ವೀರಾಜಪೇಟೆ, ಸೆ. 6: ಕರ್ನಾಟಕ-ಕೇರಳ ನಡುವಿನ ಅಂತರ್ರಾಜ್ಯ ಹೆದ್ದಾರಿ ಪೆರುಂಬಾಡಿ ಬಳಿ ಪ್ರಯಾಣಿಕರಿಂದ ದರೋಡೆಗೆ ಸಂಚು ರೂಪಿಸಿದ್ದ ಅಕ್ರಮ ಕೂಟವೊಂದರ 9 ಮಂದಿಯನ್ನು ಇಲ್ಲಿನ ಪೊಲೀಸರು ಸಕಾಲದಲ್ಲಿ ಸೆರೆ ಹಿಡಿಯುವ ಮೂಲಕ ಭಾರೀ ದುಷ್ಕøತ್ಯ ಸಂಭವಿಸಲಿದ್ದುದ್ದನ್ನು ವಿಫಲಗೊಳಿಸಿದ್ದಾರೆ.ತಮಿಳುನಾಡು, ಕೇರಳ, ಬೆಂಗಳೂರು ಹಾಗೂ ಮೈಸೂರು ಮೂಲದ ಈ ಎಲ್ಲ ಆರೋಪಿಗಳ ವಿರುದ್ಧ ಪೊಲೀಸ್ ಕಾಯ್ದೆ 399 ಹಾಗೂ 402ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಅಲ್ಲದೆ ದುಷ್ಕøತ್ಯಕ್ಕೆ ಬಳಸುತ್ತಿದ್ದ ಎರಡು ವಾಹನಗಳೊಂದಿಗೆ ಮಾರಕಾಸ್ತ್ರಗಳು, ಖಾರದಪುಡಿ ಇತ್ಯಾದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ಕೂಟ ರಚಿಸಿ ಕೊಂಡಿರುವ ಬಂಧಿತರು, ಎರಡು ಕಾರುಗಳಲ್ಲಿ ಕೊಡಗಿಗೆ ಬಂದಿದ್ದಾರೆ. ನಿನ್ನೆ ಬೆಳಗ್ಗಿನ ಜಾವ ಕೆಎಲ್ 01 ಬಿವೈ 833 ಸಂಖ್ಯೆಯ ಕೆಂಪು ಕಾರು ಹಾಗೂ ಕೆಎ 26 ಎಂ 3833 ಬಿಳಿ ಬಣ್ಣದ ಮತ್ತೊಂದು ಕಾರು ಪೆರುಂಬಾಡಿ ಮಾರ್ಗದ ಹೊಟೇಲ್‍ವೊಂದರ ಬಳಿ ಗೋಚರಿಸಿದೆ. ಈ ಕಾರಿನಲ್ಲಿದ್ದ ಒಟ್ಟು ಒಂಬತ್ತು ಮಂದಿ ಸಂಶಯಾಸ್ಪದ ರೀತಿಯಲ್ಲಿ ಹೊಂಚು ಹಾಕುತ್ತಿರುವ ಕುರಿತು ಪೊಲೀಸರಿಗೆ ಸುಳಿವು ಲಭಿಸಿದೆ.
ಆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಆದೇಶದೊಂದಿಗೆ ಡಿವೈಎಸ್‍ಪಿ ಜಯಕುಮಾರ್ ಮಾರ್ಗದರ್ಶನದಲ್ಲಿ ವೀರಾಜಪೇಟೆ ಪೊಲೀಸ್ ಠಾಣಾಧಿಕಾರಿ ಬೋಜಪ್ಪ ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಈ ಸಂದರ್ಭ ವಾಹನಗಳ ಸಹಿತ ತಪ್ಪಿಸಿಕೊಳ್ಳಲು ಯತ್ನಿಸಿರುವ ಆರೋಪಿಗಳನ್ನು
(ಮೊದಲ ಪುಟದಿಂದ) ಮುಂಜಾವಿನ ಕತ್ತಲೆಯ ನಡುವೆ ಆರ್ಜಿ ಗ್ರಾ.ಪಂ. ವ್ಯಾಪ್ತಿಯ ಪೆರಂಬಾಡಿ ಬಳಿ ಬೆಳಗ್ಗಿನ ಜಾವ 5 ಗಂಟೆಗೆ ಪೊಲೀಸರು ಬಂಧಿಸಿ, ಅವರಿಂದ 2 ಕಾರು, ಕೃತ್ಯಕ್ಕೆ ಬಳಸಲು ತಂದಿದ್ದ ಮಾರಕಾಸ್ತ್ರಗಳು, ಖಾರದ ಪುಡಿ, ಪಾದರಸಗಳನ್ನು ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮುಂದಿನ ಕ್ರಮಕೈಗೊಂಡಿದ್ದಾರೆ.
ಮೈಸೂರಿನ ಬೃಂದಾವನ ಬಡಾವಣೆಯ ಕಿಡ್ಸ್ ಕಾರ್ನರ್ ಶಾಲೆಯ ಮಾಲೀಕ ಡಿ.ಎಚ್. ವಾದಿರಾಜ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿಯ ಸಿ. ನಾರಾಯಣ ಸ್ವಾಮಿ, ಬೆಂಗಳೂರಿನ ಹೆಣ್ಣೂರಿನ ಜಾನ್‍ಪೌಲ್, ಬೆಂಗಳೂರು ವಿದ್ಯಾರಣ್ಯಪುರದ ಜ್ಞಾನೇಂದ್ರ, ಕೇರಳ ಕಣ್ಣೂರು ಜಿಲ್ಲೆಯ ಚಕ್ರಕಳ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಕೆ.ವಿ. ಅಭಿನವ್, ರಾಮನಗರ ಜಿಲ್ಲೆಯ ಫಿಲಂ ಇಂಡಸ್ಟ್ರೀಸ್‍ನ ಅಸೋಸಿ ಯೇಟೆಡ್ ಡೈರೆಕ್ಟರ್ ನಾರಾಯಣಪುರ ನಿವಾಸಿ ಕೆ.ಎಸ್ ಸತೀಶ್, ಕೇರಳದ ಕ್ಯಾಲಿಕಟ್‍ನ ಇಂಜಿನಿಯರಿಂಗ್ ವಿದ್ಯಾರ್ಥಿ ಜಿ. ವೈಷ್ಣವ್, ತಮಿಳು ನಾಡಿನ ಹೊಸೂರಿನ ಸಿ. ಸುರೇಶ್, ತಮಿಳುನಾಡು ಕೃಷ್ಣಗಿರಿಯ ಕೇಬಲ್ ಆಪರೇಟರ್ ಕೆ. ಪುರುಷೋತ್ತಮ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಕಬ್ಬಿಣದ ರಾಡು, ಚಾಕು, ಕತ್ತಿ, ಖಾರದಪುಡಿ, ಸುಮಾರು 8 ಕೆ.ಜಿ. ಪಾದರಸವನ್ನು ವಶಪಡಿಸಿ ಕೊಂಡಿದ್ದಾರೆ. 9 ಜನ ಬಂದಿತರಲ್ಲಿ ಆರೋಪಿ ಪುರುಷೋತ್ತಮನಿಗೆ ಕೊರೊನಾ ಸೊಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದವರನ್ನು ಇಲ್ಲಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ವೇಳೆ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಮೇರೆಗೆ ಮಡಿಕೇರಿ ಕಾರಾಗೃಹಕ್ಕೆ ರವಾನಿಸಿದ್ದಾರೆ.
