ಮಡಿಕೇರಿ, ಸೆ. 8: ಅನಿರೀಕ್ಷಿತವಾದ ಪ್ರಸಂಗದಿಂದಾಗಿ 2020ರ ವರ್ಷ ವಿಶ್ವದ ಜನತೆಗೆ ಕರಾಳತೆಯ ವರ್ಷವಾಗಿ ಮಾರ್ಪಟ್ಟಿದೆ. ಈ ವರ್ಷ ಪ್ರಾರಂಭಗೊಂಡು ಈಗಾಗಲೇ ಎಂಟು ತಿಂಗಳುಗಳು ಸರಿದು ಹೋಗಿವೆ. ಜನವರಿ-ಫೆಬ್ರವರಿ ತಿಂಗಳನ್ನು ಹೊರತುಪಡಿಸಿದರೆ ಆ ಬಳಿಕದಿಂದ ಇಲ್ಲಿಯ ತನಕವೂ ಕೊರೊನಾ ಎಂಬ ಹೆಮ್ಮಾರಿ ಜಗತ್ತನ್ನೇ ಅಲ್ಲೋಲ-ಕಲ್ಲೋಲ ಮಾಡಿತ್ತು. ದೇಶವ್ಯಾಪಿಯಾಗಿ, ವಿಶ್ವವ್ಯಾಪಿಯಾಗಿನ ಸಂಕಷ್ಟ ಪರಿಸ್ಥಿತಿ ಒಂದೆಡೆಯಾದರೆ ಕೊಡಗು ಜಿಲ್ಲೆಯ ಸನ್ನಿವೇಶ ಒಂದಷ್ಟು ವಿಭಿನ್ನ ರೀತಿಯದ್ದು.
ಕೊರೊನಾದ ಆತಂಕದ ನಡುವೆ ಜಿಲ್ಲೆಯ ಮಳೆಗಾಲದ ತೀವ್ರತೆಯೂ ಇದರೊಂದಿಗೆ ಸೇರಿದ್ದು, ಕಳೆದ ಆರು ತಿಂಗಳಿನಿಂದ ಜಿಲ್ಲೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿಯೂ ಅಕ್ಷರಶಃ ನಲುಗಿ ಹೋಗಿದೆ. ಆರಂಭದಲ್ಲಿ ಮಾರ್ಚ್ನಿಂದ ಎದುರಾದ ಲಾಕ್ಡೌನ್, ನಿಷೇಧಾಜ್ಞೆಯಂತಹ ನಿರ್ಬಂಧಗಳಿಂದ ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡಂತಾಗಿತ್ತು.
ಬೇಸಿಗೆ ಸಂದರ್ಭದಲ್ಲಿನ ಕ್ರೀಡಾಕೂಟಗಳ ಸಂಭ್ರಮ ನಡೆಯಲಿಲ್ಲ. ಗ್ರಾಮ-ಗ್ರಾಮಗಳಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಗಳು-ದೇವರ ಉತ್ಸವಗಳು ಜರುಗಲಿಲ್ಲ. ವಿಜೃಂಭಣೆಯ ಮದುವೆ ಮತ್ತಿತರ ಶುಭ ಕಾರ್ಯಗಳೂ ಮುಂದೂಡಲ್ಪಟ್ಟವು. ವಿದೇಶಗಳ ಸಂಪರ್ಕ ಕಡಿತ-ಅಂತರ್ರಾಜ್ಯ ಒಡನಾಟ ನಿರ್ಬಂಧ. ರೆಸಾರ್ಟ್, ಹೋಂಸ್ಟೇ, ಬಾರ್ಗಳು ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳ ಮೇಲೆ ಈ ವರ್ಷ ವ್ಯತಿರಿಕ್ತವಾದ ಪರಿಣಾಮ ಉಂಟು ಮಾಡಿತ್ತು. ಖಾಸಗಿ ಬಸ್ಗಳು, ಸರಕಾರಿ ಸಾರಿಗೆ, ಇನ್ನಿತರ ವಾಹನಗಳ ಚಟುವಟಿಕೆಗಳಿಗೂ ‘ಬ್ರೇಕ್’ ಬಿದ್ದು, ಜನತೆ ಬದುಕು ಸಾಗಿಸಲೇ ಜಂಜಾಟ ಅನುಭವಿಸಬೇಕಾಗಿತ್ತು.
