರಿಸಬೇಕೆಂಬ ಆಶೋತ್ತರದಲ್ಲಿ ವಿಚಲಿತರಾಗದೆ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂಬುದು ಅಖಿಲ ಕೊಡವ ಸಮಾಜವೂ ಸೇರಿದಂತೆ ಜಗತ್ತಿನ ಎಲ್ಲಾ ಕೊಡವರ ಅಭಿಲಾಶೆ ಮತ್ತು ಸದಾಶಯವಾಗಿದೆ.

? ಮಾತಂಡ ಸಿ. ಮೊಣ್ಣಪ್ಪ, ಅಧ್ಯಕ್ಷರು,

ಅಖಿಲ ಕೊಡವ ಸಮಾಜ, ವೀರಾಜಪೇಟೆ.