ಘಟನೆ ವಿವರ: ಆರೋಪಿಗಳು ಕೆಲವು ಸಮಯದಿಂದ ಈ ಕೃತ್ಯ ನಡೆಸುವಂತೆ ಯೋಜನೆ ರೂಪಿಸಿ ಕೊಂಡಿದ್ದಾರೆ. ಕಳೆದ 6 ತಿಂಗಳು ಲಾಕ್‍ಡೌನ್ ಇದ್ದ ಕಾರಣ ಅಂತರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಇದೀಗ ಲಾಕ್‍ಡೌನ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದಾರೆ.
ಸ್ಥಳ ಆಯ್ಕೆ: ದರೋಡೆಕೋರರು ಸಿಕ್ಕಿಬಿದ್ದ ಸ್ಥಳ ಸಮತಟ್ಟಾದ ಜಾಗವಾಗಿದ್ದು, ಮಾಕುಟ್ಟ ಚೆಕ್‍ಪೋಸ್ಟ್ ನಿಂದ ಪೆರುಂಬಾಡಿ ಚೆಕ್‍ಪೋಸ್ಟ್ ವರೆಗೆ 16 ಕಿ.ಮೀ. ಕಡಿದಾದ ತಿರುವಿನಿಂದ ಕೂಡಿದೆ. ಪೆರುಂಬಾಂಡಿ ಜಂಕ್ಷನ್‍ನಿಂದ ಅನತಿ ದೂರದಲ್ಲಿ ಸಮತಟ್ಟಾದ ಜಾಗ ಇರುವುದರಿಂದ ವಾಹನಗಳಲ್ಲಿ ಬರುವವರು ಜಲಬಾಧೆ ಹಾಗೂ ಹೆಂಗಸರು ವಾಂತಿ ಮಾಡಿಕೊಳ್ಳಲು ವಾಹನವನ್ನು ನಿಲ್ಲಿಸುತ್ತಾರೆ. ಆ ಸಂದರ್ಭ ದರೋಡೆ ಮಾಡಲು ಸಂಚು ಹಾಕಿದ್ದರೆಂದು ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ.
ಉತ್ತಮ ಸಮಯ: ಕೇರಳ ರಾಜ್ಯದ ಬಹುತೇಕರು ಕರ್ನಾಟಕದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ಕೇರಳದಲ್ಲಿ ಓಣಂ ಹಬ್ಬ ಆಚರಣೆಗೆಂದು ತೆರಳಿ ರುವ ಮಂದಿ ಮರಳಿ ಕರ್ನಾಟಕಕ್ಕೆ ಬರುವಾಗ ದೊಡ್ಡ ಮೊತ್ತದ ಹಣದೊಂದಿಗೆ ಹಿಂತಿರುಗುತ್ತಾರೆ. ಆ ಸಂದರ್ಭ ದರೋಡೆ ಮಾಡಿದರೆ ಒಳ್ಳೆಯ ಹಣ ಗಳಿಸಬಹುದು ಎಂಬದು ದರೋಡೆಕೋರರ ಪ್ಲಾನ್ ಆಗಿತ್ತು ಎಂದು ಡಿವೈಎಸ್‍ಪಿ ಜಯಕುಮಾರ್ ಮಾಹಿತಿ ನೀಡಿದ್ದಾರೆ. ಇದೀಗ ದುಷ್ಕøತ್ಯ ವಿಫಲಗೊಂಡು ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ನಗರ ಠಾಣಾಧಿಕಾರಿ ಬೋಜಪ್ಪ, ಸಿಬ್ಬಂದಿಗಳಾದ ಎನ್.ಸಿ. ಲೋಕೇಶ್, ಮುಸ್ತಾಫಾ, ಸಂತೋಷ್, ಗಿರೀಶ್, ಮಧು, ಮುನೀರ್, ರಾಜನ್, ಲೋಹಿತ್, ಮಲ್ಲಿಕಾರ್ಜುನ್, ಚಾಲಕ ಯೋಗೇಶ್ ಭಾಗವಹಿಸಿದ್ದರು.