ಇದೀಗ ಆರು ತಿಂಗಳ ಬಳಿಕ ಬಹುತೇಕ ನಿರ್ಬಂಧಗಳು ಸಡಿಲಿಕೆಗೊಳ್ಳುತ್ತಾ ಬರುತ್ತಿದ್ದು, ಸುದೀರ್ಘ ಅಂತರದ ಬಳಿಕ ಜಿಲ್ಲೆ ಸಹಜತೆಯನ್ನು ಕಾಣಲು ಯತ್ನಿಸುತ್ತಿದೆ.
ಸಹಜ ಚಟುವಟಿಕೆಗಳಿಗೆ ಪ್ರಸ್ತುತ ಅವಕಾಶ ದೊರೆತಿದ್ದರೂ ಹಿಂದಿನ ವರ್ಷಗಳಂತೆ ಇವು ಇನ್ನಷ್ಟೆ ಬಿರುಸು ಕಾಣಬೇಕಿದೆ. ಮುಚ್ಚಲ್ಪಟ್ಟಿರುವ ಅನೇಕ ಹೊಟೇಲ್ಗಳು, ಅಂಗಡಿಗಳು ಇನ್ನೂ ಬಾಗಿಲು ತೆಗೆದಿಲ್ಲ. ಸರಕಾರಿ ಬಸ್ಗಳ ಓಡಾಟ ಇದೀಗ ಮೆಲ್ಲ ಮೆಲ್ಲಗೆ ಶೇ. 60 ರಷ್ಟಕ್ಕೆ ಮಾತ್ರ ತಲುಪಿದ್ದರೆ ಖಾಸಗಿ ಬಸ್ಗಳನ್ನು ಹೆಚ್ಚಾಗಿ ಅವಲಂಭಿತವಾಗಿರುವ ಜಿಲ್ಲೆಯಲ್ಲಿ ಈ ಬಸ್ಗಳ ಓಡಾಟ ಇನ್ನೂ ಬೆರಳೆಣಿಕೆಯಷ್ಟು ಮಾತ್ರ ಆರಂಭವಾಗಿದೆ.
ಶಾಲಾ-ಕಾಲೇಜುಗಳ ಆರಂಭಕ್ಕೆ ಇನ್ನೂ ಹಲವು ಸಮಯ ಕಾಯುವಂತಾಗಿದೆ. ಇದೀಗ ಸೆ. 1 ರಿಂದ ಬಾರ್ಗಳಲ್ಲಿ ಹಿಂದಿನಂತೆ ಸೇವೆಗೆ ಅವಕಾಶ, ಕ್ಲಬ್ಗಳ ಆರಂಭಕ್ಕೆ ಅನುಮತಿ ದೊರೆತಿದೆಯಾದರೂ ಒಂದಷ್ಟು ನಿಯಮಗಳನ್ನು ಪಾಲಿಸಬೇಕಿದೆ.
ಈ ನಡುವೆ ಎದುರಾದ ಅತಿವೃಷ್ಟಿ-ಬಿರುಗಾಳಿಯ ಪರಿಸ್ಥಿತಿಯಿಂದಾಗಿಯೂ ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗಿನ ಜನರು ತತ್ತರಿಸಿ ಹೋಗಿದ್ದಾರೆ. ನಷ್ಟ ಪರಿಹಾರಕ್ಕಾಗಿ ಜನರು ಆಡಳಿತ ವ್ಯವಸ್ಥೆಯೊಂದಿಗೆ ಪರಿತಪಿಸುತ್ತಿದ್ದು, ಜನ-ಜೀವನ ಹಿಂದಿನ ರೀತಿಯ ಸಹಜತೆಯತ್ತ ಬರಲು ಇನ್ನೂ ಕಾಲಾವಕಾಶ ಬೇಕಾಗಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಎಲ್ಲಾ ರೀತಿಯ ವ್ಯವಹಾರಗಳು ಕುಂಠಿತಗೊಂಡಿರುವುದರಿಂದ ಜನತೆ ಇದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವೂ ಆಗಿದೆ.
ಮತ್ತೆ ಮಳೆಯ ಆತಂಕ
ಜಿಲ್ಲೆಯಲ್ಲಿ ಕಳೆದ ದಿನಗಳಿಂದ ಮಳೆ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣ ಕಂಡುಬಂದಿತ್ತು. ಆದರೆ ಇದೀಗ ಮತ್ತೊಮ್ಮೆ ಹವಾಮಾನದಲ್ಲಿ ಬದಲಾವಣೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆಗಾಗ್ಗೆ ಬಿರುಸಿನ ಮಳೆಯಾಗುತ್ತಿರುವುದು ಆತಂಕ ಮುಂದುವರಿಸಿದೆ.